⏭️ ✳️ ಈ ಅಮಾವಾಸ್ಯೆಯಂದು ಕಷಾಯ ಕುಡಿಯುವುದ್ಯಾಕೆ ಗೊತ್ತಾ?
⏭️ ✳️ ಆಟಿ ಅಮಾವಾಸ್ಯೆಯ ವಿಶೇಷ ಆಚರಣೆಗಳೇನು?
✍️ ದುರ್ಗಾಕುಮಾರ್ ನಾಯರ್ ಕೆರೆ
ಇಂದು ಆಟಿ ತಿಂಗಳ ಆರಂಭ. ವಿಶೇಷವೆಂದರೆ ಇಂದೇ ಆಟಿ ಅಮಾವಾಸ್ಯೆ ಕೂಡಾ.
ಮತ್ತೂ ವಿಶೇಷವೆಂದರೆ ಈ ಬಾರಿ ಆಟಿ ತಿಂಗಳಲ್ಲಿ ಎರಡೆರಡು ಅಮಾವಾಸ್ಯೆ ಬರುತ್ತಿದೆ. ಒಂದು ಇಂದಾದರೆ ಮತ್ತೊಂದು ಆ.16. ಇಂದಿನದ್ದು ಆಷಾಢ ಮಾಸದ ಅಮಾವಾಸ್ಯೆಯಾದರೆ, ಮತ್ತೊಂದು ಅಧಿಕ ಶ್ರಾವಣ ಮಾಸದ ಅಮಾವಾಸ್ಯೆ.
ಸಹಜವಾಗಿ ಯಾವ ಅಮಾವಾಸ್ಯೆಯನ್ನು ಆಚರಿಸಬೇಕು ಎಂಬುದರಲ್ಲಿ ಜನರಲ್ಲೂ ಗೊಂದಲವಿದೆ. ಆದರೆ ವಿದ್ವಾಂಸರ ಪ್ರಕಾರ ಇಂದಿನ ಅಮಾವಾಸ್ಯೆ ಆಚರಣೆಯೇ ಸೂಕ್ತ. ಅಲ್ಲದೇ ಆಟಿ ಅಮಾವಾಸ್ಯೆಯಂದು ಬಹಳ ಪ್ರಧಾನವಾಗಿ ಪಾಲೆ ಮರದ ಕಷಾಯ ಕುಡಿಯುವ ಕ್ರಮವಿದ್ದು, ಈ ಔಷಧಿ ಹೆಚ್ಚು ಉಷ್ಣಯುಕ್ತವಾಗಿರುವ ಕಾರಣ ಎರಡು ದಿನ ಕುಡಿಯುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ಇದೆ.
ಆಟಿ ಭಾರತೀಯ ಸೌರ ಮಾನ ಕಾಲ ಪದ್ಧತಿಯ ಕ್ಯಾಲೆಂಡರ್ ಪ್ರಕಾರ ನಾಲ್ಕನೇ ತಿಂಗಳು. ಆಟಿ ತಿಂಗಳು ಉಳಿದ ತಿಂಗಳುಗಳಂತಲ್ಲ. ಉಳಿದ ಹನ್ನೊಂದು ತಿಂಗಳು ಒಂದು ಬಗೆಯಾದರೆ ಆಟಿಯ ಬಗೆಯೇ ಬೇರೆ.
ಕನ್ನಡದ ಆಷಾಢ ತಿಂಗಳು ಕೂಡಾ ಹೆಚ್ಚೂ ಕಡಿಮೆ ಆಟಿ ತಿಂಗಳ ಸಂವಾದಿಯಾಗಿಯೇ ಬರುತ್ತದೆ. ಈ ತಿಂಗಳ ಅಮಾವಾಸ್ಯೆಯನ್ನು ಆಷಾಡ ಅಮಾಸೆ , ದೀವಿಗೆ ಕರ್ನಾಟಕ ಅಮಾವಾಸ್ಯೆ ಅಥವಾ ಭೀಮನ ಅಮಾವಾಸ್ಯೆ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಕರೆಯುತ್ತಾರೆ.
