ಸುಜ್ಞಾನದ ದಾರಿ ತೋರಿದ ಗುರುಗಳಿಗೊಂದು ನಮನ
- ಬೃಂದಾ ಪೂಜಾರಿ ಮುಕ್ಕೂರು
ಗುರುಗಳ ಆಶೀರ್ವಾದ ಪಡೆದು ಧನ್ಯರಾಗುವ ಆಶಯದಿಂದ ಗುರು ಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆಷಾಢ ಮಾಸದ ಹುಣ್ಣಿಮೆಯಂದು ಆಚರಿಸುವ ಈ ಹಬ್ಬವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನದಂದು ಗುರುವನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂಬುದು ನಂಬಿಕೆಯಾಗಿದೆ. ಅದಾಗ್ಯೂ, ಈ ಬಾರಿ ಎರಡು ದಿನಗಳ ಕಾಲ ಗುರು ಪೂರ್ಣಿಮಾ ಹಬ್ಬ ಇರಲಿದೆ. ಆದರೆ ಯಾವ ದಿನದಂದು ಆಚರಿಸಿದರೆ ಉತ್ತಮ ಎಂಬುದು ಹಲವರಲ್ಲಿ ಗೊಂದಲ ಉಂಟಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಗುರು ಪೂರ್ಣಿಮಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯುತ್ತಾರೆ. ಏಕೆಂದರೆ ಮಹಾಭಾರತ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವೇದವ್ಯಾಸರು ಈ ದಿನ ಜನಿಸಿದ್ದರು. ಈ ಬಾರಿ ಜುಲೈ 2 ಮತ್ತು ಜುಲೈ 3 ರಂದು ಗುರು ಪೂರ್ಣಿಮಾ ಹಬ್ಬ ಬಂದಿದೆ.
ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದ ಧಾರ್ಮಿಕ ಗ್ರಂಥಗಳಲ್ಲಿ, ಗುರು ಪೂರ್ಣಿಮೆಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಪುರಾತನ ಸಂಸ್ಕೃತಿಯ ಪ್ರಕಾರ, ದೇವರ ನಂದರ ಗುರು ತುಂಬಾ ಮುಖ್ಯ. ಸಮಾಜದ ಮತ್ತು ಅದರ ನಿರ್ಮಾಣ ಪ್ರಕ್ರಿಯೆಯ ಅವಿಭಾಜ್ಯ ಅಂಗ.
ಗುರುಬ್ರಹ್ಮ ಗುರುರ್ವಿಷ್ಣು ಗುರುರ್ದೇವೋಃ ಮಹೇಶ್ವರಃ, ಗುರು ಸಾಕ್ಷತಾ ಪರಂ ಬ್ರಹ್ಮಃ ತಸ್ಮೈ ಶ್ರೀ ಗುರವೇ ನಮಃ- ಅಂದ್ರೆ ಓ ಗುರುಗಳೇ, ನೀವು ದೇವರಿಗೆ ಸಮಾನರು. ನೀವು ಭಗವಾನ್ ವಿಷ್ಣು ಮತ್ತು ನೀವು ಭಗವಾನ್ ಶಿವ- ದೇವರುಗಳ ದೇವರು. ಓ ಗುರುವೇ, ನೀನೇ ಪರಮ ಜೀವಿ ಮತ್ತು ನೀನೇ ನನಗೆ ಬ್ರಹ್ಮ. ಆದ್ದರಿಂದ, ಓ ಪೂಜ್ಯ ಗುರುವೇ, ನಾನು ನಿಮ್ಮ ಮುಂದೆ ನಮಸ್ಕರಿಸುತ್ತೇನೆ ಎಂದರ್ಥ.
