ಅಮರಮುಡ್ನೂರು: ಬಂಟಮಲೆಯ ಶುದ್ಧ ನೀರಿನ ಸಂಗ್ರಹಕ್ಕೆ ನಿರ್ಮಾಣಗೊಳ್ಳುತ್ತಿರುವ ಕೋಟಿ ವೆಚ್ಚದ ಕಿಂಡಿ ಅಣೆಕಟ್ಟು

0

ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಗಿಯಡ್ಕ ಎಂಬಲ್ಲಿ ಬಂಟಮಲೆಯ ಕಾಡಿನಿಂದ ಹರಿದು ಬರುತ್ತಿರುವ ಸಣ್ಣದಾದ ತೋಡಿಗೆ ಸಣ್ಣ ನೀರಾವರಿ ಇಲಾಖೆಯ ಯೋಜನೆಯಡಿಯಲ್ಲಿ ಕೋಟಿ ವೆಚ್ಚದಲ್ಲಿ ಕಿಂಡಿ
ಅಣೆಕಟ್ಟು ನಿರ್ಮಾಣವಾಗೊಂಡಿದೆ.

ಹಚ್ಚ ಹಸುರಿನ ಪ್ರಕೃತಿಯ ತಾಣ ಬಂಟಮಲೆಯ ತಪ್ಪಲಿನಿಂದ ನಿರಂತರವಾಗಿ ಹರಿದು ಬರುತ್ತಿರುವ ನೀರನ್ನು ಸಂಗ್ರಹಿಸಿ ಬಳಕೆ ಮಾಡುವ ಉದ್ದೇಶಕ್ಕಾಗಿ ಸ್ಥಳೀಯರ ಬೇಡಿಕೆಗೆ ಸ್ಪಂದಿಸಿದ ಮಾಜಿ ಸಚಿವರು, ಮಾಜಿ ಶಾಸಕ ಎಸ್.ಅಂಗಾರ ರವರ ಮುತುವರ್ಜಿಯಲ್ಲಿ ಸುಮಾರು 1.25 ಕೋಟಿ ಅನುದಾನ ಬಿಡುಗಡೆಗೊಂಡು ಕಾಮಗಾರಿ ನಡೆದಿತ್ತು.


ಕಳೆದ ಫೆಬ್ರವರಿಯಲ್ಲಿ ಗುದ್ದಲಿ ಪೂಜೆಯಾಗಿ ಕಿಂಡಿ ಅಣೆಕಟ್ಟಿನ ಕಾಮಗಾರಿ ಪ್ರಾರಂಭಿಸಲಾಗಿತ್ತು.
ಈ ತೋಡಿನಲ್ಲಿ ವರ್ಷದ 365 ದಿನಗಳಲ್ಲಿಯೂ ಅತ್ಯಂತ ಪರಿಶುದ್ಧವಾದ ನೀರಿನ ಹರಿವು ನಿರಂತರವಾಗಿ ಇರುವುದನ್ನು ಗಮನಿಸಿ ಅಣೆಕಟ್ಟು ನಿರ್ಮಾಣದ ಯೋಜನೆ ಕೈಗೊಳ್ಳಲಾಗಿದೆ. ಇದರಿಂದಾಗಿ ಹಾಸನಡ್ಕ, ಕುಡುಂಬಿಲ,ಉರುಂಬಿ,ರಾಗಿಯಡ್ಕ ಮುಂತಾದ ಕಡೆಗಳಲ್ಲಿ ನೀರಿನ ಸದುಪಯೋಗವಾಗಲಿದೆ.

ಬಂಟಮಲೆಯಿಂದ ಹರಿದು ಬರುವ ನೀರು ಅತ್ಯಂತ ಪರಿಶುದ್ಧ ವಾಗಿರುವುದರಿಂದ ಅಣೆಕಟ್ಟಿನಲ್ಲಿ ಶೇಖರಣೆ ಮಾಡಿದ ನೀರನ್ನು ಪಂಪು ಬಳಸಿ ಟ್ಯಾಂಕಿಗೆ ಹಾಯಿಸಿಕೊಂಡು ಅಮರಮುಡ್ನೂರು ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಬಳಸಿಕೊಳ್ಳುವುದರಿಂದ ಮತ್ತಷ್ಟು ಪ್ರಯೋಜನಕಾರಿಯಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಈಗಾಗಲೇ ಕಾಮಗಾರಿ ಕೆಲಸ ಪ್ರಗತಿಯಲ್ಲಿ ಇದ್ದು ಕಾಂಕ್ರೀಟ್ ಕೆಲಸ ಸಂಪೂರ್ಣಗೊಂಡಿದೆ.

ಹಾಸನ ಮೂಲದ ಗುತ್ತಿಗೆದಾರ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಣೆಕಟ್ಟಿನಿಂದ ಸಾರ್ವಜನಿಕರಿಗೆ ಸದುಪಯೋಗವಾಗಲೆಂಬುದು ನಾಗರಿಕರ ಆಶಯವಾಗಿದೆ.