ಮಕ್ಕಳ ಬಗ್ಗೆ ತೋರಿದ ಕಾಳಜಿ ಶ್ಲಾಘನೀಯ : ಜಗನ್ನಾಥ ಪೂಜಾರಿ ಮುಕ್ಕೂರು
ಊರವರ ಸಹಕಾರ ನೀಡುವ ಗುಣ ಅಪಾರ : ಉಮೇಶ್ ಕೆಎಂಬಿ
ಸರಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಊರವರು ಸಹಭಾಗಿಗಳಾಗುವ ಅಗತ್ಯ ಇಂದಿದೆ. ಈ ನಿಟ್ಟಿನಲ್ಲಿ ಮುಕ್ಕೂರಿನ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಲೇಖನಿ ಸಾಮಗ್ರಿ ನೀಡುವ ಮೂಲಕ ದಾನಿಗಳು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹೇಳಿದರು.
ದಿ. ಗೋಪಾಲಕೃಷ್ಣ ಭಟ್ ಕಾನಾವು ಅವರ ಸ್ಮರಣಾರ್ಥ ಅವರ ಮನೆಯವರು ಹಾಗೂ ಕುವೈತ್‍ನಲ್ಲಿ ಉದ್ಯೋಗದಲ್ಲಿರುವ ಶಾಲಾ ಹಳೆ ವಿದ್ಯಾರ್ಥಿ, ನೇಸರ ಯುವಕ ಮಂಡಲದ ಮಾರ್ಗದರ್ಶಕ ಮಹೇಶ್ ಕುಂಡಡ್ಕ ಅವರು ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಿದ ಲೇಖನಿ ಸಾಮಗ್ರಿಗಳನ್ನು ಜೂ.2 ರಂದು ವಿತರಿಸಿ ಅವರು ಮಾತನಾಡಿದರು.
ಕಾನಾವು ದಿ.ಗೋಪಾಲಕೃಷ್ಣ ಭಟ್ ಅವರ ಕುಟುಂಬ ದಾನ ಧರ್ಮದ ಮೂಲಕ ಊರ-ಪರವೂರಿನಲ್ಲಿ ತನ್ನದೇ ಆದ ಸಂಬಂಧ ಇರಿಸಿಕೊಂಡಿದೆ. ಹಿರಿಯರ ಪರಂಪರೆಯನ್ನು ಕಾನಾವು ಕುಟುಂಬದ ಈಗಿನ ಪೀಳಿಗೆಯು ಮುಂದುವರಿಸಿಕೊಂಡು ಮಾದರಿ ಹೆಜ್ಜೆ ಇಟ್ಟಿದೆ ಎಂದ ಅವರು, ವಿದೇಶದಲ್ಲಿ ಇದ್ದುಕೊಂಡು ಊರ ಶಾಲೆಯ ಮೇಲೆ ಪ್ರೀತಿ ಇರಿಸಿಕೊಂಡಿರುವ ಮಹೇಶ್ ಅವರ ಪ್ರಯತ್ನವು ಶ್ಲಾಘನೀಯ ಎಂದರು.
ದಿವಂಗತ ಗೋಪಾಲಕೃಷ್ಣ ಭಟ್ ಕಾನಾವು ಅವರ ಧರ್ಮಪತ್ನಿ ಶಂಕರಿ ಗೋಪಾಲಕೃಷ್ಣ ಭಟ್ ಹಾಗೂ ಮಹೇಶ್ ಕುಂಡಡ್ಕ ಅವರು ವಿದ್ಯಾರ್ಥಿಗಳಿಗೆ ಲೇಖನಿ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು. ಪ್ರತಿ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ಬೇಕಾಗುವ ಪುಸ್ತಕ, ಪೆನ್ನು, ಪೆನ್ಸಿಲ್, ಸ್ಲೇಟ್, ಬಳಪ ಮೊದಲಾದ ಸಾಮಗ್ರಿಗಳನ್ನು ವಿತರಿಸಲಾಯಿತು.
ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ಕಾನಾವು ಗೋಪಾಲಕೃಷ್ಣ ಭಟ್ ಅವರು ಮುಕ್ಕೂರು ಶಾಲೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಹಲವಾರು ಸಂದರ್ಭಗಳಲ್ಲಿ ಶಾಲೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಮಕ್ಕಳ ಅಗತ್ಯತೆಗಳಿಗೆ ಸ್ಪಂದಿಸಿ ಅವರಿಗೆ ಉತ್ತೇಜನ ನೀಡುವ ಕಾರ್ಯ ಕಾನಾವು ಕುಟುಂಬ ಮತ್ತು ಯುವಕ ಮಹೇಶ್ ಅವರ ಮೂಲಕ ಆಗಿದ್ದು ಇದು ಇತರರಿಗೆ ಪ್ರೇರಣೆ ನೀಡಲಿದೆ ಎಂದರು.
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಮುಕ್ಕೂರಿನಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದಾಗಲೂ ಊರವರು ಉತ್ತಮ ಬೆಂಬಲ ನೀಡುತ್ತಾರೆ. ಶಾಲೆಯ ಚಟುವಟಿಕೆಗಳಿಗೂ ದಾನ ರೂಪದಲ್ಲಿ ನೆರವಾಗುತ್ತಾರೆ. ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಲೇಖನಿ ಸಾಮಾಗ್ರಿ ನೀಡಿರುವುದು ಶ್ಲಾಘನೀಯ ಸಂಗತಿ ಎಂದರು.
ಸಾಪ್ಟ್ವೇರ್ ಎಂಜಿನಿಯರ್ ನರಸಿಂಹ ತೇಜಸ್ವಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸುವಲ್ಲಿ ಊರವರ ಪಾತ್ರವು ಮಹತ್ವದ್ದು. ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿ ಉತ್ತೇಜಿಸುವ ಪ್ರಯತ್ನಕ್ಕೆ ಕಾನಾವು ಕುಟುಂಬ ಯಾವತ್ತೂ ಬೆಂಬಲ ನೀಡುತ್ತದೆ ಎಂದರು.
ಕಾನಾವು ಕುಟುಂಬದ ಪರವಾಗಿ ಸೌಮ್ಯಲಕ್ಷ್ಮೀ ನರಸಿಂಹ ಶರ್ಮಾ ಮಾತನಾಡಿ, ದಿವಂಗತ ಗೋಪಾಲಕೃಷ್ಣ ಭಟ್ ಅವರ ಮೇಲೆ ಈ ಊರವರು ಇರಿಸಿದ ಪ್ರೀತಿಗೆ ಆಭಾರಿ ಎಂದು ಕೃತಜ್ಞತೆ ಸಲ್ಲಿಸಿದರು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳನ್ನು ಉಚಿತವಾಗಿ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಶಾಲಾ ಮುಖ್ಯಗುರು ವಸಂತಿ ಸ್ವಾಗತಿಸಿ, ಸಹ ಶಿಕ್ಷಕಿ ಸೌಮ್ಯ ವಂದಿಸಿದರು. ಈ ಸಂದರ್ಭ ಶಾಲಾ ಹಿತ ಚಿಂತನಾ ಸಮಿತಿಯ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಶಾಲಾ ಎಸ್‍ಡಿಎಂಸಿ ಉಪಾಧ್ಯಕ್ಷೆ ಸುಮತಿ ರೈ, ಬಿಂದು ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.