ಡಾ. ದಾಮ್ಲೆಯವರಿಗೆ ಉಡುಪಿಯಲ್ಲಿ ತುಳುನಾಡ ಸುಶಾಸನ ಗೌರವ ಪ್ರದಾನ

0

ಯಕ್ಷಗಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆಸಲ್ಲಿಸಿರುವ ಸುಳ್ಯದ ಡಾ. ಚಂದ್ರಶೇಖರ ದಾಮ್ಲೆಯವರ ಸಾಧನೆಗಳನ್ನು ಗುರುತಿಸಿ ಉಡುಪಿಯ ಸುಶಾಶನ ಸಂಘಟನೆಯ ಪ್ರಸ್ತುತಿಯಿಂದ “ತುಳುನಾಡ ಸುಶಾಸನ ಗೌರವಪ್ರಶಸ್ತಿ” ಪ್ರದಾನ ಮಾಡಲಾಯಿತು.

ಉಡುಪಿಯ ಪ್ರಸಿದ್ಧ ಸಮಾಜ ಸೇವಕ ನಾಡೋಜ ಡಾ. ಜಿ ಶಂಕರ್, ಪ್ರವರ್ತಕರು, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಉಡುಪಿ, ಶ್ರೀ ವೇಣುಧರ ಶೆಟ್ಟಿ, ಕಲಾಪೋಷಕರು, ಉಡುಪಿ ಯಕ್ಷಗಾನ ಕಲಾರಾಧಕ ಸುಧಾಕರ ಆಚಾರ್ಯ ಕುಟುಂಬದವರು ಸೇರಿ ಈ ಗೌರವ ಸಮರ್ಪಣೆಯನ್ನು ನೆರವೇರಿಸಿದರು. ಪ್ರಾಧ್ಯಾಪಕ ಮತ್ತು ಯಕ್ಷಗಾನ ಅರ್ಥಧಾರಿ ಪ್ರೊ. ಪವನ್ ಕಿರಣ್ ಕೆರೆಯವರು ಅಭಿನಂದನಾ ಭಾಷಣ ಮಾಡಿದರು. ಸುಳ್ಯದಲ್ಲಿ ಪ್ರಾಧ್ಯಾಪಕನಾಗಿ ಕಾಲೇಜು ಮಕ್ಕಳಿಗೆ ಯಕ್ಷಗಾನ ನಿರ್ದೇಶನದಿಂದ ತೊಡಗಿ, ತೆಂಕುತಿಟ್ಟು ವೇದಿಕೆಯನ್ನು ಸ್ಥಾಪಿಸಿ, ಮಕ್ಕಳ ಮೇಳವನ್ನು ನಡೆಸಿ, ಸುಳ್ಯದ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ತೊಡಗಿಕೊಂಡು ಪ್ರಸ್ತುತ ವಿಶಿಷ್ಟ ರೀತಿಯಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ನಡೆಸುತ್ತಿರುವ ದಾಮ್ಲೆಯವರ ಸಾಧನೆಗಳನ್ನು ಅವರು ವಿವರಿಸಿದರು.

ಸನ್ಮಾನಕ್ಕೆ ಉತ್ತರಿಸಿದ ಡಾ. ದಾಮ್ಲೆಯವರು ತನ್ನ ಸಾಧನೆಗೆ ಸುಳ್ಯದಲ್ಲಿ ದೊರಕಿದ ಅವಕಾಶಗಳನ್ನು ವರ್ಣಿಸಿ ಸಹಕರಿಸಿದ ಕುರುಂಜಿಯವರ, ಸಹಉದ್ಯೋಗಿಗಳ, ವಿದ್ಯಾರ್ಥಿಗಳ, ಸ್ನೇಹಿತರ ಹಾಗೂ ಕುಟುಂಬದವರ ಸಹಕಾರಕ್ಕಾಗಿ ಕೃತಜ್ಞತೆಗಳನ್ನು ಅರ್ಪಿಸಿದರು. ಅಲ್ಲದೆ, ದೂರದ ಉಡುಪಿಯಲ್ಲಿ ತನ್ನನ್ನು ಗುರುತಿಸಿ ಗೌರವಿಸಿದ ಸ್ವಾತಂತ್ರ್ಯ ಯಕ್ಷಗಾನದ ಪ್ರವರ್ತಕ ಶ್ರೀ ಸುಧಾಕರ ಆಚಾರ್ಯರ ತಂಡದವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಪ್ರೊ. ಹರೀಶ್ ಜೋಶಿಯವರು ಕಾರ್ಯಕ್ರಮ ನಿರೂಪಿಸಿದರು. ಕಲಾರಾಧನೆಯ ತ್ರಿಲೋಚನ ಶಾಸ್ತ್ರಿ ಮತ್ತು ರತನ್ ರಾಜ್ ಉಪಸ್ಥಿತರಿದ್ದರು.

ಗೌರವ ಸಮರ್ಪಣೆಯ ಮೊದಲು “ಯಾಜ್ಞ ಸೇನೆ” ತಾಳಮದ್ದಲೆ ಹಾಗೂ ನಂತರ ವೀರ ಅಭಿಮನ್ಯು ಪ್ರದರ್ಶನ ಜರಗಿತು.