ಕಳೆದ 40 ದಿನಗಳಲ್ಲಿ ಹಾಸನದಲ್ಲಿ ಆದ ಹೃದಯಾಘಾತದ ಸಾವುಗಳ ವಿಚಾರ ಕೇಳಿದ ಮೇಲೆ ಬಹುಶಃ ಎಲ್ಲರ ಎದೆ ನಡುಗಿದೆ. ಪ್ರತಿಯೊಬ್ಬರಿಗೂ ಈ ಸಾವುಗಳ ವಿಚಾರ ಕೇಳಿ ಬದುಕಿನ ಬಗ್ಗೆ ಭರವಸೆ ಹೇಗೆ ಎಂಬ ಚಿಂತೆ ಶುರುವಾಗಿದೆ. ಎಲ್ಲೇ ಹೋದರೂ, ಬಂದರೂ ಜನ ಈ ಹೃದಯಾಘಾತದ ಸಾವುಗಳ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಒಂದು ರೀತಿಯಲ್ಲಿ ಭಯಭೀತರಾಗಿದ್ದಾರೆ ಕೂಡಾ.
ಹಾಸನದಲ್ಲಿ ಹೃದಯಾಘಾತದಿಂದ ಜೀವ ಕಳೆದುಕೊಂಡವರೆಲ್ಲರೂ 40 ವರ್ಷದ ಒಳಗಿನವರು. ಇನ್ನೂ ಜೀವನದ ಕಾಲು ಭಾಗವನ್ನೇ ಕಳೆಯದ ಯುವಕ-ಯುವತಿಯರು ಹೃದಯಘಾತಕ್ಕೊಳಗಾಗಿ ಉಸಿರು ಚೆಲ್ಲಿದ್ದಾರೆ. ಕಳೆದ 40 ದಿನಗಳಲ್ಲಿ ಹಾಸನದಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಹೃದಯಘಾತಕ್ಕೊಳಗಾಗಿ ಜೀವ ತೆತ್ತಿದ್ದಾರೆ. ಹಾಸನದಲ್ಲಾದ ಹೃದಯಾಘಾತದ ಸಾವುಗಳಿಗೆ ರಾಜ್ಯ ಮಾತ್ರವಲ್ಲ ದೇಶವೇ ವಿಷಾದ ವ್ಯಕ್ತಪಡಿಸಿದೆ. ಜೀವನದ ಬಗ್ಗೆ ಹತ್ತು ಹಲವು ಆಸೆಗಳನ್ನಿಟ್ಟುಕೊಂಡು ಬದುಕು ಕಟ್ಟಿಕೊಂಡವರು ಇನ್ನೆಂದೂ ಬಾರದ ಲೋಕಕ್ಕೆ ಪಯಣಿಸಿರುವುದು ದುರಂತ. ಬಹುಶಃ ಈ ಸರಣಿ ಸಾವುಗಳು ಜನರಿಗೆ ಒಂದು ಎಚ್ಚರಿಕೆಯ ಸಂದೇಶವೂ ಹೌದು. ಆದರೆ ಏನು ಎಚ್ಚರಿಕೆ, ಹೃದಯಾಘಾತವಾಗದಂತೆ ತಡೆಯಲು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು ಎಂಬುದೇ ಗೊಂದಲಮಯವಾಗಿದೆ.
