▶️ ಸುಳ್ಯ ಕಾಂಗ್ರೆಸ್ ನಲ್ಲಿ ಶಿಸ್ತುಕ್ರಮ, ಅಮಾನತು, ಉಚ್ಛಾಟನೆ ಪರ್ವ
▶️ ಗ್ಯಾರಂಟಿ ನಿರೀಕ್ಷೆಯಲ್ಲಿರುವ ಕಾರ್ಯಕರ್ತರಲ್ಲಿ ಅಸಮಾಧಾನ
✍️ ನಾಯರ್ ಕೆರೆ
ವಿಧಾನ ಸಭಾ ಚುನಾವಣೆಯ ಅಭ್ಯರ್ಥಿ ಘೋಷಣೆಯ ತರುವಾಯ ಸುಳ್ಯ ಕಾಂಗ್ರೆಸ್ ನಲ್ಲಿ ಉದ್ಭವಿಸಿದ್ದ ಗೊಂದಲ ಚುನಾವಣೆ ವೇಳೆಗೆ ಸ್ವಲ್ಪ ಪ್ರಮಾಣದಲ್ಲಿ ಶಮನಗೊಂಡಿತ್ತಾದರೂ ಇದೀಗ ಶಿಸ್ತುಕ್ರಮದ ಹೆಸರಿನಲ್ಲಿ ಮತ್ತೆ ಮುನ್ನಲೆಗೆ ಬಂದಿದೆ.
ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಜಿ. ಕೃಷ್ಣಪ್ಪ ಮತ್ತು ನಂದಕುಮಾರ್ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಜಿ. ಕೃಷ್ಣಪ್ಪರಿಗೆ ಟಿಕೆಟ್ ಘೋಷಣೆಯಾಯಿತು. ಇದು ನಂದಕುಮಾರ್ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತಲ್ಲದೆ, ನಂದಕುಮಾರ್ ಬೆಂಬಲಿಗರು ಬಹಿರಂಗ ಆಕ್ರೋಶವನ್ನೂ ವ್ಯಕ್ತಪಡಿಸತೊಡಗಿದರು.
ನಂದಕುಮಾರ್ ಬೆಂಬಲಿಗರ ಹಲವು ಸಭೆಗಳು ನಡೆಯಿತು. ಚುನಾವಣೆಗೆ ನಾಮಪತ್ರ ಸಲ್ಲಿಸುವ ಘೋಷಣೆಯೂ ಆಯಿತು. ಬಿರುಸಿನ ಚಟುವಟಿಕೆಗಳು ನಡೆಯತೊಡಗಿತು.
ಕೊನೆಗೆ ಡಿ.ಕೆ.ಶಿವಕುಮಾರ್ ಇತ್ತಂಡದವರನ್ನೂ ಬೆಂಗಳೂರಿಗೆ ಕರೆಯಿಸಿ ಮಾತನಾಡಿ ಮಾಜಿ ಸಚಿವ ರಮಾನಾಥ ರೈ ಅವರಲ್ಲಿ ಅಸಮಾಧಾನ ಶಮನ ನಡೆಸುವಂತೆ ಸೂಚಿಸಿದರು.
ವರಿಷ್ಠರ ಸೂಚನೆ ಮೇರೆಗೆ ರಮಾನಾಥ ರೈ ಯವರು ಸುಳ್ಯಕ್ಕೆ ಬಂದಾಗ ಮತ್ತೊಂದು ಹೈಡ್ರಾಮ ನಡೆದುಹೋಯಿತು. ಹಲವು ನಾಯಕರ ವಿರುದ್ದ ನಂದಕುಮಾರ್ ಬೆಂಬಲಿಗರು ಹರಿ ಹಾಯ್ದ ಘಟನೆ ನಡೆಯಿತು.