ಆಟಿ ಅಮಾವಸ್ಯೆಯೆಂದರೆ ತುಳುವರ ಪಾಲಿಗೆ ವಿಶೇಷವಾದ ದಿನ. ಪರಂಪರಾನುಗತವಾಗಿ ಅಚರಿಸಿಕೊಂಡು ಬರುವ ಹಲವು ಆಚರಣೆಗಳು ಈ ದಿನದಲ್ಲಿದೆ.
ಹಾಗೆ ನೋಡಿದರೆ ಆಟಿ ತಿಂಗಳನ್ನು ಅನಿಷ್ಟ ತಿಂಗಳು, ನಿಕೃಷ್ಣ ತಿಂಗಳು ಎಂದೂ ಕರೆಯುತ್ತಿದ್ದರು. ಪ್ರಾಕೃತಿಕ ವಾದ ಅನೇಕ ಕಾರಣಗಳು ಇದಕ್ಕೆ ಕಾರಣವಾಗಿತ್ತು. ಆದರೆ ಇಂದು ಅಂತಹ ಸ್ಥಿತಿ ಇಲ್ಲ. ವರ್ಷದ ಎಲ್ಲ ತಿಂಗಳುಗಳೂ ಒಂದೇ.!
ಅಮಾವಾಸ್ಯೆ ದಿನದಂದು ತುಳುನಾಡಿನ ಜನ ’ಪಾಲೆ ಮರ’ದ ತೊಗಟೆಯನ್ನು ಕೆತ್ತಿ ಅದರಿಂದ ಕಷಾಯ ತಯಾರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ರೂಢಿ. ಕಾಲದ ನಾಗಾಲೋಟದಲ್ಲಿ ಇಂತಹ ಪಾರಂಪರಿಕ ಪದ್ಧತಿಗಳು ಬದಲಾಗಿದ್ದರೂ ಇಂತಹ ಆಚರಣೆಗಳ ಹಿಂದಿನ ಸತ್ಯ ಮತ್ತು ಸತ್ವ ಅರ್ಥ ಮಾಡಿಕೊಳ್ಳಬೇಕಾಗಿರುವುದೇ ಆಗಿದೆ.
ಕಹಿ ರುಚಿಯ ಪಾಲೆ ಮರದ ಕಷಾಯವನ್ನು ಕುಡಿಯುವುದರಿಂದ ಅನಾರೋಗ್ಯವು ಕಮ್ಮಿಯಾಗುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ, ರೋಗಗಳ ವಿರುದ್ಧ ಹೋರಾಡಲು ಔಷಧೀಯ ಶಕ್ತಿಯನ್ನು ನೀಡುತ್ತದೆ ಎಂಬಿತ್ಯಾದಿ ನಂಬಿಕೆಗಳು ಜನರದ್ದು. ಅಮಾವಾಸ್ಯೆಯ ದಿನ ಖಾಲಿ ಹೊಟ್ಟೆಯಲ್ಲಿ ಈ ಕಷಾಯ ಸೇವಿಸಿದರೆ ಭರ್ಜರಿ ಒಂದು ವರ್ಷ ಅದರ ವ್ಯಾಲಿಡಿಟಿ!
ಈ ಕಷಾಯವನ್ನು ಕುಡಿಯುವುದರಿಂದ ಬೊಜ್ಜು, ಹೈಪರ್ ಕೊಲೆಸ್ಟ್ರಾಲ್ ಸಮಸ್ಯೆಗಳು ದೂರವಾಗುತ್ತವೆ ಎಂದೂ ಆಯುರ್ವೇದ ಜಗತ್ತು ನಂಬಿದೆ. ಮಲೇರಿಯಾ, ಅತಿಸಾರ, ಚರ್ಮದ ಸಮಸ್ಯೆಗಳು, ಅಸ್ತಮಾ ರೋಗದಿಂದ ಪಾರು ಮಾಡುತ್ತದೆ ಎಂಬ ನಂಬಿಕೆಯೂ ಇದೆ.
