ಮಕ್ಕಳ ಕೊರತೆಯ ಕಾರಣದಿಂದ ಮುಚ್ಚಲ್ಪಟ್ಟ ಹಾಸನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ

0

ಹಿರಿಯರು ಕಷ್ಟ ಪಟ್ಟು ಗ್ರಾಮೀಣ ಪ್ರದೇಶಗಳಲ್ಲಿ ಹುಟ್ಟು ಹಾಕಿದ ವಿದ್ಯಾಮಂದಿರ ಇದೀಗ ಹಂತ ಹಂತವಾಗಿ ಮುಚ್ಚುವ ಪರಿಸ್ಥಿತಿ ತಲೆದೋರಿದೆ‌. ಶಿಕ್ಷಣದಿಂದ ವಂಚಿತರಾಗಿ ಬಾಳಿನಲ್ಲಿ ಅನಕ್ಷರಸ್ಥರಾಗಬಾರದೆಂಬ ಕಲ್ಪನೆ ಹಾಗೂ ದೂರಾಲೋಚನೆಯೊಂದಿಗೆ ಹಳ್ಳಿಗೊಂದರಂತೆ ಸರಕಾರಿ ಶಾಲೆಗಳನ್ನು ಪ್ರಾರಂಭಿಸಿ ಬಡ ಮಕ್ಕಳ ಬಾಳಿನಲ್ಲಿ ಬೆಳಕು ಕಾಣುವಂತಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಅಂದಿನ ಕಾಲಕ್ಕನುಗುಣವಾಗಿ ಜಾಗವಿಲ್ಲದೆ ಕಟ್ಟಡಗಳಿಲ್ಲದ ಸಂದರ್ಭದಲ್ಲಿ ಗ್ರಾಮದ ಪಟೇಲರ ಜಮೀನ್ದಾರರ ಮನೆಯಲ್ಲಿ ಶಾಲೆ ಆರಂಭಿಸಿ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಜನೆ ನೀಡುತ್ತಿದ್ದರು.

ಕ್ರಮೇಣ ಮಕ್ಕಳ ಸಂಖ್ಯೆ ಹೆಚ್ಚಿದಂತೆ ಅನೂಕೂಲತೆಗೆ ತಕ್ಕಂತೆ ಕಟ್ಟಡ ನಿರ್ಮಿಸಿ ಶಾಲೆಗಳನ್ನು ಊರಿನ ದಾನಿಗಳ ಸಹಕಾರದಿಂದ ಮುಂದುವರಿಸಿಕೊಂಡು ಬರಲಾಯಿತು. ಅಂದಿನ ಕಾಲದಲ್ಲಿ ತಾಲೂಕು ಕೇಂದ್ರ ಗಳಲ್ಲಿ ಮಾತ್ರ ಸರಕಾರಿ ಶಾಲೆಯಿದ್ದುದರಿಂದ ಹಳ್ಳಿ ಪ್ರದೇಶದ ಮಕ್ಕಳಿಗೆ ಕನಸಾಗಿತ್ತು.

ಯಾಕೆಂದರೆ ಬಡ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮೈಲಿಗಟ್ಟಲೆ ದೂರ ಕಳುಹಿಸಿ ಒದಿಸುವ ಶಕ್ತಿ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಊರಿನ ಗಣ್ಯರು ಸೇರಿ ಶಿಕ್ಷಣದಿಂದ ವಂಚಿತರಾಗುವ ಮಕ್ಕಳ ಭವಿಷ್ಯಕ್ಕೆ ಅಕ್ಷರದ ತೋರಣ ಹೆಣೆದವರಾಗಿದ್ದರು. ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ಸಹಸ್ರಾರು ಮಂದಿ ವಿದ್ಯಾರ್ಜನೆ ಮಾಡಿ ಉನ್ನತ ಹುದ್ದೆಯನ್ನು ಅಲಂಕರಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರು ಸಾಕಷ್ಟು ಮಂದಿ ಇಂದು ಕಣ್ಣ ಮುಂದೆ ಗೋಚರಿಸುತ್ತಾರೆ.