ಗೊಂದಲ ಶಮನಗೊಳ್ಳುವ ಸೂಚನೆ ಕಾಣಲಿಲ್ಲ. ಆದರೆ ನಂದಕುಮಾರ್ ನಾಮಪತ್ರ ಸಲ್ಲಿಸಲಿಲ್ಲ. ಈ ಎಲ್ಲ ವಿದ್ಯಮಾನಗಳು ಕಾಂಗ್ರೆಸ್ ನ ಪ್ರಚಾರದ ವೇಗಕ್ಕೆ ತಡೆ ಒಡ್ಡಿತು.
ಕೊನೆಗೆ ಚುನಾವಣಾ ವೀಕ್ಷಕರಾಗಿ ಆಗಮಿಸಿದ ನಾಯಕರೊಂದಿಗೆ ಹಲವು ನಾಯಕರು ಮಾಡಿದ ಮನವಿಯ ಮೇರೆಗೆ ಮತ್ತೆ ರಮಾನಾಥ ರೈಯವರ ಸಮ್ಮುಖದಲ್ಲಿ ಸೇರಿದ ಇತ್ತಂಡಗಳು ಒಟ್ಟಾಗಿ ಕೈ ಕುಲುಕಿ ಬಂದರು.
ನಂತರದ ದಿನಗಳಲ್ಲಿ ನಂದಕುಮಾರ್ ಪರವಾಗಿದ್ದ ಕೆಲವು ನಾಯಕರು ಚುನಾವಣಾ ಪ್ರಚಾರಕೆ ಬಂದಿದ್ದರೂ ಬಹುತೇಕರು ಅಂತರವನ್ನು ಕಾಪಾಡಿಕೊಂಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸುಳ್ಯಕ್ಕೆ ಬಂದಿದ್ದಾಗ ಹಲವು ನಾಯಕರು ಭಾಗವಹಿಸಲಿಲ್ಲ.
ಕೊನೆಗೆ ಚುನಾವಣೆ ನಡೆದು ಮತ ಎಣಿಕೆ ನಡೆದಾಗ 30 ಸಾವಿರಕ್ಕೂ ಅಧಿಕ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡರು . ಮಾತ್ರವಲ್ಲ ಕಳೆದ ಬಾರಿಗಿಂತಲೂ ಇಲ್ಲಿ ಕಾಂಗ್ರೆಸ್ ಕಡಿಮೆ ಮತಗಳನ್ನು ಪಡೆಯಿತು.
ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದ ಕಾರಣ ಕಾಂಗ್ರೆಸ್ ನಾಯಕರಲ್ಲೂ ಉತ್ಸಾಹ ಮೂಡಿತು. ಜಿ. ಕೃಷ್ಣಪ್ಪರು ಪರಾಜಿತರಾದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದುದರಿಂದ ಸೋಲಿನ ನೋವು ಮರೆತು ಕ್ಷೇತ್ರದಲ್ಲಿ ಓಡಾಡುತ್ತೇನೆ ಎಂದು ಘೋಷಿಸಿದರು. ಹಿಂದುತ್ವದ ಪ್ರಚಾರದಿಂದಲೇ ಸೋಲಾಗಿದೆ. ಸೋಲಿನ ಕುರಿತು ಆತ್ಮಾವಲೋಕನ ಮಾಡುವುದಾಗಿ ನಾಯಕರು ಹೇಳಿದರು.
ಆದರೆ ಚುನಾವಣಾಪೂರ್ವವಾಗಿ ನಡೆದ ವಿದ್ಯಮಾನಗಳು, ಸಾಮಾಜಿಕ ಜಾಲತಾಣಗಳ ಟೀಕೆಗಳು, ಚುನಾವಣಾ ಪ್ರಚಾರದ ವೇಳೆ ನಡೆದ ಕೆಲವು ಘಟನೆಗಳು ಕೃಷ್ಣಪ್ಪರ ಅಸಮಾಧಾನಕ್ಕೆ ಕಾರಣವಾಗಿತ್ತು. ಹಲವು ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸತೊಡಗಿದ್ದರು. ಮಾತ್ರವಲ್ಲ ಲಿಖಿತವಾಗಿ ಪಕ್ಷದ ಶಿಸ್ತು ಸಮಿತಿಗೆ ದೂರನ್ನೂ ಸಲ್ಲಿಸಿದರು.
