ಪಡ್ಪಿನಂಗಡಿ ಬಳಿ ಶಾಲಾ ಬಾಲಕಿಯ ಮೇಲೆ ವ್ಯಕ್ತಿಯಿಂದ ಹಲ್ಲೆ

0

ವಾರ ಕಳೆದರೂ ಆರೋಪಿಯನ್ನು ಬಂಧಿಸದ ಪೋಲೀಸರು

ಬಂಧನಕ್ಕೆ ಆಗ್ರಹಿಸಿ ಠಾಣೆಯ ಮೆಟ್ಟಿಲಲ್ಲಿ ಕುಳಿತಿರುವ ಸರಸ್ವತಿ ಕಾಮತ್

ಅಂಗವಿಕಲ ಶಾಲಾಬಾಲಕಿಯ ಮೇಲೆ ಹಲ್ಲೆಗೈದ ಆರೋಪಿಯನ್ನು ಬಂಧಿಸಲು ಒತ್ತಾಯಿಸಿ ಜಿ.ಪಂ. ಮಾಜಿ ಸದಸ್ಯೆ ಸರಸ್ವತಿ ಕಾಮತ್ ಅವರು ಬಾಲಕಿಯ ತಾಯಿ ಮತ್ತು ಮನೆಯವರ ಜೊತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಮೆಟ್ಟಿಲಲ್ಲಿ ಕುಳಿತು ಧರಣಿ ಆರಂಭಿಸಿರುವ ಘಟನೆ ವರದಿಯಾಗಿದೆ.


ಆಗಸ್ಟ್ 1 ರಂದು ಕರಿಕ್ಕಳ ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯೊಬ್ಬಳು ಸಂಜೆ ಶಾಲೆ ಬಿಟ್ಟು ಎಡಮಂಗಲ ಗ್ರಾಮದ ಪಂಜಿಗುಡ್ಡೆ ಎಂಬಲ್ಲಿರುವ ತನ್ನ ಮನೆಗೆ ಹೋಗುತ್ತಿರುವಾಗ ಐವತ್ತೊಕ್ಲು ಗ್ರಾಮದ ಬೊಳುಗಲ್ ಗುಡ್ಡೆ ಎಂಬಲ್ಲಿಯ ಈಶ್ವರ ನಾಯ್ಕ ಎಂಬ ವ್ಯಕ್ತಿ ಕಾದು ಕುಳಿತು ಹೊಡೆದು ಹಲ್ಲೆ ನಡೆಸಿದ್ದರು. ಈ ಬಗ್ಗೆ ಮರುದಿನ ಬಾಲಕಿಯ ತಂದೆ ದೇವರಾಜ ಗೌಡರು ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದರು. ಪೋಲೀಸರು ಆರೋಪಿಯನ್ನು ಠಾಣೆಗೆ ಕರೆತಂದು ಕೂರಿಸಿ ಬಿಟ್ಟು ಕಳಿಸಿದ್ದರೆನ್ನಲಾಗಿದೆ.

ಕೇಸು ದಾಖಲಿಸಿಕೊಂಡಿದ್ದರೂ ಆರೋಪಿಯನ್ನು ಪೊಲೀಸರು ಬಂಧಿಸದೆ ನಿರ್ಲಕ್ಷ್ಯ ವಹಿಸಿದ್ದಾರೆಂದೂ, ಆರೋಪಿಯ ಬಂಧನಕ್ಕೆ ಒತ್ತಾಯಿಸಿದಾಗ ಎಸ್‌.ಐ.ಯವರು ಉಡಾಫೆಯ ಉತ್ತರ ನೀಡುತ್ತಿದ್ದಾರೆಂದೂ ಆರೋಪಿಸಿ ಜಿ.ಪಂ. ಮಾಜಿ ಸದಸ್ಯೆ ಸರಸ್ವತಿ ಕಾಮತ್‌ರವರು ಇಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಮೆಟ್ಟಿಲುಗಳ ಮೇಲೆ ಧರಣಿ ಕುಳಿತಿದ್ದಾರೆಂದು ತಿಳಿದು ಬಂದಿದೆ.


ಆರೋಪಿಯನ್ನು ಬಂಧಿಸದೆ ಇಲ್ಲಿಂದ ಕದಲುವುದಿಲ್ಲವೆಂದು ಸರಸ್ವತಿ ಕಾಮತ್ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿರುವುದಾಗಿ ತಿಳಿದುಬಂದಿದೆ.