ತೋಟದಲ್ಲಿ ಅಡಿಕೆ ಕಳ್ಳತನ

0

ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ತೋಟದ ಮಾಲಕರು
ಸುಳ್ಯದ ಬೀರಮಂಗಲದಲ್ಲಿ ನಡೆದ ಘಟನೆ

ಸುಳ್ಯದ ದಕ್ಷಿಣ ಬೀರಮಂಗಲದಲ್ಲಿ ಮುಸ್ತಫ ಡೆಲ್ಮ ಎಂಬುವರ ತೋಟಕ್ಕೆ ಕಳ್ಳರು ನುಗ್ಗಿ ಅಡಿಕೆ ಕಳ್ಳತನ ಮಾಡಿ ಚೀಲದಲ್ಲಿ ತುಂಬಿಸಿಕೊಂಡಿದ್ದು ಈ ರೀತಿಯ ಘಟನೆ ಕಳೆದ ಹಲವಾರು ಬಾರಿ ನಡೆದಿದ್ದು ಇದಕ್ಕಾಗಿ ಕಳ್ಳರನ್ನು ಹಿಡಿಯಲು ಹೊಂಚು ಹಾಕಿ ಕುಳಿತಿದ್ದ ತೋಟದ ಮಾಲಕರ ಸಹೋದರನ ಕೈಗೆ ಕಳ್ಳರು ಸಿಕ್ಕಿಹಾಕಿಕೊಂಡಿದ್ದು ಕಳ್ಳರನ್ನು ಪೊಲೀಸರ ಕೈಗೆ ಒಪ್ಪಿಸಿದ ಘಟನೆ ನವಂಬರ್ ೨೪ರಂದು ವರದಿಯಾಗಿದೆ.

ಕಳೆದ ಕೆಲವು ದಿನಗಳಿಂದ ತೋಟದಲ್ಲಿ ಕಳ್ಳತನ ನಡೆಯುತ್ತಿದ್ದು ಸುಮಾರು ಬಾರಿ ಅಡಿಕೆ ಕಳ್ಳತನ ಮತ್ತು ತೋಟದ ಶೆಡ್ಡಿನಲ್ಲಿ ಇದ್ದ ಗುಜರಿ ಸಾಮಾನುಗಳನ್ನು ಕಳ್ಳರು ಕದ್ದೊಯ್ದ ಘಟನೆಗಳು ನಡೆದಿತ್ತು. ಈ ರೀತಿಯ ಘಟನೆಗಳು ಆಗಿಂದಾಗ ನಡೆಯುತ್ತಿತ್ತು ಎಂದು ತಿಳಿದು ಬಂದಿದು, ಈ ಬಗ್ಗೆ ಸಿದ್ಧಿಕ್ ರವರು ಸುಳ್ಯ ಪೊಲೀಸ್ ಠಾಣೆಗೆ ದೂರನ್ನು ಕೂಡಾ ನೀಡಿದ್ದರು.
ಕಳೆದ ೧೫ ದಿನಗಳಿಂದ ಸಿದ್ದೀಕ್ ರವರು ಕಳ್ಳರನ್ನು ಹಿಡಿಯಲು ಹೊಂಚು ಹಾಕಿ ತೋಟಕ್ಕೆ ಬಂದು ಆಗಾಗ ಕುಳಿತು ಕಾಯುತ್ತಿದ್ದರು.

ನವಂಬರ್ ೨೪ರಂದು ಬೆಳಿಗ್ಗೆ ಸುಮಾರು ೧೧ ಗಂಟೆಗೆ ಇಬ್ಬರು ಕಳ್ಳರು ತೋಟದಲ್ಲಿ ಬಿದ್ದ ಅಡಿಕೆಗಳನ್ನು ಹೆಕ್ಕಿ ಚೀಲದಲ್ಲಿ ತುಂಬಿಸುತ್ತಿದ್ದು ಈ ವೇಳೆ ಸಿದ್ದಿಕ್ ರವರು ಅಲ್ಲೇ ಇರುವುದನ್ನು ಕಂಡ ಕಳ್ಳರು ಅಲ್ಲಿಂದ ಓಡಿ ತಪ್ಪಿಸಲು ಪ್ರಯತ್ನಿಸಿದಾಗ ಅವರನ್ನು ಹಿಂಬಾಲಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಳಿಕ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪೊಲೀಸರು ಬಂದು ಕಳ್ಳರನ್ನು ಮತ್ತು ಅಡಿಕೆ ತುಂಬಿದ ಚೀಲವನ್ನು ಠಾಣೆಗೆ ಕೊಂಡೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕಳ್ಳನನ್ನು ಹಿಡಿದು ವಿಚಾರಿಸಿದಾಗ ಇನ್ನು ನಾಲ್ಕು ಮಂದಿ ಬೇರೆಯವರು ಇದ್ದಾರೆಂದು ಅವರು ಹೇಳಿದ್ದು ಈ ಬಗ್ಗೆ ಸುಳ್ಯ ಪೊಲೀಸರ ವಿಚಾರಣೆಯಿಂದ ತಿಳಿದು ಬರಬೇಕಾಗಿದೆ ಎಂದು ಸಿದ್ದಿಕ್ ರವರು ಸುದ್ದಿಗೆ ತಿಳಿಸಿದ್ದಾರೆ.