2024ರಲ್ಲಿ ಸಂಪಾಜೆಯ ಗೂನಡ್ಕದಲ್ಲಿ ನಡೆದ ಅಪಘಾತ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಕಾರು ಚಾಲಕ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿ, ಶಿಕ್ಷೆ ವಿಧಿಸಿದೆ.
ಆಪಾದಿತನಾದ ವಿಷ್ಣು 2024 ಎಪ್ರಿಲ್ 25 ರಂದು ಕೆಎ 21 ಇಡಿ 0884 ನೇ ಮೋಟಾರ್ ಸೈಕಲ್ ನಲ್ಲಿ ಅವಿನ್ ಸವಾರನಾಗಿ ದರ್ಶನ್ ಸಹಸವಾರನಾಗಿ ಮಡಿಕೇರಿಯಿಂದ ಅರಂತೋಡಿಗೆ ಬರುತ್ತಿದ್ದಾಗ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ ಎಂಬಲ್ಲಿಗೆ ಸಮಯ ಸುಮಾರು 23:45 ಗಂಟೆಗೆ ತಲುಪುತ್ತಿದ್ದಂತೆ ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಕಾರಿನ ಚಾಲಕನಾದ ವಿಷ್ಣು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ತೀರ ಬಲಬದಿಗೆ ಕಾರನ್ನು ಚಾಲನೆ ಮಾಡಿ, ಮೋಟಾರ್ ಸೈಕಲ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ದರ್ಶನ್ ಹಾಗೂ ಅವಿನ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದವರನ್ನು ಸ್ಥಳೀಯರು ಉಪಚರಿಸಿ ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸಹಸವಾರ ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಮೃತ ಪಟ್ಟಿರುತ್ತಾರೆ.ಸವಾರನ ಬಲಕೈಗೆ ಹಾಗೂ ದೇಹದ ಇತರ ಭಾಗಗಳಿಗೆ ಗಾಯವಾಗಿರುತ್ತದೆ.
ಈ ಪ್ರಕರಣದ ವಿಚಾರಣೆಯು ಸುಳ್ಯ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರು ನಡೆಸಿ ಆರೋಪಿಯನ್ನು ಆಗಸ್ಟ್ 14 , 2025 ರಂದು ದೋಷಿ ಎಂದು ತೀರ್ಪು ನೀಡಿ ಈ ಕೆಳಕಂಡಂತೆ ಶಿಕ್ಷೆ ಪ್ರಕಟಿಸಿರುತ್ತಾರೆ.









ಕಲಂ 279 ರಡಿಯಲ್ಲಿ ಆರೋಪಿತನಿಗೆ 3 ತಿಂಗಳುಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.1000/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ ಒಂದು ತಿಂಗಳುಗಳ ಕಾಲ ಹೆಚ್ಚುವರಿ ಶಿಕ್ಷೆ, ಕಲಂ 337 ರಡಿಯಲ್ಲಿ ಆರು ತಿಂಗಳ ಕಾಲ ಕಾರಾಗೃಹ ವಾಸ ಮತ್ತು ರೂ.500/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ ಒಂದು ತಿಂಗಳ ಕಾಲ ಹೆಚ್ಚುವರಿ ಶಿಕ್ಷೆ, ಕಲಂ 338 ರಡಿಯಲ್ಲಿ ಒಂದು ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಮತ್ತು ರೂ.1000/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ ಮೂರು ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ, ಕಲಂ 304 ಎ ರಡಿಯಲ್ಲಿ ಒಂದು ವರ್ಷಗಳ ಸಾದಾ ಕಾರಾಗೃಹ ವಾಸ ಮತ್ತು ರೂ.10000/- ದಂಡ,ದಂಡ ಕಟ್ಟಲು ತಪ್ಪಿದ್ದಲ್ಲಿ ಮೂರು ತಿಂಗಳುಗಳ ಹೆಚ್ಚುವರಿ ಶಿಕ್ಷೆ.
ಮೇಲೆ ವಿಧಿಸಲಾದ ಶಿಕ್ಷೆಯನ್ನು ಏಕಕಾಲಕ್ಕೆ ಜಾರಿಗೊಳಿಸತಕ್ಕದ್ದು ಎಂದು ನ್ಯಾಯಾಧೀಶರು ಆದೇಶ ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ನಡೆಸಿ, ವಾದ ಮಂಡಿಸಿರುತ್ತಾರೆ.










