








ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಸಂಯುಕ್ತ ವಾರ್ಷಿಕೋತ್ಸವ ಡಿ. 11ರಂದು ಶಾಲಾ ಆವರಣದಲ್ಲಿ ನಡೆಯಿತು. ಮಧ್ಯಾಹ್ನ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾ. ಕಾರ್ತಿಕ್ ಕೋಟೆ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿ ಕನ್ನಡ ಮಾಧ್ಯಮ ಶಾಲೆಯಲ್ಲಿ ತಾವು ಕಲಿತ ಜೀವನ ಮೌಲ್ಯಗಳು ಜೀವನದಲ್ಲಿ ಯಾವ ರೀತಿಯಲ್ಲಿ ಉಪಯುಕ್ತವಾಗುತ್ತದೆ ಎಂದು ತಿಳಿಸಿದರು. ಕರ್ನಾಟಕ ಬ್ಯಾಂಕ್ ಎಜಿಎಂ ಚಕ್ರಪಾಣಿ ತಾವು ಕಲಿತ ಶಾಲೆಯಲ್ಲಿ ಒಳ್ಳೆಯ ಕೆಲಸಗಳಿಗೆ ಸಹಾಯ ಮಾಡಲು ಸಾಧ್ಯವಾದದ್ದು ಅದೃಷ್ಟ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಧವ ಗೌಡ ಭಾಗವಹಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಲಹೆಗಳನ್ನು ನೀಡಿದರು. ಕ್ರೀಡೆ ಹಾಗೂ ಸಾಹಿತ್ಯ ವಿಭಾಗಗಳ ವಿವಿಧ ಸ್ಪರ್ಧೆಗಳಲ್ಲಿ ವಿಶೇಷ ಬಹುಮಾನಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನೆಟ್ಟಾರು ವೆಂಕಟಸುಬ್ಬರಾವ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ನಡೆದ ರಸಪ್ರಶ್ನೆ ಸ್ಪರ್ಧೆಯ ವಿಜೇತರನ್ನು ಪುರಸ್ಕರಿಸಲಾಯಿತು. ಶಾಲಾ ಶೈಕ್ಷಣಿಕ ಪ್ರವಾಸದಲ್ಲಿ ಭಾಗವಹಿಸಿ ಉತ್ತಮ ಪ್ರವಾಸ ಕಥನವನ್ನು ಬರೆದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ವಿದ್ಯಾಬೋದಿನೀ ಎಜುಕೇಶನಲ್ ಸೊಸೈಟಿ ಬಾಳಿಲ ಇದರ ಅಧ್ಯಕ್ಷ ಯು.ರಾಧಾಕೃಷ್ಣರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಸಂಚಾಲಕರಾದ ಪಿ.ಜಿ.ಎಸ್.ಎನ್ ಪ್ರಸಾದ್ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಸಹನಾ ಬಿಬಿ ವಂದಿಸಿದರು. ಮುಖ್ಯ ಶಿಕ್ಷಕ ಉದಯಕುಮಾರ್ ರೈ ಶಾಲಾ ವರದಿಯನ್ನು ವಾಚಿಸಿದರು. ವಿದ್ಯಾರ್ಥಿನಿಯರಾದ ಮನಸ್ವಿ ಹಾಗೂ ಚಿರಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಭೆ ನಂತರ ನಾಟಕ ಪ್ರದರ್ಶನ ಬಳಿಕ ಯಕ್ಷದ್ರುವ ಪಟ್ಲ ಫೌಂಡೇಶನ್ ಆಶ್ರಯದಲ್ಲಿ ಶಾಲೆಯಲ್ಲಿ ನಡೆದ ಯಕ್ಷ ಶಿಕ್ಷಣದ ವಿದ್ಯಾರ್ಥಿಗಳಿಂದ ಶ್ರೀರಾಮ ದರ್ಶನ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.