ಕಾಲ ಕ್ರಮಿಸಿದಂತೆ ಗ್ರಾಮಗಳಲ್ಲಿ ಮೂಲ ಭೂತ ಸೌಕರ್ಯ ಸಂಚಾರದ ವ್ಯವಸ್ಥೆ ಬಂದ ಮೇಲೆ ಹಳ್ಳಿ ಪ್ರದೇಶದ ಮಕ್ಕಳನ್ನು ನಗರ ಪ್ರದೇಶದಲ್ಲಿರುವ ಶಾಲೆಗೆ ಕಳುಹಿಸಲು ಪೋಷಕರು ಮುಂದಾದರು.ಇದರಿಂದ ಹಿರಿಯರು ಹುಟ್ಟು ಹಾಕಿದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕುಂಠಿತವಾಗತೊಡಗಿತು. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬ ಹೆಚ್ಚಾಗಿದ್ದು ಒಂದು ಮನೆಯಲ್ಲಿಯೇ ಮಕ್ಕಳ ಸಂಖ್ಯೆ ಡಜನ್ ಇರುತ್ತಿದ್ದರು. ಕ್ರಮೇಣ ಶಿಕ್ಷಣದ ಪದ್ಧತಿ ಬದಲಾದಂತೆ ಜನರ ಜೀವನ ಶೈಲಿಯು ಬದಲಾವಣೆ ಕಂಡಿತು. ವಿದ್ಯಾಭ್ಯಾಸದ ನಂತರ ಮಕ್ಕಳು ಉದ್ಯೋಗವನ್ನು ಅರಸಿ ಹಿರಿಯರನ್ನು ಬಿಟ್ಟು ದೂರದ ಪಟ್ಟಣಗಳಿಗೆ ಹೋಗುತ್ತಾರೆ. ಪಟ್ಟಣದಲ್ಲಿ ವಾಸ್ತವ್ಯವಾಗಿ ತಮ್ಮ ಮಕ್ಕಳನ್ನು ನಗರ ಪ್ರದೇಶದಲ್ಲಿ ಇರುವ ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿಸುತ್ತಾರೆ.

ಇಂದು ಇಂಗ್ಲೀಷ್ ಮೇಲೆ ವ್ಯಾಮೋಹ ಹೆಚ್ಚಾದಂತೆ ಪ್ರತಿಷ್ಠೆಯ ಪ್ರಶ್ನೆಯಾಗಿ ಗ್ರಾಮೀಣ ಭಾಗದ ಮಕ್ಕಳನ್ನು ನಗರದ ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿಸುತ್ತಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿ ಸರಕಾರಿ ಶಾಲೆಗೆ ಬೀಗ ಜಡಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಮೂಲಭೂತ ಸೌಕರ್ಯಗಳಲ್ಲಿ ಯಾವುದೇ ರೀತಿಯ ಕೊರತೆ ಇಲ್ಲದಿದ್ದರೂ ಮಕ್ಕಳ ಕೊರತೆಯೇ ಇದಕ್ಕೆ ಕಾರಣವಾಗಿದೆ. 1960 ರಲ್ಲಿ ಆರಂಭಗೊಂಡ ಅಮರಮುಡ್ನೂರು ಗ್ರಾಮದ ಹಾಸನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಇದೀಗ ಮುಚ್ಚಬೇಕಾದ ಪರಿಸ್ಥಿತಿ ಬಂದಿದೆ.


