ನೇಸರ ಯುವಕ ಮಂಡಲ ಗ್ರಾಮದ ಹೆಮ್ಮೆಯ ಸಂಘಟನೆ : ಡಾ.ನರಸಿಂಹ ಶರ್ಮ ಕಾನಾವು
ದಶ ಪ್ರಣತಿ ಪ್ರಯುಕ್ತ ಅಶಕ್ತ ಕುಟುಂಬಕ್ಕೆ ಮನೆ ನಿರ್ಮಾಣ : ಜಗನ್ನಾಥ ಪೂಜಾರಿ ಮುಕ್ಕೂರು
ನೇಸರ ಯುವಕ ಮಂಡಲ ಮುಕ್ಕೂರು ಇದರ ಹತ್ತನೇ ವರ್ಷಾಚರಣೆಯ ಪ್ರಯುಕ್ತ ಜ.10 ಮತ್ತು 11 ರಂದು ನಡೆಯಲಿರುವ ದಶ ಪ್ರಣತಿ ಹಾಗೂ ಶಾಶ್ವತ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಬಿಡುಗಡೆಗೊಳಿಸಲಾಯಿತು.

ಶ್ರೀ ಜಲದುರ್ಗಾದೇವಿ ಕ್ಷೇತ್ರದಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ಮುಂಭಾಗ ಬಿಡುಗಡೆಗೊಳಿಸಿದರು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ನೇಸರ ದಶಪ್ರಣತಿ ಸಮಿತಿ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು ಮಾತನಾಡಿ ನೇಸರ ಯುವಕ ಮಂಡಲ ಈ ಗ್ರಾಮದ ಹೆಮ್ಮೆಯ ಸಂಘಟನೆ. ಕಳೆದ ಹತ್ತು ವರ್ಷಗಳಲ್ಲಿ 55 ಕ್ಕೂ ಅಧಿಕ ಸಮಾಜಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಿಸಿದೆ. ಈ ಬಾರಿ ಅಶಕ್ತ ಕುಟುಂಬಕ್ಕೆ ನೆರವು ಸೇರಿದಂತೆ ಮಾಹಿತಿ ಕಾರ್ಯಾಗಾರ, ಆರೋಗ್ಯ ಶಿಬಿರ ಮೊದಲಾದಿ ಚಟುವಟಿಕೆ ನಡೆಸುತ್ತಿದೆ. ಎರಡು ದಿನಗಳ ದಶಪ್ರಣತಿ ಸಮಾರಂಭವು ಅರ್ಥಪೂರ್ಣ ರೀತಿಯಲ್ಲಿ ಸಂಪನ್ನಗೊಳ್ಳಲಿದೆ ಎಂದರು.

ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ ಸುಮಾರು 1.5 ಲಕ್ಷ ರೂ.ವೆಚ್ಚದಲ್ಲಿ ಅಶಕ್ತ ಕುಟುಂಬಕ್ಕೆ ಮನೆ ನಿರ್ಮಾಣ, ಉದ್ಯಾನವನ ನಿರ್ಮಾಣ ಸಹಿತ ಹತ್ತಾರು ಶಾಶ್ವತ ಯೋಜನೆಗಳು ದಶಪ್ರಣತಿ ಸಂಭ್ರಮದ ಮೂಲಕ ಅನುಷ್ಠಾನಗೊಳ್ಳಲಿದೆ. ನೇಸರನ ಹೆಸರಿನಲ್ಲಿ ಸಮಾಜಮುಖಿ ಚಿಂತನೆಯ ಬೆಳಕು ಹರಿಸುವ ಪ್ರಯತ್ನ ನಮ್ಮದು. ಇದಕ್ಕೆ ಊರಿನ ಪ್ರತಿ ಮನೆಯವರ ಸಹಕಾರ, ಬೆಂಬಲ ದೊರೆತಿದೆ. ದಶ ಪ್ರಣತಿ ಕಾರ್ಯಕ್ರಮ ಊರಿನ ಹಬ್ಬವಾಗಲಿದೆ ಎಂದರು.








ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಹಾಗೂ ದಶಪ್ರಣತಿ ಸಮಿತಿ ಉಪಾಧ್ಯಕ್ಷರಾದ ಉಮೇಶ್ ಕೆಎಂಬಿ, ಸುಬ್ರಾಯ ಭಟ್ ನೀರ್ಕಜೆ, ನರಸಿಂಹ ತೇಜಸ್ವಿ ಕಾನಾವು, ಸದಸ್ಯರಾದ ಅಶ್ವಿನಿ ಕೋಡಿಬೈಲು, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ನಿತಿನ್ ರಾಜ್ ಶೆಟ್ಟಿ, ಅಜಯ್ ಶೆಟ್ಟಿ, ಶಿವಪ್ರಕಾಶ್ ಆಚಾರ್ಯ ಪೆರುವಾಜೆ, ನೇಸರ ದಶಪ್ರಣತಿ ಸಮಿತಿ ಸದಸ್ಯ ಕೃಷ್ಣಪ್ಪ ಜರಿಯಡ್ಕ, ಭಾವೈಕ್ಯ ಯುವಕ ಮಂಡಲದ ಸದಸ್ಯರಾದ ವಾಸುದೇವ ಪೆರುವಾಜೆ, ಶಿವಪ್ರಸಾದ್ ಪೆರುವಾಜೆ, ನೇಸರ ಯುವಕ ಮಂಡಲದ ಸದಸ್ಯ ಶ್ರೀಧರ್ ಗೌಡ ಕೊಂಡೆಪ್ಪಾಡಿ, ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.










