ಎನ್ನೆಂಸಿ ಪದವಿ ಕಾಲೇಜು ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ

0

ವಿದ್ಯೆಯೆಂದರೆ ಕೇವಲ ಸಾಕ್ಷಾರತೆಯಲ್ಲ ಜೊತೆಗೆ ಸಂಸ್ಕಾರ: ಲ. ಎಂ ಬಿ ಸದಾಶಿವ

ಜ್ಞಾನ ಎಂಬುದು ಶಕ್ತಿ. ದಿವಂಗತ ಕೆವಿಜಿಯವರು ಈ ಭಾಗದಲ್ಲಿ ಮೊದಲಿಗೆ ಕಾಲೇಜು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಸುಳ್ಯದ ಜನತೆಗೆ ಜ್ಞಾನದ ಶಕ್ತಿ ತುಂಬಿದವರು. ಕೆವಿಜಿ ವಿದ್ಯಾಸಂಸ್ಥೆಗಳ ಬೆಳವಣಿಗೆಯ ಜೊತೆಗೆ ಸುಳ್ಯ ಕೂಡ ಬೆಳೆಯಿತು. ಕಾಲೇಜು ವಿದ್ಯಾರ್ಥಿ ಜೀವನ ಬಹಳ ಪ್ರಮುಖ ಹಂತ. ಇಲ್ಲಿಂದ ಸಮಾಜಕ್ಕೆ ಸಂಪೂರ್ಣ ಜವಾಬ್ದಾರಿಯುತ ನಾಗರಿಕರಾಗಿ ಹೊರಹೊಮ್ಮುವ ನೀವು ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ಈ ವಿದ್ಯೆ ಎಂಬುದು ಕೇವಲ ಸಾಕ್ಷರತೆಯಲ್ಲ, ಜೊತೆಗಿನ ಸಂಸ್ಕಾರ ಕಲಿಕೆ. ಗುರುಗಳು ನಿಮ್ಮನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಕಾಲ ಬದಲಾದಂತೆ ಬಂದೆರಗುವ ಎಲ್ಲಾ ಸವಾಲುಗಳನ್ನು ಎದುರಿಸಲು ಒಳ್ಳೆಯ ಜ್ಞಾನವನ್ನು ಸಂಪಾದಿಸಿಕೊಂಡು ಗುರು ಹಿರಿಯರನ್ನು ಪ್ರೀತಿಯಿಂದ ಗೌರವಿಸುವುದನ್ನು ಮೈಗೂಡಿಸಿಕೊಂಡು, ಒಳ್ಳೆಯ ಸಮಾಜ ನಿರ್ಮಿಸುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂದು ಲಯನ್ಸ್ ಜಿಲ್ಲೆಯ ಮಾಜಿ ಗವರ್ನರ್ ಮತ್ತು ಸಾಂದೀಪ ವಿಶೇಷ ಮಕ್ಕಳ ಶಾಲೆಯನ್ನು ಮುನ್ನಡೆಸುತಿರುವ ಎಂ.ಬಿ ಫೌಂಡೇಶನ್ ಅಧ್ಯಕ್ಷ ಲಯನ್ ಎಂ.ಬಿ ಸದಾಶಿವ ರವರು ಹೇಳಿದರು.

ಅವರು ಜೂನ್ 09 ರಂದು ನೆಹರೂ ಮೆಮೋರಿಯಲ್ ಪದವಿ ಕಾಲೇಜಿನ ವಾರ್ಷಿಕ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮವನ್ನು ಕೆವಿಜಿ ಷಷ್ಟ್ಯಬ್ಧ ರಂಗಮಂದಿರದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ ಒಂದು ಸಂಸ್ಥೆಯನ್ನು ಮುನ್ನಡೆಸಬೇಕಾದರೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಕಾರಣಕರ್ತರಾಗಿದ್ದಾರೆ. ಅಂತೆಯೇ ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳು ಮಾಡುವ ಸಾಧನೆಯು ಅವರು ಸಂಸ್ಥೆಗೆ ನೀಡುವ ಕೊಡುಗೆಯಾಗಿದೆ ಎಂದು ಹೇಳಿ ಶೈಕ್ಷಣಿಕವಾಗಿ ಅಲ್ಲದೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸಾಧನೆಗೈದ ಸಾಧಕರು ಮತ್ತು ಮಾರ್ಗದರ್ಶನ ನೀಡಿದ ಪ್ರತಿಯೊಬ್ಬರನ್ನೂ ನೆನಪಿಸಿಕೊಂಡರು. ಆಧುನಿಕ ಯುಗದಲ್ಲಿ ವ್ಯಕ್ತಿಯು ತನ್ನ ಸರ್ವತೋಮುಖ ಅಭಿವೃದ್ಧಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಎಲ್ಲ ಉತ್ತಮ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶಪಾಲರಾದ ಪ್ರೊ. ರುದ್ರಕುಮಾರ್ ವಾರ್ಷಿಕ ವರದಿಯನ್ನು ವಾಚಿಸಿದರು.
ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಚಂದ್ರ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಚಿನ್ನಪ್ಪ ಗೌಡ, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ ಉಪಸ್ಥಿತರಿದ್ದರು.

