ಅಜ್ಜಾವರ ಮೇನಾಲ ಉರೂಸ್ ಕಾರ್ಯಕ್ರಮ ಜೂನ್ ೧೬ರಿಂದ ೨೦ರವರೆಗೆ ನಡೆಯಲಿದ್ದು ಮೇನಾಲ ಪರಿಸರದಲ್ಲಿ ನಡೆಯುವ ಊರೂಸ್ ಕಾರ್ಯಕ್ರಮದ ನಿಮಿತ್ತ ಇಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಡಾ. ಪಿ ಗಾನಾ ಕುಮಾರ್ ರವರ ನೇತೃತ್ವದಲ್ಲಿ ಎರಡು ಧರ್ಮದ ಮುಖಂಡರೊಂದಿಗೆ ಸಭೆ ನಡೆಯಿತು.
ಸಭೆಯಲ್ಲಿ ಎರಡು ಧರ್ಮದ ಮುಖಂಡರೊಂದಿಗೆ ಪ್ರತ್ಯೇಕ ಪ್ರತ್ಯೇಕ ಸಭೆ ನಡೆಸಿ ಮಾತುಕತೆ ನಡೆಸಿದ ಡಿ ವೈ ಎಸ್ ಪಿ ಅವರವರ ಅಭಿಪ್ರಾಯಗಳನ್ನು, ಸಮಸ್ಯೆಗಳ ವಿವರಗಳನ್ನು ಪಡೆದುಕೊಂಡರು.
ಬಳಿಕ ಮಾತನಾಡಿದ ಅವರು ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ,ಪರಸ್ಪರ ಸೌಹಾರ್ದತೆಯಿಂದ ಕಾರ್ಯಕ್ರಮ ನಡೆಯಲು ಎರಡೂ ಪಂಗಡದವರು ಶಾಂತಿ ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.ಯಾರು ಯಾರಿಗೂ ತೊಂದರೆ ನೀಡದೆ ನಾಡಿನ ಶಾಂತಿ ಸೌಹಾರ್ದತೆಗೆ ದಕ್ಕೆ ಬಾರದ ರೀತಿಯಲ್ಲಿ ಅವರವರ ಜವಾಬ್ದಾರಿಯನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಮೊದಲಿಗೆ ಹಿಂದೂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದ ಡಿ ವೈ ಎಸ್ ಪಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಿಂದ ಅಭಿಪ್ರಾಯಗಳನ್ನು ಪಡೆದು ಜಿಲ್ಲಾಧಿಕಾರಿಯವರು ಊರೂಸ್ ಕಮಿಟಿಯವರಿಗೆ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಬಗ್ಗೆ ಮತ್ತು ಅವರು ಅನುಸರಿಸಬೇಕಾದ ನಿಬಂಧನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪೊಲೀಸ್ ಇಲಾಖೆ ವತಿಯಿಂದ ಅಲ್ಲಿ ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ಕೊಡುವುದು, ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿಕೊಳ್ಳುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ. ಆದ್ದರಿಂದ ನಿಮ್ಮೆಲ್ಲರ ಸಹಕಾರ ಪೊಲೀಸ್ ಇಲಾಖೆಗೆ ಬೇಕಾಗಿದೆ. ಅದನ್ನು ನಾವು ನಿಮ್ಮಿಂದ ಬಯಸುತ್ತೇವೆ ಎಂದು ಹೇಳಿದರು. ರಕ್ಷಣೆಯನ್ನು ನಾವು ಕೊಡಬೇಹುದೇ ವಿನಹ: ಕಾರ್ಯಕ್ರಮ ನಡೆಸಲು ಅನುಮತಿ ಕೊಡುವವರು ನಾವಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರುಗಳು ಕೂಡ ತಮ್ಮ ತಮ್ಮ ಅಭಿಪ್ರಾಯಗಳನ್ನು ಮತ್ತು ಉರೂಸ್ ನಡೆಸುವ ಸ್ಥಳದ ವಿವಾದಗಳನ್ನು ಕುರಿತು ಅಧಿಕಾರಿಗಳಲ್ಲಿ ತಿಳಿಸಿದರು. ನಿಯೋಗದಲ್ಲಿ ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲ್ಲಿ, ಕಾರ್ಯದರ್ಶಿ ಶುಭೋದ್ ಶೆಟ್ಟಿ ಮೇನಾಲ, ಮುಖಂಡರುಗಳಾದ ರಾಜೇಶ್ ಶೆಟ್ಟಿ ಮೇನಾಲ, ಮಹೇಶ್ ಕುಮಾರ್ ರೈ ಮೇನಾಲ, ಪ್ರಮೋದ್ ಶೆಟ್ಟಿ, ಚನಿಯ ಕಲ್ತಡ್ಕ, ವಿನಯಕುಮಾರ್ ಕಂದಡ್ಕ, ಕಮಲಾಕ್ಷ ರೈ, ಲತೀಶ್ ಗುಂಡ್ಯ ಉಪಸ್ಥಿತರಿದ್ದರು.
