ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಗ್ರಹ ವ್ಯಕ್ತ ಪಡಿಸಿದ ಮೊಗೇರ ಸಂಘದ ಮುಖಂಡರುಗಳು
ಸುಮಾರು 800 ವರ್ಷದ ಇತಿಹಾಸ ಹೊಂದಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮೀಂಜಾ ಗ್ರಾಮದ ಪಟ್ಟತಮೊಗರು ಊರಿನ ಹೆಸರನ್ನು ಕಟ್ಟತೂರು ಎಂದು ಇಡಲು ಹೊರಟಿರುವುದು ಖಂಡನೀಯ.
ಆದ್ದರಿಂದ ಯಾವುದೇ ಕಾರಣಕ್ಕೂ ಊರಿನ ಹೆಸರನ್ನು ಬದಲಾಯಿಸಬಾರದು ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಬೇಕೆಂದು ಸುಳ್ಯ ತಾಲೂಕು ಮೊಗೇರ ಸಂಘದ ವತಿಯಿಂದ ಆ 30 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ತಾಲೂಕು ಸಮಿತಿಯ ಅಧ್ಯಕ್ಷ ಕರುಣಾಕರ ಪೆಲ್ತಡ್ಕ ರವರು ‘ಪಟ್ಟತಮೊಗರು ಗ್ರಾಮವು ಅಂದಿನ ಮೊಗೆರ ಅರಸುರವರ ಆಡಳಿತದ ಸಂದರ್ಭದಲ್ಲಿ ಇದ್ದಂತಹ ನಾಮ ವಾಗಿದೆ. ಆ ಊರಿಗೆ ಮತ್ತು ಅಲ್ಲಿಯ ಮಣ್ಣಿಗೆ ಐತಿಹಾಸಿಕವಾದ ಅನೇಕ ಕುರುಹುಗಳು ಇರುವುದು ಇಂದಿಗೂ ಕೂಡ ಅಲ್ಲಿ ಕಾಣಸಿಗುತ್ತದೆ.















ಒಂದು ಗ್ರಾಮದ ಆಚಾರ ವಿಚಾರ ಮತ್ತು ಸಂಸ್ಕೃತಿ ಎಲ್ಲವೂ ಆ ಭಾಗದ ಮೂಲ ವಸ್ತುಗಳಾಗಿರುತ್ತದೆ. ಈಗಿರುವಾಗ ಇತ್ತೀಚಿನ ಯುಗಕ್ಕೆ ಅನುಸಾರವಾಗಿ ಊರಿನ ಹೆಸರನ್ನು ಬದಲಾಯಿಸುವುದು ಅಥವಾ ಅಲ್ಲಿಯ ಪದ್ಧತಿಗಳನ್ನು ಮರೆಮಾಚುವುದು ಸರಿಯಲ್ಲ.
ಆದ್ದರಿಂದ ಯಾವುದೇ ಕಾರಣಕ್ಕೂ ಆ ಊರಿನ ಹೆಸರನ್ನು ಬದಲಾಯಿಸ ಬಾರದು.ಸ್ಥಳೀಯವಾಗಿ ವಾಸಿಸುವ ಸುಮಾರು 80ಕ್ಕೂ ಹೆಚ್ಚು ಮನೆಯ ಸದಸ್ಯರು ಈಗಾಗಲೇ ಸಂಬಂಧಪಟ್ಟ ತಾಲೂಕು ಕಚೇರಿಗೆ ಮತ್ತು ಅಧಿಕಾರಿಗಳಿಗೆ ಹೆಸರು ಬದಲಾವಣೆ ಮಾಡದಂತೆ ಮನವಿ ಮೂಲಕ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.ಅವರ ಆಗ್ರಹಕ್ಕೆ ಸಂಬಂಧ ಪಟ್ಟವರು ಸ್ಪಂದಿಸಬೇಕೆಂದು ಅವರು ಸುಳ್ಯ ತಾಲೂಕು ಸಂಘದ ವತಿಯಿಂದ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಂಘದ ರಾಜ್ಯ ಸಮಿತಿ ಅಧ್ಯಕ್ಷ ನಂದರಾಜ್ ಸಂಕೇಶ್ ರವರು ಮಾತನಾಡಿ ಮುಗೇರ ಸಮುದಾಯವು ಎಲ್ಲಾ ಸಮುದಾಯದ ಜನತೆಯೊಂದಿಗೆ ಶಾಂತಿ ಮತ್ತು ಸೌಹಾರ್ದತೆಯಿಂದ ಕೂಡುತ್ತಾ ಬಂದಿದೆ.ಮೊಗೇರ ಸಮುದಾಯದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಇತರ ಸಮುದಾಯದವನ್ನು ಗಣನೆಗೆ ತೆಗೆದು ಕೊಳ್ಳುವುದು ಮತ್ತು ಅವರ ಆಚಾರ ವಿಚಾರಗಳಿಗೂ ಮನ್ನಣೆ ಕೊಡುವುದು ಇತ್ಯಾದಿಗಳನ್ನು ಅನುಸರಿಸಿಕೊಂಡು ಬಂದಿರು ವಂತಹ ಸಮುದಾಯವಾಗಿದೆ.
ಆದ್ದರಿಂದ 800 ವರ್ಷಗಳ ಇತಿಹಾಸವಿರುವ ಪಟ್ಟತಮೊಗರು ಗ್ರಾಮದ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು. ಮತ್ತು ಇದಕ್ಕೆ ಹೋರಾಟ ಮಾಡುವ ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ನಾವು ಸದಾ ಬೆಂಬಲವಾಗಿ ಇರುತ್ತೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗೌರವ ಅಧ್ಯಕ್ಷರು ಗಳಾದ ಮಹೇಶ್ ಬಂಗ್ಲೆಗುಡ್ಡೆ, ಪ್ರಕಾಶ್ ಉಪಸ್ಥಿತರಿದ್ದರು.