ಕಾಲೇಜಿನಲ್ಲಿ ಸುದೀರ್ಘ ಸೇವೆಸಲ್ಲಿಸಿ ಪ್ರಾಂಶುಪಾಲರಾಗಿ ನಿವೃತ್ತರಾದ ಡಾ. ಪೂವಪ್ಪ ಕಾಣಿಯೂರು ದಂಪತಿಗಳನ್ನು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಡಾ. ಪೂವಪ್ಪ ಕಾಣಿಯೂರು ತಮ್ಮ ಸೇವಾವಧಿಯ ನೆನಪುಗಳನ್ನು ಹಂಚಿಕೊಂಡರು. ಹಾಗೇ ಕಚೇರಿ ಸಿಬ್ಬಂದಿ ಆಗಿ ನಿವೃತ್ತಿ ಹೊಂದಿದ್ದ ದಿ. ಚೋಮ ಪರವಾಗಿ ಅವರ ಮಗನಿಗೆ ಗೌರವ ಸನ್ಮಾನ ಮಾಡಲಾಯಿತು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದಲ್ಲಿ ಚಿನ್ನದ ಪದಕ ದೊಂದಿಗೆ ಪ್ರಥಮ ರ್ಯಾಂಕ್ ವಿಜೇತೆ ಕು. ಶ್ರೀನ, ಹತ್ತನೇ ರ್ಯಾಂಕ್ ಪಡೆದ ಶ್ರೀಮತಿ ಪವಿತ್ರ; ಪದವಿ ವಿಜ್ಞಾನ ವಿಭಾಗದಲ್ಲಿ 8 ನೇ ರ್ಯಾಂಕ್ ಪಡೆದ ಕು. ಆಶ್ರಿತಾ ಕೆ. ಎಂ ಇವರುಗಳನ್ನು ಕೆವಿಜಿ ಸ್ಮರಣಾರ್ಥ ಕೊಡಮಾಡುವ ಚಿನ್ನದ ಪದಕ ನೀಡಿ ಸನ್ಮಾನಿಸಲಾಯಿತು.

ಹಾಗೆಯೇ ಪ್ರೊ ಕಬಡ್ಡಿಯಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಪ್ರತಿನಿಧಿಸಿ ಗೆಲುವಿನ ಸಾಧನೆಗೈದ ಕೆವಿಜಿ ಕ್ರೀಡಾ ಅಕಾಡೆಮಿಯಲ್ಲಿ ತರಬೇತಿ ಹೊಂದಿದ ದ್ವಿತೀಯ ಕಲಾ ಪದವಿ ವಿದ್ಯಾರ್ಥಿ ಅಭಿಷೇಕ್ ಗೌಡ ಮತ್ತು ಎನ್ ಎಸ್ ಎಸ್ ಸ್ವಯಂಸೇವಕ ನಾಗಿ ರಾಜ್ಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವ ಅವಕಾಶ ಸಾಧಿಸಿದ ದ್ವಿತೀಯ ಬಿಕಾಂ ವಿದ್ಯಾರ್ಥಿ ಜೋಸ್ ಬಿನ್ ಬಾಬು ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾಲೇಜಿನಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು, ಕಾಲೇಜಿನ ವಿವಿಧ ಸಂಘಗಳಿಂದ ಆಯೋಜಿಸಿದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ರಜತ್ ಕುಮಾರ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಕು. ಹಿತಶ್ರೀ ಉದ್ಘಾಟಕರನ್ನು ಪರಿಚಯಿಸಿ, ಕಾರ್ಯದರ್ಶಿ ಅನ್ವಿತ್ ಸಂದೇಶ ವಾಚಿಸಿದರು. ಉಪಾಧ್ಯಕ್ಷೆ ಕು. ಚೈತನ್ಯ ವಂದಿಸಿದರು. ವಿಶೇಷವಾಗಿ ಡಿಜಿಟಲ್ ಸ್ಕ್ರೀನ್ ನಿಂದ ಅಲಂಕರಿಸಿದ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.