ಬಳಿಕ ಅಜ್ಜಾವರ ಮೇನಾಲ ಮಸೀದಿ ಕಮಿಟಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದ ಪೊಲೀಸ್ ಅಧಿಕಾರಿಗಳು ಉರೂಸ್ ಕಾರ್ಯಕ್ರಮಕ್ಕೆ ಅನುಮತಿ ಲಭಿಸಿರುವ ಪತ್ರದಲ್ಲಿ ಇರುವ ನಿಬಂಧನೆಗಳ ಬಗ್ಗೆ ತಿಳಿಸಿ ಈ ಎಲ್ಲಾ ನಿಬಂಧನೆಗಳನ್ನು ಚಾಚು ತಪ್ಪದೇ ಪಾಲಿಸುವಂತೆ ತಿಳಿಸಿದರು. ಉರೂಸ್ ನಡೆಸುವ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಿಕೊಳ್ಳಬಾರದು. ಅಂಗಡಿ ಮುಂಗಟ್ಟುಗಳನ್ನು ಯಾವುದೇ ಕಾರಣಕ್ಕೂ ರಸ್ತೆ ಬದಿಯಲ್ಲಿ ಇಡಲು ಅವಕಾಶ ನೀಡಬಾರದು.ಕಾರ್ಯಕ್ರಮಕ್ಕೆ ಬಂದ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು, ಇತರ ಧರ್ಮದವರಿಗೆ ನೋವುಂಟು ಮಾಡುವ ಯಾವುದೇ ರೀತಿಯ ಮಾತುಗಳು ಅಥವಾ ಪ್ರಚಾರಗಳು ನಡೆಯಬಾರದು, ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವಾಗ ಕೋಮು ಪ್ರಚೋದನೆಯ ಯಾವುದೇ ರೀತಿಯ ಹಾಕಬಾರದು, ನಿಬಂಧನೆಯಲ್ಲಿ ತಿಳಿಸಿದಂತೆ ಅಗ್ನಿಶಾಮಕ ವಾಹನ ಮತ್ತು ಆಂಬುಲೆನ್ಸ್ ವಾಹನ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಧ್ವನಿ ವ್ಯವಸ್ಥೆಗಳನ್ನು ನಿಯಮಿತವಾಗಿ ಬಳಸಿಕೊಳ್ಳಬೇಕು, ಸ್ಥಳೀಯ ಪರಿಸರದಲ್ಲಿ ಇರುವ ವೃದ್ಧರಿಗೆ ರೋಗಿಗಳಿಗೆ ತೊಂದರೆ ಉಂಟಾಗುವ ರೀತಿಯಲ್ಲಿ ಕಾರ್ಯಕ್ರಮದಿಂದ ಸಮಸ್ಯೆ ಉಂಟಾಗಬಾರದು, ಕೇವಲ ಕಾರ್ಯಕ್ರಮ ನಡೆಯುವ ದಿನಕ್ಕೆ ಮಾತ್ರ ಸ್ಥಳದ ಅವಕಾಶವನ್ನು ನೀಡಲಾಗಿರುವ ಬಗ್ಗೆ, ಸ್ಥಳದ ಯಥಾ ಸ್ಥಿತಿಯನ್ನು ಕಾಪಾಡಿಕೊಳ್ಳುವ ಬಗ್ಗೆ, ಮುಂತಾದ ನಿಬಂಧನೆಗಳನ್ನು ವಿವರಿಸಿದರು. ಅಲ್ಲದೆ ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದ ಕೊಡದೆ ಊರಿನಲ್ಲಿ ಶಾಂತಿ ಕಾಪಾಡಲು ಎಲ್ಲರೂ ಮುಂದಾಗಿರಬೇಕು ಎಂದು ಹೇಳಿದರು.
ಈ ಎಲ್ಲಾ ನಿಬಂಧನೆಗಳನ್ನು ಒಪ್ಪಿಕೊಂಡಿರುವ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದರು.
ಉರೂಸ್ ಸಮಿತಿಯ ಪರವಾಗಿ ಅಜ್ಜಾವರ ಮೇನಾಲ ಮಸೀದಿ ಕಮಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ, ಪದಾಧಿಕಾರಿಗಳಾದ ಅಂದಾನ್ ಹಾಜಿ, ಶರೀಫ್ ರಿಲಾಕ್ಸ್, ಅಬ್ದುಲ್ಲ ಕುಂಞಿ , ಅಬ್ದುಲ್ಲಾ ಜಿ, ಮಹಮ್ಮದ್ ಕುಂಞಿ ಮೇನಾಲ, ಸಿದ್ದೀಕ್ ಡೆಲ್ಮಾ, ಶಾಫಿ ಮಡಿಕೇರಿ ಮೊದಲಾದವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ವೃತ್ತ ನಿರೀಕ್ಷಕ ನವೀನ್ ಚಂದ್ರಜೋಗಿ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್, ತನಿಖಾ ವಿಭಾಗದ ಎಸ್‌ಐ ರತ್ನ ಕುಮಾರ್ ಉಪಸ್ಥಿತರಿದ್ದರು.