ಕೃಷಿಕ ಸಮಾಜ ಮತ್ತು ಭಾರತೀಯ ಕಿಸಾನ್ ಸಂಘದಿಂದ ಆಯೋಜನೆ
ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ವಿವರಿಸಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ ಕೃಷಿಕರು
ಸುಳ್ಯ ತಾಲೂಕು ಕೃಷಿಕ ಸಮಾಜ ಹಾಗೂ ಭಾರತೀಯ ಕಿಸಾನ್ ಸಂಘ ಸುಳ್ಯ ಇದರ ವತಿಯಿಂದ ಕಾಡು ಪ್ರಾಣಿಗಳ ಉಪಟಳದ ಕುರಿತು ಪರಿಹಾರಕ್ಕಾಗಿ ಅರಣ್ಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ಜು. 3 ರಂದು ಸುಳ್ಯ ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೃಷಿಕ ಸಮಾಜ ಸುಳ್ಯ ಇದರ ಅಧ್ಯಕ್ಷ ಎ.ಟಿ.ಕುಸುಮಾಧರ ರವರು ಪ್ರಾಸ್ತಾವಿಕ ಮಾತನಾಡಿ ” ಇತ್ತೀಚಿನ ದಿನಗಳಲ್ಲಿ ಸುಳ್ಯ ತಾಲೂಕಿನಾದ್ಯಂತ ಕಾಡು ಪ್ರಾಣಿಗಳಿಂದಾಗಿ ಕೃಷಿಕರು ನಾನಾ ರೀತಿಯ ಸಮಸ್ಯೆಗಳನ್ನು ಮತ್ತು ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮಂಗಗಳ ಹಾವಳಿ ನಿರಂತರವಾಗಿದೆ. ಕಲವು ವರ್ಷಗಳಿಂದ ಆನೆಗಳ ಧಾಳಿಯಿಂದ ಕೃಷಿಕರು ಭೀತರಾಗಿದ್ದಾರೆ. ಈ ಸಮಸ್ಯೆಗಳಿಂದ ಕೃಷಿಕರನ್ಬು ಪಾರು ಮಾಡಲು ಇಲಾಖೆ ಏನು ಕ್ರಮ ಕೈಗೊಳ್ಳಬಹುದು ? ನಷ್ಟಕ್ಕೊಳಗಾಗಿರುವ ಕೃಷಿಕರಿಗೆ ಸಂಬಂಧಪಟ್ಟ ಇಲಾಖೆಯಿಂದ ಸಿಗುವ ಪರಿಹಾರವನ್ನು ಸರಳ ನಿಯಮಗಳಿಂದ ಹೇಗೆ ಒದಗಿಸಿಕೊಡಬಹುದು ? ಈ ಎಲ್ಲವುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಈ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ ” ಎಂದರು. ವೇದಿಕೆಯಲ್ಲಿ ಸುಳ್ಯ ವಲಯಾರಣ್ಯಾಧಿಕಾರಿ ಮಂಜುನಾಥ, ಹಾಗೂ ಪುತ್ತೂರು ರೇಂಜರ್ ಕಿರಣ್ ಉಪಸ್ಥಿತರಿದ್ದರು.
ಬಳಿಕ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಿಂದ ಸಭೆಗೆ ಬಂದಿದ್ದ ಕೃಷಿಕರು ಕಾಡು ಪ್ರಾಣಿಗಳ ಉಪಟಳದಿಂದ ಅವರಿಗೆ ಉಂಟಾಗಿರುವ ಸಮಸ್ಯೆಗಳು ಮತ್ತು ಕಷ್ಟ ನಷ್ಟಗಳ ಬಗ್ಗೆ ಮಾತನಾಡಿ ಕೃಷಿ ತೋಟಗಳಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಆನೆ ದಾಳಿ, ಮಂಗಗಳಿಂದ ಉಂಟಾಗುತ್ತಿರುವ ತೊಂದರೆ, ಕಾಡುಕೋಣ,ಕಾಡು ಹಂದಿ, ಕಡವೆ ಸೇರಿದಂತೆ ಇನ್ನಿತರ ಪ್ರಾಣಿಗಳಿಂದ ಕೃಷಿ ಹಾಗೂ ಮನುಷ್ಯರಿಗೆ ಉಂಟಾಗುತ್ತಿರುವ ಉಪಟಳಗಳನ್ನು ಅಧಿಕಾರಿಗಳಿಗೆ ವಿವರಿಸಿ, ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸಿದರು.