ಮಲಗಿದ್ದಲ್ಲೇ ಸಾವು, ಆಟವಾಡುತ್ತಿರುವಾಗ, ಸುಮ್ಮನೇ ಕುಳಿತಿರುವಾಗ, ನಡೆದುಕೊಂಡು ಹೋಗುತ್ತಿರುವಾಗ, ಫಂಕ್ಷನ್‌ಗಳಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ದೃಶ್ಯಗಳು ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿವೆ. ನಟ ಚಿರಂಜೀವಿ ಸರ್ಜಾ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ, ಇತ್ತೀಚೆಗಷ್ಟೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ..ಇವರೆಲ್ಲರ ಹೃದಯಾಘಾತದ ಸಾವುಗಳು ಜನರನ್ನು ಇನ್ನಷ್ಟು ಭಯಭೀತರಾಗುವಂತೆ ಮಾಡಿವೆ. ಅದೇ ಸಾಲಿಗೆ ಈಗ ಹಾಸನದಲ್ಲಿ ಮೇಲಿಂದ ಮೇಲೆ ಆದ ಹೃದಯಾಘಾತದ ಸಾವುಗಳು ಜನರನ್ನು ಇನ್ನಷ್ಟು ಭಯದೆಡೆಗೆ ದೂಡಿರುವುದಂತು ಸತ್ಯ. ಎಳೆಯ ಮಕ್ಕಳಲ್ಲಿಯೂ ಹೃದಯಾಘಾತ ಸಂಭವಿಸುತ್ತಿರುವುದು ಚಿಂತೆಗೀಡು ಮಾಡಿದೆ.
ಕೊರೋನೋತ್ತರದಲ್ಲಿ ಹೃದಯಾಘಾತದಿಂದ ಸಾವುಗಳು ಸಂಭವಿಸುತ್ತಿರುವ ಘಟನೆಗಳು ತೀರಾ ಹೆಚ್ಚಾಗಿದೆ. ಭಾರತದಾದ್ಯಂತ ಇರುವ ಆಸ್ಪತ್ರೆಗಳಿಂದ 2020ರಿಂದೀಚೆಗಿನ ಡೇಟಾ ತೆಗೆದು ನೋಡಿದಾಗ ಶೇ. 50ರಷ್ಟು ಹೃದಯಾಘಾತಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿಯೇ ಸಂಭವಿಸಿದೆ ಎಂದು ನವದೆಹಲಿಯ ಹಿರಿಯ ವೈದ್ಯರೊಬ್ಬರು ಮಾಧ್ಯಮಗಳಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದರು. ಕೊರೋನೋತ್ತರದಲ್ಲಿ ಹೃದಯಾಘಾತಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು ದೆಹಲಿಯ ಆಕಾಶ್ ಹೆಲ್ತ್‌ಕೇರ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕಂಡು ಬಂದಿದೆ. ಆದರೆ ಇದು ಯಾಕಾಗುತ್ತಿದೆ? ಹೆಚ್ಚುತ್ತಿರುವ ಹೃದಯಾಘಾತಗಳಿಗೆ ನಿಜವಾದ ಕಾರಣ ಏನೆಂಬುದೇ ಗೊಂದಲದ ಗೂಡಾಗಿದೆ.
ಯಾವುದೇ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ವ್ಯಕ್ತಿಯನ್ನು ಬದುಕಿಸಲು ಪ್ರಯತ್ನಿಸಬಹುದು. ಆದರೆ ಹೃದಯಾಘಾತ ಬಹುತೇಕ ಘಟನೆಗಳಲ್ಲಿ ಹಠಾತ್ ಆಗಿಯೇ ಸಂಭವಿಸಿದೆ. ಎದೆನೋವು ಕಾಣಿಸಿಕೊಂಡ ಮೊದಲ ಒಂದು ಗಂಟೆ ಗೋಲ್ಡನ್ ಅವರ್ ಎಂದು ಹೇಳಲಾಗುತ್ತದೆಯಾದರೂ, ಈ ಗೋಲ್ಡನ್ ಅವರ್‌ನ್ನು ಸದ್ವಿನಿಯೋಗಪಡಿಸಿಕೊಳ್ಳಲು ಅಸಾಧ್ಯವಾಗುತ್ತಿರುವುದೇ ಹೆಚ್ಚು. ಪಟ್ಟಣಗಳಲ್ಲಿ ಅತಿಯಾದ ಟ್ರಾಫಿಕ್ ಜಾಂನಿಂದಾಗಿ ಗೋಲ್ಡನ್ ಅವರ್ ಒಳಗಡೆ ಆಸ್ಪತ್ರೆ ತಲುಪಲು ಸಾಧ್ಯವಾಗದೇ ಜೀವ ಹೋಗುವ ಘಟನೆ ನಡೆದರೆ, ಹಳ್ಳಿಗಳಲ್ಲಿ ಸರಿಯಾದ ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಪಟ್ಟಣಕ್ಕೆ ರೋಗಿಯನ್ನು ಕರೆ ತರುವಷ್ಟರಲ್ಲಿ ಜೀವ ಹೋಗಿರುತ್ತದೆ. ಕೆಲ ವರ್ಷಗಳಿಂದೀಚೆಗೆ ಮಕ್ಕಳು, ಮಹಿಳೆಯರಲ್ಲಿ ಕೂಡಾ ಹೃದಯಾಘಾತದ ಸಮಸ್ಯೆ ಗಣನೀಯವಾಗಿ ಏರಿಕೆ ಕಂಡಿರುವುದೂ ಕಳವಳಕಾರಿಯಾಗಿದೆ.