ವರಿಷ್ಠರ ಸೂಚನೆ ಮೇರೆಗೆ ಡಿಸಿಸಿ ಸುಳ್ಯ , ಕಡಬ ಬ್ಲಾಕ್ ಕಾಂಗ್ರೆಸ್ ಗಳಿಂದ ವರದಿ ಅಪೇಕ್ಷಿಸಿತು. ಎರಡೂ ಬ್ಲಾಕ್ ಗಳು ವರದಿಯನ್ನೂ ನೀಡಿತು.
ಈ ಪೈಕಿ ಸುಳ್ಯ ಬ್ಲಾಕ್ ನಂದಕುಮಾರ್ ವಿರುದ್ಧ ಶಿಸ್ತುಕ್ರಮದ ಶಿಫಾರಸು ಹಾಗೂ ಐವರ ಉಚ್ಛಾಟನೆಯ ವರದಿಯ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದರೆ, ಕಡಬ ಬ್ಲಾಕ್ ಕಾಂಗ್ರೆಸ್ ಬೆಳವಣಿಗೆಗಳ ವರದಿಯನ್ನು ಡಿಸಿಸಿಗೆ ಸಲ್ಲಿಸಿತು.
ಎರಡೂ ಬ್ಲಾಕ್ ಗಳ ವರದಿ ಆಧರಿಸಿ ರೆಹಮಾನ್ ಖಾನ್ ನೇತೃತ್ವದ ಶಿಸ್ತು ಸಮಿತಿ ಸುಳ್ಯ ಹಾಗೂ ಕಡಬ ಬ್ಲಾಕ್ ಗಳ ಒಟ್ಟು 17 ಮಂದಿಯನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಿತು. ಡಿಸಿಸಿ ಸದಸ್ಯರಾದ ಮೂವರಿಗೆ ಶೋಕಾಸ್ ನೋಡಿ ಏಳು ದಿನಗಳ ಒಳಗೆ ಉತ್ತರಿಸುವಂತೆ ಸೂಚಿಸಿತು.
ಅಮಾನತು ಮತ್ತು ಉಚ್ಛಾಟನೆ ಕ್ರಮ ನಂದ ಕುಮಾರ್ ಹಾಗೂ ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಯಿತು. “ಅಮಾನತು ಮಾಡಿದವರಿಗೆ ತಲೆ ಕೆಟ್ಟಿದೆ” ಎಂದು ಖಾರವಾಗಿಯೇ ಹೇಳಿಕೆ ನೀಡಿದ ನಂದಕುಮಾರ್ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಂ ವಿರುದ್ಧ ಹರಿಹಾಯ್ದರು. ಇದಕ್ಕೆ ಕಟುವಾಗಿ ತಿರುಗೇಟು ನೀಡಿದ ಜಯರಾಂ ಅವರು , ” ಕೇವಲ ಅಧಿಕಾರಕ್ಕಾಗಿ ವಲಸೆ ಬಂದವರಿಗೆ ತಲೆ ಕೆಟ್ಟಿದೆಯೇ ಹೊರತು ನಮಗಲ್ಲ ಎಂದರು.
ನನ್ನನ್ನು ಅಮಾನತು ಅಥವಾ ಉಚ್ಛಾಟನೆ ಮಾಡುವ ಯೋಗ್ಯತೆ ಇವರಿಗಿದೆಯೇ ಎಂದು ಮಹೇಶ್ ಕುಮಾರ್ ಕರಿಕ್ಕಳ ಪ್ರಶ್ನಿಸಿದರು.
