ಕೃಷಿಕರ ಕುರಿತು ಕಾಳಜಿ ವಹಿಸುವ ಬಜೆಟ್ : ಬ್ಲಾಕ್ ಕಾಂಗ್ರೆಸ್ ಶ್ಲಾಘನೆ

0

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೃಷಿಕರ ಕುರಿತು ಹೆಚ್ಚು ಕಾಳಜಿ ವಹಿಸುವ ಬಜೆಟ್ ಮಂಡಿಸಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಶ್ಲಾಘಿಸಿದೆ.
ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರು ಬಜೆಟನ್ನು ಮುಕ್ತ ಕಂಠದಿಂದ ಹೊಗಳಿದರು.


” ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯರು 14 ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಲು ಬಜೆಟಲ್ಲಿ ಅನುದಾನ ಮೀಸಲಿರಿಸಿದ್ದಾರೆ ಎಂದರು.

ಕೃಷಿಕರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದ 3 ಲಕ್ಷ ರೂ. ಕೃಷಿ ಸಾಲದ ಮಿತಿಯನ್ನು 5 ಲಕ್ಷಕ್ಕೆ ಏರಿಸಿದ್ದಾರೆ. ಶೇ. 3 ರ ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದ 10 ಲಕ್ಷ ಕೃಷಿ ಅಭಿವೃದ್ಧಿ ಸಾಲದ ಮಿತಿಯನ್ನು 15 ಲಕ್ಷಕ್ಕೆ ಏರಿಸಿದ್ದಾರೆ. ಕೃಷಿಕರಿಗೆ ಕೃಷಿ ಉತ್ಪನ್ನ ಸಾಗಾಟಕ್ಕಾಗಿ ಪಿಕಪ್ ವಾಹನ ಖರೀದಿಸಲು ಶೇ. 4 ಬಡ್ಡಿದರದಲ್ಲಿ 7 ಲಕ್ಷ ರೂ. ಸಾಲ ಘೋಷಿಸಿದ್ದಾರೆ.‌. ಕೃಷಿ ದಾಸ್ತಾನಿಗಾಗಿ ಗೋಡೌನ್ ನಿರ್ಮಿಸಲು ರೂ. 20 ಲಕ್ಷದ ವರೆಗೆ ಸಾಲ ನೀಡಿಕೆ ಮೊದಲಾದ ಕೊಡುಗೆಗಳನ್ನು ಕೃಷಿಕರಿಗೆ ನೀಡಿದ್ದಾರೆ. ಜೊತೆಗೆ ಸಮುದಾಯಗಳ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿಯೂ ಹಣ ವಿಂಗಡಿಸಿದ್ದು, ಸರ್ವ ಜನರಿಗೂ ಪ್ರಯೋಜನ ದೊರೆಯುವ ಕರ್ನಾಟಕ ಮಾದರಿ ಬಜೆಟನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯ

ಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಎಂ.ಎಚ್., ಕಾರ್ಮಿಕ ನಾಯಕ ಚಂದ್ರಲಿಂಗಂ, ಪಕ್ಷದ ವಕ್ತಾರ ನಂದರಾಜ ಸಂಕೇಶ, ಅಸಂಘಟಿತ ಕಾರ್ಮಿಕ ವರ್ಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಞಾನಶೀಲನ್ ನೆಲ್ಲಿಕುಮೇರಿ ಉಪಸ್ಥಿತರಿದ್ದರು.