ಕನಕಮಜಲು, ಜಾಲ್ಸೂರಿನಲ್ಲಿ ಮನೆ ನುಗ್ಗಿ ಕಳ್ಳತನ

0

ಕಳ್ಳತನದ ವಿಷಯ ತಿಳಿದು ತಮ್ಮ ಮನೆ ಪರಿಶೀಲಿಸಿದಾಗ ಅಲ್ಲಿಯೂ ಕಳ್ಳತನ

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಮಜಲು ಹಾಗೂ ಜಾಲ್ಸೂರು ಎಂಬಲ್ಲಿ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಚಿನ್ನ ಮತ್ತು ಹಣವನ್ನು ದೋಚಿರುವ ಘಟನೆ ವರದಿಯಾಗಿದೆ.

ಎರಡು ಮನೆಯವರು ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.


ಕನಕಮಜಲು ಗ್ರಾಮದ ಸಣ್ಣಮೂಲೆ ಕೆ.ಮೂಸಾ. ಎಂಬವರ ಪುತ್ರ ಕೆ.ಮಹಮ್ಮದ್ ಹಸನ್ ಎಂಬವರ ಮನೆಯಲ್ಲಿ ಕಳವು ಕೃತ್ಯ ನಡೆದಿದ್ದು ಮಹಮ್ಮದ್ ಹಸನ್ ಅವರು ಜೂ.17ರಂದು ಪುತ್ತೂರಿನ ಪರ್ಪುಜಾ ಬಳಿ ತಮ್ಮ ಹೆಂಡತಿಯ ಚಿಕ್ಕಮ್ಮನ ಮನೆಗೆ ಸಂಸಾರದೊಂದಿಗೆ ತೆರಳಿದ್ದರು ಎನ್ನಲಾಗಿದ್ದು ಜೂ.18ರಂದು ವಾಪಾಸ್ ಮನೆಗೆ ಬಂದಿದ್ದರು. ಬಳಿಕ ಎಂದಿನಂತೆ ಕೆಲಸಕ್ಕೆ ಹೋಗಿರುತ್ತಾರೆ.


ಜೂ.21ರಂದು ಹಣದ ಅವಶ್ಯಕತೆ ಕಂಡಾಗ ಮನೆಯಲ್ಲಿಯ ಗೋದ್ರೇಜ್ ಕೀ ತಗೆದು ನೋಡಿದಾಗ ಅದರಲ್ಲಿ ಇಟ್ಟಿದ್ದ 50 ಸಾವಿರ ಹಣ ಇಲ್ಲದೇ ಇರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ನಂತರ ಪರಿಶೀಲಿಸಿದಾಗ ಅವರ ಹೆಂಡತಿಯ 30 ಗ್ರಾಂ‌ ಚಿನ್ನದ ಸರ‌ಕೂಡ ಕಾಣೆಯಾಗಿತ್ತು..


ಈ ವೇಳೆ ಕಳ್ಳತನದ ವಿಷಯ ಬೆಳಕಿಗೆ ಬಂದಿದ್ದು ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶ ಮಾಡಿ ಗಾಡ್ರೇಜ್ ನಲ್ಲಿದ್ದ ನಗದು ಹಾಗೂ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾಗಿ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿಯೂ ಅದೇ ರೀತಿಯ ಕಳ್ಳತನ ನಡೆದಿದ್ದು ಅಲ್ಲಿಯೂ ಕೂಡ ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭ ಕಳ್ಳತನವಾಗಿರುವ ಬಗ್ಗೆ ಮನೆಯವರಿಗೆ ತಿಳಿದು ಬಂದಿದೆ.


ಅಬ್ದುಲ್ ರಜಾಕ್ ಎಂಬವರ ಮನೆಯಲ್ಲಿ ಕಳವು ಕೃತ್ಯ ನಡೆದಿದ್ದು,ಅಬ್ದುಲ್ ರಜಾಕ್ ಹಾಗೂ ಅವರ ಸಹೋದರ ಮಹಮ್ಮದ್ ಸಾದೀಕ್ ಅವರು ಅಡ್ಕಾರ್ ಮಸೀದಿಯ ಬಳಿಯಲ್ಲಿರುವ ಕ್ವಾಟ್ರಸ್ ನಲ್ಲಿ ತಮ್ಮ ಸಂಸಾರದೊಂದಿಗೆ ಒಟ್ಟಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.


ಜೂ.17ರಂದು ತಮ್ಮ ತಂದೆ ತಾಯಿ ಮನೆಯಾದ ಜಾಲ್ಸೂರು ಗ್ರಾಮದ ಪೈಚಾರ್ ಎಂಬಲ್ಲಿಗೆ ಮನೆಗೆ ಬೀಗ ಹಾಕಿ ತೆರಳಿದ್ದು, ಜೂ.18ರಂದು ವಾಪಾಸ್ ಮನೆಗೆ ಬಂದಿದ್ದು ಎಂದಿನಂತೆ ಕೆಲಸಕ್ಕೆ ಹೋಗಿರುತ್ತಾರೆ. ಜೂ.21ರಂದು ತಮ್ಮ ಬಾಡಿಗೆ ಮನೆಯ ಪಕ್ಕದ ಹಸನ್ ಎಂಬವರ ಮನೆಯಲ್ಲಿ ಕಳ್ಳತನವಾದ ಸುದ್ದಿ ಕೇಳಿ ತಮ್ಮ ಮನೆಯಲ್ಲಿದ್ದ ಗೋಡ್ರೇಜ್ ಕೀ ತಗೆದು ನೋಡಿದಾಗ ಅದರಲ್ಲಿದ್ದ ರಜಾಕ್ ಅವರ ಹೆಂಡತಿ ಉಪಯೋಗಿಸುತ್ತಿದ್ದ 6 ಗ್ರಾಂ ಚಿನ್ನದ ಕಿವಿ ಓಲೆ, ತಮ್ಮನ ಹೆಂಡತಿ ಉಪಯೋಗಿಸುತ್ತಿದ್ದ 6 ಗ್ರಾಂ ತೂಕದ ಚಿನ್ನದ ಕಿವಿ ಓಲೆ ಹಾಗೂ 6 ಗ್ರಾಂ ತೂಕದ ವಿವಿಧ ನಮೂನೆಯ ಚಿನ್ನದ ಉಂಗುರಗಳು – 3 ಮತ್ತು ತಮ್ಮನ ಹೆಂಡತಿ ಉಪಯೋಗಿಸುತ್ತಿದ್ದ 5 ಗ್ರಾಂ ತೂಕದ ಉಂಗುರಗಳ ಚಿನ್ನದ ಸೆಟ್ ಗಳನ್ನು ಕಳ್ಳರು ಕದ್ದೋಯ್ದಿರುವ ಬಗ್ಗೆ ತಿಳಿದು ಬಂದಿದೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಮನೆಯವರು ಮನೆಮಂದಿ ಮನೆಯಲ್ಲಿಲ್ಲದೇ ಇದ್ದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶ ಮಾಡಿ ಗೋಡ್ರೇಜ್ ನಲ್ಲಿದ್ದ ಚಿನ್ನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