ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ ಪತ್ರಿಕಾಗೋಷ್ಠಿ
ಬೆಳ್ಳಾರೆ ಘನತ್ಯಾಜ್ಯ ವಿಲೇವಾರಿ ಘಟಕದ ವಾಹನಕ್ಕೆ ಇನ್ನೊಂದು ತಿಂಗಳೊಳಗೆ ಇನ್ನೋರ್ವ ಚಾಲಕಿಯನ್ನು ನೇಮಿಸಬೇಕೆಂದು ಇ.ಒ. ನೇತೃತ್ವದ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ ತಿಳಿಸಿದ್ದಾರೆ.
ಜೂ.೨೪ ರಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಧ್ಯಕ್ಷರು “ಬೆಳ್ಳಾರೆಯ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ೨೦೨೧ ಜುಲೈ ೯ ರಂದು ಲಕ್ಷ್ಮೀ ಸಂಜೀವಿನಿ ಮಹಿಳಾ ಒಕ್ಕೂಟದೊಂದಿಗೆ ಪಂಚಾಯತು ಒಪ್ಪಂದ ಕರಾರು ಮಾಡಿಕೊಂಡಿತ್ತು. ತದನಂತರ ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರ ಆದೇಶದಂತೆ ತ್ಯಾಜ್ಯ ಘಟಕದ ವಾಹನಕ್ಕೆ ಎರಡನೇ ಚಾಲಕಿಯನ್ನು ನಿಗದಿಪಡಿಸಿ ತಾ.ಪಂ. ಆದೇಶದಂತೆ ಅನುಮೋದಿಸಲಾಗಿತ್ತು. ಆದರೆ ಸಂಜೀವಿನಿ ಒಕ್ಕೂಟದವರು ಅದನ್ನು ಒಪ್ಪದೆ, ಗೊಂದಲ ನಿವಾರಿಸಿ ಹೇಳುವುದಾಗಿ ಹೇಳಿದ್ದರು.
2023 ಫೆಬ್ರವರಿ 7 ರಂದು ಹೊಸ ಕರಾರು ಪತ್ರ ಮಾಡಿಕೊಳ್ಳುವಂತೆ ಸಂಜೀವಿನಿಯವರಿಗೆ ಹೇಳಿದ್ದರೂ ಅವರು ಮಾಡಿಲ್ಲ. ಪೇಟೆಯಲ್ಲಿ ಸಂಗ್ರಹವಾದ ಮೊತ್ತದ ವಿವರವನ್ನು ಕೊಟ್ಟಿರಲಿಲ್ಲ. 2023 ಮಾರ್ಚ್ 7 ರಂದು ನಾಗರಿಕರು, ಬೆಳ್ಳಾರೆ ಪೇಟೆಯ ವರ್ತಕರ ಹೆಸರಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ಹೋಗಿ, ತ್ಯಾಜ್ಯ ಘಟಕದ ಈಗಿರುವ ವಾಹನ ಚಾಲಕಿಯನ್ನು ಬದಲಾಯಿಸಬಾರದೆಂದು ಒತ್ತಾಯಿಸಲಾಗಿತ್ತು. ಚಾಲಕಿಯನ್ನು ಬದಲಾಯಿಸುವ ಯಾವುದೇ ಪ್ರಸ್ತಾವನೆ ನಮ್ಮ ಮುಂದಿರಲಿಲ್ಲ. ಎರಡನೇ ಚಾಲಕಿ ನೇಮಕದ ನಂತರ ತಲಾ 15 ದಿನಗಳ ಕಾಲ ಕರ್ತವ್ಯ ನಿರ್ವಹಿಸಬೇಕೆಂದು ಪಂಚಾಯತ್‌ನಲ್ಲಿ ನಿರ್ಣಯಿಸಲಾಗಿತ್ತು ಎಂದರು.
೭ ದಿನಗಳೊಳಗೆ ಕರಾರು ಪತ್ರ ಮಾಡಿಕೊಳ್ಳುವಂತೆ ೨೦೨೩ ಎಪ್ರಿಲ್ ೬ ರಂದು ಪಂಚಾಯತ್‌ನಿಂದ ನೋಟೀಸ್ ನೀಡಿದ ಬಳಿಕ ಶುಲ್ಕ ಸಂಗ್ರಹಣಾ ಜವಾಬ್ದಾರಿಗೆ ಗೀತಾ ಪ್ರೇಮ್‌ರವರು ರಾಜೀನಾಮೆ ನೀಡಿದ್ದಾರೆ. ಆ ಬಳಿಕ ಮೇ.೨೩ ರಂದು ನಡೆದ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತ್ಯಾಜ್ಯ ಘಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೆಲಸಗಾರರಿಗೆ ಬಾಕಿ ವೇತನವನ್ನು ಪಾವತಿಸುವುದೆಂದು ನಿರ್ಣಯ ಮಾಡಲಾಗಿತ್ತು.
ಜೂ.೬ ರಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರ ನೇತೃತ್ವದಲ್ಲಿ ನಡೆದ ಘನತ್ಯಾಜ್ಯ ಘಟಕದ ಸಭೆಯಲ್ಲಿ, ಘಟಕದ ಕೆಲಸಗಾರರಿಗೆ ಬಾಕಿ ಇದ್ದ ಸಂಬಳ ಕೊಡಲು ನಿರ್ಧಾರವಾಯಿತಲ್ಲದೆ, ಪೇಟೆಯಲ್ಲಿ ಸಂಗ್ರಹಿಸಲು ಬಾಕಿ ಇರುವ ತ್ಯಾಜ್ಯ ಶುಲ್ಕವನ್ನು ಒಂದು ವಾರದೊಳಗೆ ಸಂಗ್ರಹಿಸಿ ಕೊಡಬೇಕೆಂದೂ, ಎರಡನೇ ಚಾಲಕಿಯಾಗಿ ಬರಲು ಭವ್ಯರವರು ನಿರಾಕರಿಸಿರುವುದರಿಂದ 1 ತಿಂಗಳೊಳಗೆ ಸಂಜೀವಿನಿ ಒಕ್ಕೂಟದಿಂದ ಇನ್ನೊಬ್ಬ ಸದಸ್ಯರನ್ನು ಎರಡನೇ ಚಾಲಕಿಯಾಗಿ ಮಾಡಬೇಕೆಂದೂ ನಿರ್ಣಯವಾಗಿದೆ” ಎಂದು ಚಂದ್ರಶೇಖರ ಪನ್ನೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಂಚಾಯತ್ ಸದಸ್ಯರುಗಳಾದ ನಮಿತಾ ರೈ, ಶ್ವೇತಾ, ಭವ್ಯ, ಜಯಶ್ರೀ ಉಪಸ್ಥಿತರಿದ್ದರು.