
ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಆವರಣದಲ್ಲಿ ಡಿ. 10ರಂದು ವಿದ್ಯಾ ವೈಭವವೆಂಬ ವಿನೂತನ ಸಾಂಸ್ಕೃತಿಕ ಹಬ್ಬ ನಡೆಯಿತು.









ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತಮುಖ್ಯ ಶಿಕ್ಷಕರಾದ ಬಿ.ವಿ ಶಗ್ರಿತ್ತಾಯ ತೆಂಗಿನ ಮರದ ಹಿಂಗಾರವನ್ನು ಅರಳಿಸುವುದರ ಮೂಲಕ ನಡೆಸಿದರು. ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಯು. ರಾಧಾಕೃಷ್ಣರಾವ್ ಸ್ವಾಗತಿಸಿದರು. ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿದ್ಯಾಬೋಧನೀ ಪ್ರೌಢಶಾಲೆಯ ಸುಮಾರು 400 ವಿದ್ಯಾರ್ಥಿಗಳು ವಿಶಾಲವಾದ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಸಾಹಸ ಸಮಯ ಕ್ರೀಡಾ ಚಟುವಟಿಕೆಗಳನ್ನು ಸುಮಾರು ಮೂರು ಗಂಟೆಗಳ ಕಾಲ ಪ್ರದರ್ಶಿಸಿದರು. ಈ ವೈಭವವನ್ನು ವೀಕ್ಷಿಸಲು ಅಭ್ಯಾಗತರಾಗಿ ಬಿಗ್ ಬಾಸ್ ಖ್ಯಾತಿಯ ನಟ ಹಾಗೂ ಹಿನ್ನೆಲೆ ಧ್ವನಿ ಕಲಾವಿದರಾದ ಬಡೆಕ್ಕಿಲ ಪ್ರದೀಪ್ ಭಾಗವಹಿಸಿ, ಮಕ್ಕಳ ಪ್ರದರ್ಶನವನ್ನು ಮೆಚ್ಚಿದರಲ್ಲದೆ, ವೀಕ್ಷಕರನ್ನು ರಂಜಿಸಲು ಡಯಲಾಗ್ ಹೇಳಿದರು. ಕಳೆಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಹಕಾರಿ ಅಧ್ಯಕ್ಷ ಅಜಿತ್ ರಾವ್ ಕೀಲಂಗೋಡಿ ಸಾಂದೀಪನಿ ವಿದ್ಯಾಲಯದ ಸಂಚಾಲಕರಾದ ಭಾಸ್ಕರ್ ಆಚಾರ್ ಮತ್ತು ಕರ್ನಾಟಕ ಬ್ಯಾಂಕ್ ನಿಂತಿಕಲ್ಲು ಶಾಖೆಯ ಪ್ರಬಂಧಕರಾದ ರಾಮಚಂದ್ರ ಎಚ್ ಉಪಸ್ಥಿತರಿದ್ದರು. ಉಭಯ ಸಂಸ್ಥೆಗಳ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಸಹಕರಿಸಿದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ವಿಶಿಷ್ಟವಾದ ದೀಪಾರತಿಯೊಂದಿಗೆ ಮುಕ್ತಾಯಗೊಂಡಿತು. ಮುಖ್ಯ ಶಿಕ್ಷಕ ಉದಯಕುಮಾರ್ ರೈ ವಂದಿಸಿದರು.









