ಪತ್ರಿಕಾಗೋಷ್ಠಿಯಲ್ಲಿ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾಹಿತಿ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಅರೆಭಾಷೆ ಜಂಬರ ಆಟಿಕೂಟ ಕಾರ್ಯಕ್ರಮ ಆ. 10ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನಡೆಯಲಿದೆ ಎಂದು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆ.2 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕಾರ್ಯಕ್ರಮದ ವಿವರ ನೀಡಿದರು.
ಬೆಳಿಗ್ಗೆ 10 ಗಂಟೆಗೆ ಪ್ರಗತಿಪರ ಕೃಷಿಕ ಎ.ಆರ್.ಗಂಗಾಧರ ಗೌಡ ಅಡ್ಕಾರುರವರು ಜಂಬರಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಅಡ್ಕಾರು ಉಪಸ್ಥಿತರಿರುವರು.















ಬೆಳಿಗ್ಗೆ 10.30 ರಿಂದ ಕನಕಮಜಲಿನ ಶ್ರೀ ಕನಕದಾಸ ಮಕ್ಕಳ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಲಿದೆ. 11ರಿಂದ ಸ್ಪರ್ಧಾ ಕಾರ್ಯಕ್ರಮ ಆರಂಭವಾಗಲಿದ್ದು, ಮಹಿಳೆಯರಿಗೆ ಶೋಭಾನೆ ಸ್ಪರ್ಧೆ, ಪುರುಷರಿಗೆ ಕಾಯಿಗೆ ಕಲ್ಲು ಹೊಡೆಯುವುದು, 50ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಅಜ್ಜಿಕಥೆ, ಸಾರ್ವಜನಿಕರಿಗೆ ನೇಜಿಹಾಡು ಸ್ಪರ್ಧೆ, 5ರಿಂದ 10 ವರ್ಷದ ಒಳಗಿನ ಮಕ್ಕಳಿಗೆ ಲಕ್ಕಿಗೇಮ್ ನಡೆಯಲಿದೆ. ಮಧ್ಯಾಹ್ನ ಆಟಿ ಗಮ್ಮತ್ತ್ನ ಊಟ ನಡೆದ ಬಳಿಕ ಸ್ಥಳಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಮಧ್ಯಾಹ್ನ 2.30ರಿಂದ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿರುವರು. ಕುಕ್ಕೆಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಸಾಧಕರನ್ನು ಸನ್ಮಾನಿಸಲಿದ್ದಾರೆ. ಸುಳ್ಯ ಎಂಜಿಎಂ ವಿದ್ಯಾ ಸಂಸ್ಥೆಗಳ ಸಂಚಾಲಕ ದೊಡ್ಡಣ್ಣ ಬರೆಮೇಲು ಆಟಿ ಬಗ್ಗೆ ಮಾತನಾಡಲಿದ್ದಾರೆ. ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಕಾಮತ್ ಬಹುಮಾನ ವಿತರಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು, ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ್, ನಿವೃತ್ತ ಯೋಧ ಅಡ್ಡಂತ್ತಡ್ಕ ದೇರಣ್ಣ ಗೌಡ, ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯೆ ತಿರುಮಲೇಶ್ವರಿ ಅರ್ಭಡ್ಕ, ಅಡ್ಕಾರು ದೇವಸ್ಥಾನದ ಮೊಕ್ತೇಸರ ಗುರುರಾಜ್ ಭಟ್, ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕ, ಅರೆಭಾಷೆ ಅಕಾಡೆಮಿ ಸದಸ್ಯ ಡಾ. ಎನ್. ಎ. ಜ್ಞಾನೇಶ್,ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯೆ ಶ್ರೀಮತಿ ತಿರುಮಲೇಶ್ವರಿ ಆರ್ಭಡ್ಕ, ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದರು.