ಪಕ್ಷ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳು ಆರಂಭಗೊಳ್ಳುತ್ತಿರುವ ಈ ಹೊತ್ತಿನಲ್ಲಿ ನಡೆಯುತ್ತಿರುವ ಇಂಥಹ ಬೆಳವಣಿಗೆಗಳು ಕಾರ್ಯಕರ್ತರಲ್ಲಿ ಅಸಮಾಧಾನ ಹುಟ್ಟು ಹಾಕಿದೆ.
ರಮಾನಾಥ ರೈ ಯವರ ನೇತೃತ್ವದಲ್ಲಿ ಸಂಧಾನ ನಡೆದ ಮೇಲೂ , ಅನೇಕರು ಚುನಾವಣಾ ಪ್ರಚಾರದಲ್ಲು ಭಾಗವಹಿಸಿದ ಮೇಲೂ ಇಂಥಹ ಶಿಸ್ತು ಕ್ರಮದ ಅಗತ್ಯವೇನು ಎಂದು ಹಲವು ನಾಯಕರು, ಕಾರ್ಯಕರ್ತರು ಪ್ರಶ್ನಿಸತೊಡಗಿದ್ದಾರೆ.
ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಪ್ರಚಾರ ಮಾಡದೇ, ಎಐಸಿಸಿ ಅಧ್ಯಕ್ಷರು ಭಾಗವಹಿಸಿದ ಕಾರ್ಯಕ್ರಮದಲ್ಲೂ ಭಾಗವಹಿಸದೆ, ಪಕ್ಷದ ಸೋಲಿಗೆ ಕಾರಣರಾದವರ ಮೇಲೆ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುವವರ ಮೇಲೆ ಶಿಸ್ತು ಕ್ರಮ ಅನಿವಾರ್ಯ ಎಂದು ಹೇಳುವವರೂ ಇದ್ದಾರೆ.
ಈಗ ಅಮಾನತು ಮತ್ತು ಉಚ್ಛಾಟನೆಗೊಳಪಟ್ಟವರ ಮೇಲೆ ಬೇರೆ ಭೇರೆ ಸಂದರ್ಭಗಳನ್ನು, ಸನ್ನಿವೇಶಗಳನ್ನು ಉಲ್ಲೇಖಿಸಿ ಕೃಷ್ಣಪ್ಪರು ದೂರು ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ವಿಪರ್ಯಾಸವೆಂದರೆ ಶಿಸ್ತುಪಾಲನಾ ಸಮಿತಿ ಉಚ್ಛಾಟನೆ ಮಾಡಿದ ಹೆಸರುಗಳಲ್ಲಿ ಕೆ. ಗೋಕುಲ್ ದಾಸ್ ಮತ್ತು ಆನಂದ ಬೆಳ್ಳಾರೆಯವರ ಹೆಸರೂ ಇದೆ. ಆದರೆ ಸುಳ್ಯ ಬ್ಲಾಕ್ ಕಾಂಗ್ರೆಸ್ ನೀಡಿದ ಅಮಾನತು ಪಟ್ಟಿಯಲ್ಲಿ ಈ ಹೆಸರುಗಳಿಲ್ಲ!
ಒಟ್ಟಿನಲ್ಲಿ ರಾಜ್ಯ ಸರಕಾರ ಟೇಕಾಫ್ ಆಗಿ ನಿಗಮ, ಮಂಡಳಿ, ನಾಮ ನಿರ್ದೇಶನದ ದಿನಗಳನ್ನು ಎದುರು ನೋಡುತ್ತಿರುವ ಈ ದಿನಗಳಲ್ಲಿ ಕಾಂಗ್ರೆಸ್ ನ ವಿದ್ಯಮಾನಗಳು ಕಾಫಿ ಕಪ್ ಒಳಗಿನ ಸುಂಟರಗಾಳಿಯಂತಾಗಿದೆ.