ಪಾಲೆ ಮರವನ್ನು ಕನ್ನಡದಲ್ಲಿ ಹಾಲೆ ಮರ; ಸಂಸ್ಕೃತದಲ್ಲಿ ಸಪ್ತ ಪರ್ಣಿ ಅಥವಾ ಸಪ್ತ ವರ್ಣಿಕೆ ಎಂದೂ ಕರೆಯುತ್ತಾರೆ. ಸಸ್ಯಶಾಸ್ತ್ರೀಯ ಭಾಷೆಯಲ್ಲಿ ಅಲ್ಸ್ಟೋನಿಯಾಸ್ಕಾಲರಿಸ್ ಎಂಬ ಹೆಸರಿದ್ದರೆ, ಇಂಗ್ಲಿಷ್‌ನಲ್ಲಿ ಡೆವಿಲ್ ಟ್ರೀ ಎಂದೂ ಕರೆಯಲಾಗುತ್ತಾರೆ.
ದೀಪಾವಳಿಯ ಸಂದರ್ಭ ಇದೇ ಹಾಲೆಮರವನ್ನು ನೆಟ್ಟು ಅಲಂಕಾರ ಮಾಡುವುದರಿಂದ ಇದನ್ನು ಬಲೀಂದ್ರ ಮರ ಎಂದೂ ಕರೆಯುತ್ತಾರೆ.
ಹಾಲೆಮರವು ಆಟಿ ತಿಂಗಳಿನಲ್ಲಿ ಹಲವು ಆಯುರ್ವೇದ ಔಷಧಿಯ ಗುಣಗಳನ್ನು ಹೊಂದುತ್ತದೆ ಎಂಬುದು ತುಳುವರ ನಂಬಿಕೆ. ಆಟಿ ಅಮಾವಾಸ್ಯೆಯಂದು ಎಲ್ಲ ಹಕ್ಕಿಗಳು, ಹಾವುಗಳು ಈ ಮರಕ್ಕೆ ಬಂದು ಸೇರುತ್ತವೆ. ಹಾಗಾಗಿ ಈ ಮರಕ್ಕೆ ವಿಶೇಷ ಶಕ್ತಿ ಬರುತ್ತದೆ ಎಂಬುದು ನಂಬಿಕೆ.
ಕಷಾಯಕ್ಕಾಗಿ ಪಾಲೆ ಮರದ ತೊಗಟೆಯನ್ನು ತೆಗೆಯುವುದಕ್ಕೂ ಕ್ರಮವಿದೆ.
ಮನೆಯ ಯಜಮಾನ ಅಮಾವಾಸ್ಯೆಯ ಹಿಂದಿನ ದಿನ ಕಾಡಿಗೆ ಹೋಗಿ ಪಾಲೆ ಮರವನ್ನು ಹುಡುಕಿ ತೆಗೆದು ಮರಕ್ಕೆ ಏನಾದರೂ ಗುರುತನ್ನು ನೀಡಿ ಬರುತ್ತಾನೆ. ಒಣ ಬಾಳೆ ಎಲೆಗಳನ್ನು ಹಗ್ಗದಿಂದ ಕಟ್ಟಿ ಮರದ ಕೆಳಗೆ ಕಲ್ಲು ಇಡುವ ವಾಡಿಕೆ ಇತ್ತು. ಮರುದಿನ ಅಂದರೆ ಆಟಿ ಅಮಾವಸ್ಯೆಯ ದಿನದಂದು ಸೂರ್ಯೋದಯಕ್ಕೂ ಮುನ್ನ ಪಾಲೆಮರದ ಬುಡಕ್ಕೆ ತೆರಳಿ ಕೈಯಲ್ಲೊಂದು ಪೊರಕೆ ಹಿಡಿದು ಮರಕ್ಕೆ ಸುತ್ತು ಬಂದು ಅದರಿಂದ ಮರಕ್ಕೆ ಮೂರು ಪೆಟ್ಟು ಕೊಡುತ್ತಾನೆ. ನಂತರ ಮರದ ತೊಗಟೆಯನ್ನು ಕಲ್ಲಿನಿಂದ ಗುದ್ದಿ ತೆಗೆಯುತ್ತಾನೆ. ಹಾಗೆ ಕಲ್ಲಿನಿಂದ ಗುದ್ದುವಾಗ ಪಾಲೆಮರವು ಬಿಳಿಯ ಹಾಲನ್ನು ಬಿಡುತ್ತದೆ.