ಚಾಂದ್ರಮಾನ ಮಾಸದ ಆಷಾಢದಲ್ಲಿ ಶುಕ್ಲ ಪಕ್ಷದಲ್ಲಿ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಗುರು ಪದದಲ್ಲಿ ‘ಗು’ ಎಂದರೆ ಕತ್ತಲೆ, ಅಜ್ಞಾನ ಮತ್ತು ‘ರ’ು ಎಂದರೆ ನಿವಾರಣೆ ಅಥವಾ ತೆಗೆದುಹಾಕುವಿಕೆಯನ್ನು ಸೂಚಿಸುತ್ತದೆ. ಆದ್ದರಿಂದ, ಗುರು ಅಕ್ಷರ ನಮ್ಮ ಜೀವನದಿಂದ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುವವನು, ನಮ್ಮನ್ನು ಜ್ಞಾನವಂತರನ್ನಾಗಿ ಮಾಡುವವನು ಮತ್ತು ನಮ್ಮ ಜೀವನದಲ್ಲಿ ಮತ್ತು ಮನಸ್ಸಿನಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ.
ಗುರು ಪೂರ್ಣಿಮೆಯ ಇತಿಹಾಸ ಮತ್ತು ಮಹತ್ವ- ಬ್ರಹ್ಮ ದೇವರಿಂದ ಪಠಿಸಲ್ಪಟ್ಟ ಎಲ್ಲಾ 4 ವೇದಗಳನ್ನು ಗುರು ವ್ಯಾಸರು ಬರೆದಿದ್ದಾರೆ ಎಂದು ಹೇಳಲಾಗುತ್ತದೆ. ಈ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯು ಸಂತ ವ್ಯಾಸ ಮಾಡಿದ ಕೆಲಸಕ್ಕೆ ಋಣಿಯಾಗಿದ್ದಾನೆ ಎಂದು ಹೇಳಲಾಗುತ್ತದೆ. ಅವರು ಹಲವಾರು ಪುರಾಣಗಳನ್ನು ಸಹ ಬರೆದಿದ್ದಾರೆ. ಆ ಕಾಲದಿಂದಲೂ, ಗುರುಗಳಿಗೆ ಒಂದು ದಿನವನ್ನು ಅರ್ಪಿಸಲಾಯಿತು ಮತ್ತು ಈ ದಿನವನ್ನು ‘ಗುರು ಪೂರ್ಣಿಮಾ’ ಎಂದು ಕರೆಯಲಾಗುತ್ತದೆ.
ಗುರುಪೂರ್ಣಿಮೆಯನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ. ಮಹರ್ಷಿ ವೇದ ವ್ಯಾಸರಿಗೆ ವೇದಗಳ ಜ್ಞಾನವಿತ್ತು. ಮಹರ್ಷಿ ವೇದ ವ್ಯಾಸರನ್ನು 7 ಚಿರಂಜೀವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅಂದರೆ ಅವರು ಅಮರರಾಗಿದ್ದಾರೆ ಮತ್ತು ಇಂದಿಗೂ ಜೀವಂತರಾಗಿದ್ದಾರೆ ಎಂದು ನಂಬಲಾಗಿದೆ. ಧಾರ್ಮಿಕ ಗ್ರಂಥಗಳಲ್ಲಿ ಅವರನ್ನು ಭಗವಾನ್ ವಿಷ್ಣುವಿನ ರೂಪವೆಂದು ಪರಿಗಣಿಸಲಾಗಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಪೂಜೆ ಮತ್ತು ಉಪವಾಸವನ್ನು ಮಾಡುವುದರಿಂದ ಜಾತಕದಲ್ಲಿ ಗುರು ದೋಷ ಮತ್ತು ಪಿತೃದೋಷವು ಕೊನೆಗೊಳ್ಳುತ್ತದೆ. ಇದಲ್ಲದೆ ಉದ್ಯೋಗ, ವ್ಯಾಪಾರ, ವೃತ್ತಿಯಲ್ಲಿನ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಹಿರಿಯರದ್ದು.
ಪಾಲಕರು ನಮ್ಮ ಜೀವನದಲ್ಲಿ ಮೊದಲ ಗುರುಗಳು, ಆದ್ದರಿಂದ ಭಾರತೀಯ ಸಂಸ್ಕೃತಿಯು ಪೋಷಕರನ್ನು ಗುರುಗಳೆಂದು ಪರಿಗಣಿಸುತ್ತದೆ. ಅದಕ್ಕೆ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂದು ಹೇಳಲಾಗುತ್ತದೆ.