
ಬೆಳ್ಳಾರೆಯಿಂದ, ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಮಲೆನಾಡು ಗಿಡ್ಡ ತಳಿಯ ಗೋವುಗಳು ರೈಲು ಪ್ರಯಾಣ ಬೆಳೆಸಿವೆ.
ದೇಶೀ ಗೋತಳಿ, ಅಳಿವಿನ ಅಂಚಿಗೆ ಬಂದಿದೆ ಅನ್ನುವ ಕೂಗು ಎಲ್ಲೆಡೆ ಕೇಳಿಸುತ್ತಿದೆ. ಅವುಗಳ ಸಂರಕ್ಷಣೆ ಹಾಗೂ ಸಂವರ್ಧನೆ ಕಾರ್ಯವೂ ನಿಧಾನವಾಗಿ ವೇಗ ಪಡೆಯುತ್ತಿದೆ.
ಗಿರ್ ,ಓಂಗೋಲ್ ಮೊದಲಾದ ತಳಿಗಳು ವಿದೇಶಗಳಲ್ಲೂ ವ್ಯಾಪಕವಾಗಿ ಸಾಕಲ್ಪಡುತ್ತಿವೆ.
ಗುಜರಾತ್ ನ ಗೀರ್, ರಾಜಸ್ಥಾನದ ಕಾಂಕ್ರೇಜ್ ದೇಶದಾದ್ಯಂತ ವ್ಯಾಪಿಸಿವೆ. ಇತ್ತೀಚಿನ ದಿನಗಳಲ್ಲಿ ಆಂಧ್ರಪ್ರದೇಶದ ಪುಂಗನೂರು ಗಿಡ್ಡ ತಳಿ, ಬಹಳಷ್ಟು ಬೇಡಿಕೆ ಹೊಂದಿದೆ.
ಮಲೆನಾಡು ಗಿಡ್ಡ ತಳಿ ತನ್ನದೇ ಆದ ವಿಶೇಷತೆಗಳ ಕಾರಣಕ್ಕೆ ಕರ್ನಾಟಕ ರಾಜ್ಯದ ಎಲ್ಲೆಡೆ ಬೇಡಿಕೆಯನ್ನು ಹೊಂದಿದೆ.
















ಈ ತಳಿಯನ್ನು ಸಂರಕ್ಷಿಸಿ, ಉತ್ತಮ ಗುಣಮಟ್ಟದ ಗೋವುಗಳನ್ನು ಅಭಿವೃದ್ಧಿಪಡಿಸಿ, ಸಾಧನೆ ಮಾಡಿರುವ, ಗೋಪಾಲ್ಸ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಬೆಳ್ಳಾರೆಯ ಸಾಹಸಿ ಗೋಪಾಲಕ, ಪ್ರವೀಣ ಬೆಳ್ಳಾರೆ ಅವರು ಈಗ
ಮಹಾರಾಷ್ಟ್ರದ, ಕೊಲ್ಲಾಪುರ ಜಿಲ್ಲೆಯಲ್ಲಿ ವಾಸವಾಗಿರುವ
ಉದ್ಯಮಿ ಸಂತೋಷ್ ಶಿರೋಮಣಿ ಹಾಗೂ ಸವಿತಾ ಶಿರೋಮಣಿ ದಂಪತಿಗಳಿಗೆ ಮಲೆನಾಡು ಗಿಡ್ಡ ಗೋವುಗಳನ್ನು ಮಾರಾಟ ಮಾಡಿರುತ್ತಾರೆ.
ಆ ಕರುಗಳು ಮಂಗಳೂರಿನಿಂದ, ರೈಲಿನಲ್ಲಿ ಕೊಲ್ಲಾಪುರಕ್ಕೆ ತೆರಳಿರುವುದು ವಿಶೇಷ. ರೈಲ್ವೆ ಇಲಾಖೆಗೆ ಬೇಕಾದ ದಾಖಲೆಗಳನ್ನು ಮಾಡಿ ಕೊಟ್ಟವರು ಬೆಳ್ಳಾರೆಯ ಪಶುವೈದ್ಯ ಡಾ.ಸೂರ್ಯನಾರಾಯಣ ಭಟ್.
ಕರಾವಳಿಯಿಂದ ಹೊರ ರಾಜ್ಯಕ್ಕೆ ರೈಲಿನ ಮೂಲಕ ಇದೇ ಮೊದಲ ಬಾರಿಗೆ ಮಲೆನಾಡು ಗಿಡ್ಡ ತನ್ನ ಪ್ರಯಾಣ ಬೆಳೆಸಿದೆ. ಆ ಮೂಲಕ ರೋಗ ನಿರೋಧಕ ಶಕ್ತಿ ಹೊಂದಿರುವ, ಉತ್ತಮ ನೈಸರ್ಗಿಕ ಗುಣಸ್ವಭಾವಗಳನ್ನು ಹೊಂದಿರುವ ಮಲೆನಾಡು ಗಿಡ್ಡ ತಳಿ, ಸಹ್ಯಾದ್ರಿ ಬೆಟ್ಟದ ಸಾಲುಗಳನ್ನು ಹೊತ್ತಿರುವ ಮಹಾರಾಷ್ಟ್ರಕ್ಕೆ ವ್ಯಾಪಿಸಿರುವುದು ಒಂದು ತ್ರಿವಿಕ್ರಮ ಹೆಜ್ಜೆ. ಅಕ್ಕರೆಯಿಂದ ಆರೈಕೆ ಮಾಡಿ, ಉತ್ತಮ ಗುಣಮಟ್ಟದ ತಳಿ ಅಭಿವೃದ್ಧಿ ಪಡಿಸಿದ ಪ್ರವೀಣ ಬೆಳ್ಳಾರೆ ಇವರ ಕಾರ್ಯ ಶ್ಲಾಘನೀಯವಾದುದು.