ನಿವೃತ್ತ ಶಿಕ್ಷಕ ಹಾಗೂ ಕೃಷಿಕ ಪುರುಷೋತ್ತಮ ಕಿರ್ಲಾಯರವರು ಮಾತನಾಡಿ ” ಕಳೆದ ಹಲವಾರು ತಿಂಗಳುಗಳಿಂದ ನಮ್ಮ ಭಾಗದಲ್ಲಿ ಕಾಡಾನೆಗಳು ಮತ್ತು ಮಂಗಗಳಿಂದಾಗಿ ಕೃಷಿಗೆ ಬಹಳ ತೊಂದರೆ ಉಂಟಾಗುತ್ತಿದೆ.
ಬಾಳೆ ಗಿಡ, ತೆಂಗಿನ ಗಿಡ ಯಾವುದನ್ನೂ ಆನೆಗಳು ಬಿಡುತ್ತಿಲ್ಲ. ಕಿರ್ಲಾಯ ಭಾಗದಲ್ಲಿ ಆನೆಗಳು ಬೀಡು ಬಿಟ್ಟು ಕೃಷಿ ತೋಟಗಳನ್ನು ನಾಶ ಮಾಡುತ್ತಿದೆ. ಸೋಲಾರ್ ಬೇಲಿಗಳನ್ನು ಕಿತ್ತು ಹಾಕಿ ಬುದ್ಧಿವಂತಿಕೆ ತೋರಿಸುತ್ತಿವೆ.
ಇನ್ನೊಂದೆಡೆ ಮಂಗಗಳು ಕೂಡ ತೊಂದರೆ ಕೊಡುತ್ತಿದ್ದು ಅದನ್ನು ಓಡಿಸಲು ತುಂಬಾ ಕಷ್ಟಕರವಾಗಿದೆ. ಕೈ ಯಲ್ಲಿ ಕೋವಿ ಇದ್ದರೆ ಮಾತ್ರ ಅದು ಭಯ ಪಡುವುದು. ಆದ್ದರಿಂದ ನಮ್ಮ ನಮ್ಮ ಕೃಷಿಯ ರಕ್ಷಣೆಗಾಗಿ ಈ ರೀತಿ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರತಿಯೊಬ್ಬ ಕೃಷಿಕರ ಮನೆಗೂ ಕೂಡ ಅರಣ್ಯ ಇಲಾಖೆ ವತಿಯಿಂದ ಬಂದೂಕು ಪರವಾನಿಗೆಯನ್ನು ಕೊಡಿಸಬೇಕು. ಅದು ಬೇಟೆಯಾಡಲು ಅಲ್ಲ. ಕೇವಲ ಪ್ರಾಣಿಗಳನ್ನು ಭಯ ಪಡಿಸಲು” ಎಂದು ಹೇಳಿದರು.
ಸುದರ್ಶನ್ ಪಾತಿಕಲ್ಲು ಮಾತನಾಡಿ ” ನಮ್ಮಲ್ಲಿಯೂ ಕೂಡ ಆನೆಗಳು ಮತ್ತು ಮಂಗಗಳಿಂದಾಗಿ ಭಾರಿ ತೊಂದರೆಗಳು ಉಂಟಾಗುತ್ತಿದೆ. ಕಾಡು ಪ್ರಾಣಿಗಳು ಸುಡುಮದ್ದಿನ ಶಬ್ದದಿಂದ ಹೆದರಿ ಓಡುವುದರಿಂದ ಕೃಷಿಕರಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಓಡಿಸಲು ಅದಕ್ಕೆ ಬೇಕಾದ ಸುಡುಮದ್ದುಗಳನ್ನು ಇಲಾಖೆಯ ವತಿಯಿಂದ ನೀಡಬೇಕು ” ಎಂದರು.