ಮೊಬೈಲ್ ಹಿಡಿದುಕೊಂಡು ಎರಡೇ ನಿಮಿಷದಲ್ಲಿ ಆರ್ಡರ್ ಮಾಡಿ ಹತ್ತು ನಿಮಿಷದೊಳಗೆ ಮನೆಗೇ ವಸ್ತುಗಳು ತಲುಪುವಂತಹ ಈ ಕಾಲದಲ್ಲಿ ಒಂದು ಗಂಟೆ ಕಳೆದರೂ ಮನುಷ್ಯನ ದೇಹದ ಅತಿ ಅವಶ್ಯ ಭಾಗವಾದ ಹೃದಯಕ್ಕೆ ಚಿಕಿತ್ಸೆ ತತ್‌ಕ್ಷಣಕ್ಕೆ ಸಿಗುವುದಿಲ್ಲ ಎಂಬುದೇ ವಿಪರ್ಯಾಸ.









ಕೊರೊನಾದ ನಂತರ ಹೃದಯಾಘಾತದ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೊರೊನಾ ಬಾಧಿಸದಂತೆ ತಡೆಯಲು ತೆಗೆದುಕೊಂಡ ಲಸಿಕೆ ಬಗ್ಗೆಯೂ ಹಲವರು ಸಂಶಯ ವ್ಯಕ್ತಪಡಿಸುತ್ತಲೇ ಇದ್ದಾರೆ ಎಂಬುದು ತಿಳಿದ ವಿಚಾರವೇ. ಆದರೆ ಲಸಿಕೆಯೇ ಕಾರಣ ಎಂಬುದು ಸ್ಪಷ್ಟವಾಗಿಲ್ಲ ಮತ್ತು ಈ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿಗಳೂ ಇಲ್ಲ. ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಅಲ್ಲಗಳೆಯುವಂತೆಯೂ ಇಲ್ಲ. ಇನ್ನು ಬದಲಾಗಿರುವ ಜೀವನಶೈಲಿಯೇ ಹೃದಯಾಘಾತಕ್ಕೆ ಕಾರಣ ಎಂಬುದು ಇನ್ನೊಂದು ಕಡೆ ಕೇಳಿ ಬರುತ್ತಿರುವ ಕೂಗು. ಜಂಕ್‌ಫುಡ್‌ಗಳ ಅತಿಯಾದ ಸೇವನೆ, ಧೂಮಪಾನ, ವಿಷಗಾಳಿ ಸೇವನೆ, ಅತಿಯಾದ ಒತ್ತಡ, ಇಂಜೆಕ್ಷನ್ ನಲ್ಲೇ ಬೆಳೆದ ಕೋಳಿಯ ಮಾಂಸ ಸೇವನೆ, ಕಲಬೆರಕೆ ಆಹಾರಗಳ ಸೇವನೆ..ಹೃದಯಾಘಾತಕ್ಕೆ ಕಾರಣ ಎನ್ನುತ್ತಿದೆ ಒಂದು ವರ್ಗ. ಇನ್ನು ಅತಿಯಾದ ಮೊಬೈಲ್ ಬಳಕೆಯಿಂದಾಗಿ ಹೃದಯಾಘಾತ ಸಂಭವಿಸುತ್ತಿದೆ ಎಂಬುದೂ ಇತ್ತೀಚೆಗೆ ಕೇಳಿ ಬರುತ್ತಿರುವ ಮಾತು. ಜಿಮ್‌ನಲ್ಲಿ ವರ್ಕೌಟ್, ತೂಕ ಇಳಿಸಿಕೊಳ್ಳಲು ಮಾಡುವ ಕಸರತ್ತುಗಳು, ದೈಹಿಕ ಚಟುವಟಿಕೆಯಿಲ್ಲದ ಬದುಕು…ಹೃದಯಾಘಾತಕ್ಕೆ ಕಾರಣಗಳಾಗಿರುವುದಕ್ಕೆ ಲೆಕ್ಕವಿಲ್ಲ. ಆದರೆ ನಿಜವಾದ ಕಾರಣ ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ ಎಂಬುದೇ ವಿಪರ್ಯಾಸ.