ಸುಂದರವಾದ ಕಟ್ಟಡ ಸುತ್ತಲೂ ಹೂದೂಟ ಆಕರ್ಷಕ ದ್ವಾರ ಬಯಲು ರಂಗಮಂದಿರ ವಿಶಾಲ ಆಟದ ಮೈದಾನ ಸ್ವಚ್ಛ ಶೌಚಾಲಯ ನೀರಿನ ವ್ಯವಸ್ಥೆ ಎಲ್ಲಾ ಮೂಲಭೂತ ಸೌಕರ್ಯ ಹೊಂದಿರುವ ಸದಾ ಮಕ್ಕಳ ಕಲರವದಿಂದ ಕೂಡಿರುತ್ತಿದ್ದ ವಿದ್ಯಾಮಂದಿರದ ವಾತಾವರಣ ಇದೀಗ ನಿಶ್ಯಬ್ಧಗೊಂಡಿದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿದ್ದರೂ ಒಂದು ವರ್ಷಗಳ ಕಾಲ ಇದ್ದ 6 ಮಕ್ಕಳಿಗೆ ಪಾಠ ಪ್ರವಚನ ನಡೆದಿತ್ತು. ಖಾಯಂ ಶಿಕ್ಷಕರ ಜತೆ ಗೌರವ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಆದರೆ ಈ ವರ್ಷದಲ್ಲಿ ಕೇವಲ 4 ಮಕ್ಕಳು ಮಾತ್ರ ಉಳಿದಿದ್ದರು.


ಉಳಿದ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದು ಎಂಬುದಾಗಿ ಅವರನ್ನು ಸ್ಥಳೀಯ ಕುಕ್ಕುಜಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರ್ಪಡೆ ಮಾಡಲಾಗಿದೆ.


ಶಾಲೆಯ ಉಳಿವಿಗಾಗಿ ಎಸ್‌.ಡಿ.ಎಂ.ಸಿ.ಸಮಿತಿ ಹಾಗೂ ಶಾಲೆಗೆ ಸಂಬಧ ಪಟ್ಟ ಈ ಭಾಗದ ಹಿರಿಯರು ಪ್ರಯತ್ನ ಮಾಡಿದರೂ ಅದು ಫಲಕಾರಿಯಾಗಿಲ್ಲ. ಮಕ್ಕಳ ಸಂಖ್ಯೆ ತೀರಾ ಕಡಿಮೆ ಇರುವ ಪ್ರದೇಶ ಇದಾಗಿರುವುದರಿಂದ ಶಾಲೆಯನ್ನು ಮುಂದುವರಿಸಿಕೊಂಡು ಬರುವುದು ಅಸಾಧ್ಯದ ಮಾತಾಗಿದೆ. ಒಟ್ಟಾರೆ ಹೇಳುವುದಾದರೆ ಒಂದೆಡೆ ಇಂಗ್ಲೀಷ್ ವ್ಯಾಮೋಹ ಮತ್ತೊಂದೆಡೆ ಪ್ರತಿಷ್ಠೆ ಮತ್ತು ನಗರ ವಾಸದ ಆಲೋಚನೆಯಿಂದ ಸರಕಾರಿ ಶಾಲೆ ಬೇಡವಾಗಿದೆ.


ಗ್ರಾಮದಲ್ಲಿ ಇರುವ ಸರಕಾರಿ ಶಾಲೆಗಳು ಉಳಿಯಬೇಕು ಅದನ್ನು ಉಳಿಸಿಕೊಳ್ಳಬೇಕಾಗಿರುವುದು ನಮ್ಮ ಜವಬ್ದಾರಿಯು ಹೌದು. ಸರಕಾರಿ ಶಾಲೆಯ ಉಳಿವಿಗಾಗಿ ಕೆಲವು ಕಡೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿ ಆರಂಭಿಸಲಾಗಿದೆ.


ಈ ರೀತಿಯ ವ್ಯವಸ್ಥೆಗಳನ್ನು ಜೋಡಿಸಿಕೊಂಡಾದರೂ ಸರಕಾರಿ ಶಾಲೆಗೆ ಮಕ್ಕಳ ನ್ನು ಸೇರಿಸುವಂತಾಗಲಿ. ಇದರಿಂದ ಸರಕಾರಿ ಶಾಲೆಗಳು ಉಳಿಯಲಿ ಬೆಳೆಯಲಿ ಎಂಬುದು ನಮ್ಮ ಆಶಯ.