ಬಾಲಚಂದ್ರ ಕಲ್ಚರ್ಪೆಯವರು ಮಾತನಾಡಿ ” ಪೆರಾಜೆ,ಕಲ್ಚೆರ್ಪೆ ಭಾಗದಲ್ಲಿಯೂ ಕೂಡ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು ಆ ಭಾಗದಲ್ಲಿ ಆನೆಗಳು ಬರದ ಹಾಗೆ ಕಂದಕವನ್ನು ನಿರ್ಮಾಣ ಮಾಡ ಬೇಕು ” ಎಂದು ಕೇಳಿಕೊಂಡರು.
ಶ್ರೀಮತಿ ಪುಷ್ಪಾವತಿ ಮೇದಪ್ಪರವರು ಮಾತನಾಡಿ ” ಕಾಡು ಪ್ರಾಣಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಮತ್ತು ತೊಂದರೆಗಳಿಗೆ ಅರಣ್ಯ ಇಲಾಖೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಜನರ ಮತ್ತು ಬೆಳೆಗಳಿಗೆ ರಕ್ಷಣೆ ನೀಡಬೇಕು ” ಎಂದು ಕೇಳಿಕೊಂಡರು.
ಜಗನ್ನಾಥ್ ಜಿ. ಯವರು ತಮ್ಮ ಭಾಗದ ಸಮಸ್ಯೆಗಳನ್ನು ಹೇಳಿಕೊಂಡು ” ಹೈದಂಗೂರು ಭಾಗದಲ್ಲಿ ಆನೆಗಳಿಂದಾಗಿ ಸಮಸ್ಯೆ ಹೆಚ್ಚಾಗುತ್ತಿದೆ. ಈ ಭಾಗದಲ್ಲಿ ರಸ್ತೆಗಳು ಕಾಡು ಪ್ರದೇಶದಿಂದ ಆವರಿಸಿದ್ದು ರಾತ್ರಿ ವೇಳೆ ರಸ್ತೆ ಸರಿಯಾಗಿ ಕಾಣುವುದಿಲ್ಲ.
ಆದ್ದರಿಂದ ಈ ಭಾಗದಲ್ಲಿ ದಾರಿ ದೀಪಗಳನ್ನು ಮತ್ತು ಸೋಲಾರ್ ದೀಪಗಳನ್ನು ಅಳವಡಿಸಿ ಕೊಡುವ ಮೂಲಕ ಪರಿಸರ ಬೆಳಗುವಂತೆ ಮಾಡಬೇಕು” ಎಂದು ಹೇಳಿದರು.















ಚೇತನ್ ಅಡ್ತಲೆಯವರು ಮಾತನಾಡಿ ” ನಮ್ಮಲ್ಲಿ ಆನೆ ಉಪದ್ರ ಮಾತ್ರವಲ್ಲದೆ ಕಡವೆ, ಕಾಡುಕೋಣ ಮುಂತಾದ ಪ್ರಾಣಿಗಳಿಂದಲೂ ತುಂಬಾ ಸಮಸ್ಯೆ ಇದೆ. ಅವುಗಳು ಕೊಕ್ಕೋ ಗಿಡಗಳನ್ನು ಬೆಳೆಯಲು ಬಿಡುತ್ತಿಲ್ಲ. ಕೋಕ್ಕೊ ಗಿಡಗಳನ್ನೇ ತಿಂದು ನಾಶ ಮಾಡುತ್ತಿದೆ” ಎಂದರು.