ಹೃದ್ರೋಗ ಮತ್ತು ಹೃದಯಾಘಾತದಂತಹ ಸಮಸ್ಯೆಗಳು ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ವೈದ್ಯರುಗಳು ಹೇಳುತ್ತಾರೆ. ವರ್ಷಕ್ಕೊಂದು ಸಲವಾದರೂ ಹೃದಯ ತಪಾಸಣೆ ಅಗತ್ಯ ಎಂಬುದು ವೈದ್ಯರ ಮಾತು. ಇನ್ನು ಗ್ಯಾಸ್ಟ್ರಿಕ್‌ನಿಂದಾಗಿ ಎದೆಯಲ್ಲಿ ನೋವು ಕಂಡು ಬಂದರೂ ಅದು ಗ್ಯಾಸ್ಟ್ರಿಕ್‌ನಿಂದಲೇ ಆಗಿರುವುದಾ ಅಥವಾ ಹೃದಯಕ್ಕೆ ಸಂಬಂಧಿಸಿದ ನೋವಾ ಎಂಬುದನ್ನು ಅರಿತುಕೊಳ್ಳಲು ಮನುಷ್ಯರಿಗೆ ಸಾಧ್ಯವಾಗದ ಕಾರಣ ಗೊಂದಲ ಏರ್ಪಡುವುದಿದೆ. ಬೆಂಗಳೂರಿನ ಪ್ರತಿಷ್ಠಿತ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ, ಹೃದಯವಂತ ವೈದ್ಯ ಎಂದೇ ಖ್ಯಾತಿಯಾಗಿರುವ ಡಾ. ಮಂಜುನಾಥ್ ಅವರು ಎದೆಯುರಿ, ಎದೆಭಾರದಂತಹ ಲಕ್ಷಣಗಳಿದ್ದರೂ ನಿರ್ಲಕ್ಷಿಸದೆ ವೈದ್ಯರನ್ನು ಕಾಣಬೇಕು ಎಂದು ಕೆಲ ದಿನಗಳ ಹಿಂದೆ ಹೇಳಿದ್ದರು.
ಸಂಸ್ಕರಿಸಿದ ಆಹಾರ ಮಕ್ಕಳಿಗೆ ವಿಷ
ಮನೆಯಲ್ಲಿ ಮಾಡಿದ ಆಹಾರ ಮಕ್ಕಳಿಗೆ ಒಗ್ಗುವುದಿಲ್ಲ, ಬೇಕರಿ ತಿಂಡಿಯೆಂದರೆ ಪಂಚಪ್ರಾಣ. ಕೇಳಿದಾಗ ಕೊಡಿಸದಿದ್ದರೆ ಸಿಟ್ಟು, ರಾದ್ದಾಂತ, ಗಲಾಟೆ. ಬಹುಶಃ ಇದು ಎಲ್ಲ ತಂದೆ ತಾಯಿಯರ ಗೋಳಿನ ಕಥೆ. ಆದರೆ ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳ ಸಂಖ್ಯೆಯಲ್ಲಿ ಬೇಕರಿಯಲ್ಲಿ ಸಂಸ್ಕರಿಸಿಟ್ಟ ಆಹಾರಗಳ ಪಾಲೂ ಇರಬಹುದಲ್ಲವೇ? ಕವರ್‌ನಲ್ಲಿ ಸೀಲ್ ಮಾಡಿಟ್ಟ ಯಾವುದೇ ಆಹಾರಗಳು ನೈಜ ಆಹಾರಗಳಲ್ಲ, ಅವುಗಳು ಸಂಸ್ಕರಿಸಿದ ಉತ್ಪನ್ನಗಳು. ಅಪರೂಪಕ್ಕೊಮ್ಮೊಮ್ಮೆ ತಿಂದರೆ ತೊಂದರೆ ಆಗದು, ಆದರೆ ಪ್ರತಿದಿನದ ಟಿಫಿನ್ ಬಾಕ್ಸ್‌ಗೆ, ನಿತ್ಯದ ಉಪಾಹಾರಕ್ಕೆ ಇದೇ ಸಂಸ್ಕರಿಸಿದ ಆಹಾರಗಳೇ ಬೇಕೆಂದರೆ, ಚಾಟ್ಸ್ ತಿಂಡಿಗಳಿಗೇ ಮಕ್ಕಳು ಅಂಟಿಕೊಂಡು ಬಿಟ್ಟರೆ ಹೆತ್ತವರು ಮಕ್ಕಳಿಂದ ಆ ಚಟವನ್ನು ಬಿಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಹೃದಯಾಘಾತದ ಏರಿಕೆ ಮನುಷ್ಯನಲ್ಲಿ ಆಘಾತವನ್ನೇ ಸೃಷ್ಟಿ ಮಾಡಿದೆ. ದೈಹಿಕ ವ್ಯಾಯಾಮದ ಕೊರತೆ, ಆರೋಗ್ಯಕ್ಕೆ ಉಪಯುಕ್ತವಾಗುವ ಆಹಾರ ಸೇವನೆಯ ಕೊರತೆಯಿಂದ ಇದು ಸಂಭವಿಸುತ್ತಿದೆ ಎಂದರೆ ಸದಾ ದೈಹಿಕ ಚಟುವಟಿಕೆಯಿಂದಿರುವ, ಆರೋಗ್ಯಭರಿತ ಆಹಾರ ಸೇವಿಸುವ ವ್ಯಕ್ತಿಯೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾನೆ. ಹೀಗಾಗಿ ಹೃದಯಾಘಾತಕ್ಕೆ ನಿಖರ ಕಾರಣ ಏನೆಂಬುದು ಯಾರಿಗೂ ತಿಳಿಯದ ಸತ್ಯ. ತಜ್ಞರಲ್ಲಿಯೂ ಈ ಬಗ್ಗೆ ಗೊಂದಲವಿದೆ. ಒಬ್ಬೊಬ್ಬರು ಒಂದೊಂದು ಕಾರಣ ನೀಡುತ್ತಿರುವುದರಿಂದ ಸಹಜವಾಗಿಯೇ ಗೊಂದಲವಾಗುತ್ತದೆ. ಸದ್ಯಕ್ಕೆ ನಮ್ಮಲ್ಲಿ ಉಳಿದಿರುವ ಮಾರ್ಗವೆಂದರೆ ತಜ್ಞರು ಹೇಳಿದ್ದನ್ನು ಪಾಲಿಸುವುದಷ್ಟೇ. ಕೂತಲ್ಲಿ, ನಿಂತಲ್ಲಿ, ಮಲಗಿದ್ದಲ್ಲಿ ಹಠಾತ್ ಆಗಿಯೇ ಬರುವ ಹೃದಯಾಘಾತದ ಸಾವುಗಳಿಗೆ ಪೂರ್ಣವಿರಾಮ ಸಿಕ್ಕಲಿ ಎಂಬುದಷ್ಟೇ ಸದ್ಯದ ಪ್ರಾರ್ಥನೆ. ಪ್ರತೀ ಜೀವವೂ ಅಮೂಲ್ಯ.

ಧನ್ಯಾ ಬಾಳೆಕಜೆ