ಗುಣವತಿ ಕೊಲ್ಲಂತಡ್ಕ, ಲೀಲಾವತಿ ಅರಂಬೂರು, ಶ್ರೀಹರಿ ಮಂಡೆಕೋಲು, ಶಿವಾನಂದ ಕುಕ್ಕುಂಬಳ, ಕಿಶೋರ್ ಕುಮಾರ್, ವಿನಯ್ ಕುಮಾರ್ ಕಂದಡ್ಕ ಇನ್ನೂ ಹಲವಾರು ಕೃಷಿಕರುಗಳು ತಮ್ಮ ಅನುಭವಗಳನ್ನು ಹೇಳಿಕೊಂಡರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ರವರು ಕೃಷಿಕರು ಹೇಳಿರುವ ಎಲ್ಲಾ ಸಮಸ್ಯೆಗಳನ್ನು ಪುಸ್ತಕದಲ್ಲಿ ದಾಖಲಿಸಿಕೊಳ್ಳುತ್ತಿದ್ದರು. ಬಳಿಕ ಮಾತನಾಡಿದ ಅವರು ” ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಭಾರತೀಯ ಕಿಸಾನ್ ಸಂಘ ಮತ್ತು ಕೃಷಿಕ ಸಮಾಜದವರು ಉತ್ತಮ ಕಾರ್ಯ ಮಾಡಿದ್ದಾರೆ. ಸಮಸ್ಯೆಗೊಳಗಾಗಿರುವ ತಾಲೂಕಿನ ಎಲ್ಲಾ ಕೃಷಿಕರನ್ನು ಮತ್ತು ನಾವು ಅಧಿಕಾರಿಗಳನ್ನು ಒಂದುಗೂಡಿಸಿ ಪರಸ್ಪರ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಳ್ಳಲು ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದೀರಿ” ಎಂದರಲ್ಲದೆ, ” ಮೊದಲೆಲ್ಲಾ ನಮ್ಮ ಗ್ರಾಮ ಭಾಗದಲ್ಲಿ ಕಾಡು ಮತ್ತು ನಾಡಿನ ನಡುವೆ ಬಹಳ ಅಂತರವಿತ್ತು. ಮೊದಲಿನ ಕಾಲದಲ್ಲಿ ಊರು ಮತ್ತು ಕಾಡಿನ ನಡುವೆ ಇದ್ದ ಕುಮ್ಕಿ ಜಾಗಗಳು, ಬಫರ್ ಜೋನ್ಗಳು ಇಂದು ಬಹುತೇಕ ಈಗ ಕಂಡು ಬರುತ್ತಿಲ್ಲ.
ಈ ಕಾರಣದಿಂದಾಗಿ ಕಾಡುಪ್ರಾಣಿಗಳು ಏಕಾಏಕಿ ಊರುಗಳಿಗೆ ಲಗ್ಗೆ ಇಡುವಂತೆ ಆಗಿದೆ. ಕಾಡು ಪ್ರಾಣಿಗಳು ಅದರ ಜಾಗವನ್ನು ಮೀರಿ ಹೊರಗಡೆ ಬರುವುದಿಲ್ಲ. ಆನೆಗಳು ಅದರ ಜಾಗದಿಂದ ಕಾಡು ಪ್ರದೇಶದಿಂದ ಸುಮಾರು 500 ಮೀಟರ್ ನಷ್ಟು ಮಾತ್ರ ದೂರಕ್ಕೆ ಬರುತ್ತಿದ್ದು ಅದು ಈಗ ನಮಗೆ ಪೇಟೆಗೆ ಬಂದ ಹಾಗೆ ಅಥವಾ ನಮ್ಮ ಊರಿಗೆ ಬಂದ ಹಾಗೆ ಕಾಣುತ್ತದೆ. ಸಹಜವಾಗಿ ಕಾಡುಪ್ರಾಣಿಗಳು ಆಹಾರವನ್ನು ಅರಸಿ ಊರಿಗೆ ಬರುವುದು ಇದೆ. ಹಾಗೆ ಬಂದ ದಿನಗಳಲ್ಲಿ ಅದಕ್ಕೆ ಸ್ವಾದಿಷ್ಟವಾದ ಆಹಾರಗಳು ಸಿಕ್ಕಿದರೆ ಮತ್ತೆ ದಿನಗಳ ಬಳಿಕ ಅಥವಾ ವರ್ಷಗಳ ಬಳಿಕ ಅದೇ ಜಾಗಕ್ಕೆ ಬರುವುದು ವಾಡಿಕೆ ಮಾಡಿಕೊಳ್ಳುತ್ತವೆ. ಆದ್ದರಿಂದ ನಮ್ಮ ನಮ್ಮ ಕೃಷಿ ಜಾಗಗಳನ್ನು ನಾವು ಬೇಲಿ ನಿರ್ಮಿಸುವ ಮೂಲಕ ರಕ್ಷಿಸಿ ಕೊಳ್ಳಬೇಕಾಗಿದೆ. ಅದಕ್ಕಾಗಿ ಸರ್ಕಾರದಿಂದ ಸೋಲಾರ್ ಬೇಲಿ ಅಳವಡಿಸಲು ಮತ್ತು ರಕ್ಷಣೆ ಪಡೆಯಲು ಯೋಜನೆಗಳು ಲಭ್ಯವಿದ್ದು ಕೃಷಿಕರು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ” ಎಂದು ಹೇಳಿದರು. ” ಮನುಷ್ಯರಿಗೂ ಸಮಾಜದಲ್ಲಿ ಯಾವ ರೀತಿ ಜೀವಿಸುವ ಹಕ್ಕು ಇದೆಯೋ ಅದೇ ರೀತಿ ಪ್ರಾಣಿಗಳಿಗೂ ಕೂಡ ಅದೇ ರೀತಿಯ ಹಕ್ಕನ್ನು ಕಾನೂನು ಕಾಯ್ದೆಯಲ್ಲಿ ನೀಡಲಾಗಿದೆ. ಆದ್ದರಿಂದ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ದ್ವೇಷದ ಚಿಂತನೆ ಬಿಟ್ಟು ಅವರವರ ಹಕ್ಕಿನ ಅನುಗುಣವಾಗಿ ಇರಬೇಕಾಗುತ್ತದೆ. ಇಲಾಖೆಯಿಂದ ಜನರ ಮತ್ತು ಕೃಷಿ ರಕ್ಷಣೆಗೆ ಬೇಕಾದ ಎಲ್ಲಾ ಕೆಲಸ ಕಾರ್ಯಗಳನ್ನು ನಾವು ಮಾಡುತ್ತಿದ್ದೇವೆ. ಇನ್ನೂ ಹೆಚ್ಚಿನದಾಗಿ ಯಾವ ರೀತಿಯಲ್ಲಿ ಮಾಡಬಹುದು ಮತ್ತು ಇದಕ್ಕೆ ಪರಿಹಾರ ಮಾರ್ಗವನ್ನು ಯಾವ ರೀತಿ ಕಂಡುಕೊಳ್ಳಬಹುದು ಎಂಬುದನ್ನು ಕೃಷಿಕರು ಹಾಗೂ ಅಧಿಕಾರಿಗಳು ಪರಸ್ಪರ ಚರ್ಚಿಸಿ ನಿರ್ಧರಿಸಬೇಕು ” ಎಂದರು.
ವೇದಿಕೆಯಲ್ಲಿ ಸುಳ್ಯ ತಾಲೂಕು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್, ಭಾ.ಕಿ.ಸಂ. ದಕ್ಷಿಣ ಪ್ರಾಂತ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುಬ್ರಾಯ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಚಂದ್ರಾ ಕೋಲ್ಚಾರ್, ಭಾಕಿ.ಸಂ. ಜಿಲ್ಲಾ ಜೊತೆ ಕಾರ್ಯದರ್ಶಿ ರಾಮ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಮೋಹನ್ ರಾಮ್ ಸುಳ್ಳಿ ಸ್ವಾಗತಿಸಿ, ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ಭಟ್ ವಂದಿಸಿದರು.
ತಾಲೂಕಿನ ವಿವಿಧ ಭಾಗಗಳಿಂದ ಬಂದಂತಹ ಸುಮಾರು 50ಕ್ಕೂ ಹೆಚ್ಚು ಕೃಷಿಕರು ಸಭೆಯಲ್ಲಿ ಭಾಗವಹಿಸಿದ್ದರು.