ಈ ತೊಗಟೆಯನ್ನು ತೆಗೆಯುವ ಸಂದರ್ಭ ಬರಿ ಮೈಯಲ್ಲೇ ಹೋಗಬೇಕು ಎಂಬ ನಂಬಿಕೆಯೊಂದೂ ಇತ್ತು. ನಿಸರ್ಗದತ್ತವಾಗಿ ದೊರೆಯುವ ಔಷಧಿಯನ್ನು ತೆಗೆಯುವ ಕ್ರಮ ನಿಸರ್ಗದತ್ತವಾಗಿಯೇ ಇರಬೇಕು ಎಂಬ ಕಾರಣಕ್ಕೆ ಕಲ್ಲಿನಿಂದ ಗುದ್ದಿ ತೆಗೆಯಬೇಕೆಂಬ ಸಂಪ್ರದಾಯವಿದ್ದಿರಬಹುದು. ಅಥವಾ ಔಷಧೀಯ ಸತ್ವಗಳು ಕಡಿಮೆಯಾಗಬಹುದು ಎಂಬ ಕಾರಣಕ್ಕೆ ಕತ್ತಿ, ಲೋಹ ವಸ್ತುಗಳನ್ನು ಬಳಸದೇ ಇರಲೂಬಹುದು. ತೊಗಟೆ ತೆಗೆಯುವಾಗ ಒಸರುವ ಹಾಲಿನಿಂದ ತೆಗೆಯುವವನ ಮೈ ಹಾಗೂ ಬಟ್ಟೆ ಹಾಳಾಗಬಹುದು. ಹಾಗಾಗಿ ಬೆತ್ತಲೆಯಾಗಿ ಹೋಗಬೇಕೆಂಬ ಆಚಾರ ರೂಢಿಯಾಗಿರಲೂಬಹುದು. ನಿಸರ್ಗದ ಔಷಧಿ ಪಡೆಯಲು ನೈಸರ್ಗಿಕ ರೂಪದಲ್ಲಿ ಹೋಗಬೇಕೆಂಬ ನಂಬಿಕೆಯೂ ಕಾರಣವಾಗಿರಬಹುದು. ಆದರೆ ಈ ಕಾಲದಲ್ಲಿ ಇಂತಹ ಪದ್ಧತಿ ಅನುಸರಿಸಲಾಗುತ್ತಿಲ್ಲ ಎನ್ನುವುದೂ ಸತ್ಯ.
ಹಾಗೆ ತಂದಂತಹ ತೊಗಟೆಯನ್ನು ಮತ್ತಷ್ಟು ಗುದ್ದಿ , ಅರೆಯುವ ಕಲ್ಲಿನಲ್ಲಿ ಅರೆದು ರಸ ತೆಗೆದು ಅದಕ್ಕೆ ಓಮ, ಬೆಳ್ಳುಳ್ಳಿ, ಅರಿಶಿನ, ಕರಿ ಮೆಣಸು ಮುಂತಾದ ಸಾಧನಗಳನ್ನು ಸೇರಿಸಿ ಕಷಾಯ ಮಾಡಿ ಕುಡಿಯುವುದು ರೂಢಿ. ಇದನ್ನು ಸೇವಿಸಿದ ನಂತರ ಅನೇಕರು ದೇಹಕ್ಕೆ ಉಷ್ಣವಾಗಬಾರದೆಂದು ಗಂಜಿ ಸೇವಿಸುತ್ತಾರೆ. ಕೆಲವೆಡೆ ಪತ್ರೊಡೆಯನ್ನೂ ಸೇವಿಸುತ್ತಾರೆ.
ಮೊದಲೆಲ್ಲ ಪ್ರತಿ ಮನೆಗಳಲ್ಲೂ ಇಂತಹ ಕಷಾಯ ಮಾಡಿ ಸೇವಿಸಲಾಗುತ್ತಿತ್ತು. ಶಾಲೆಗಳಲ್ಲೂ ಕಷಾಯ ವಿತರಣೆ ನಡೆಯುತ್ತಿತ್ತು. ಈಗ ಈ ಅನುಷ್ಠಾನ ಅಪರೂಪವಾಗಿದೆ.
ಅಮಾವಾಸ್ಯೆಯ ದಿನ ಸಂಜೆ ತುಳುವರು ಗುರು ಕಾರ್ನವರಿಗೆ ಅಗೇಲು ಸಮರ್ಪಿಸುತ್ತಾರೆ. ಅಗೇಲು ಎನ್ನುವುದು ನಮ್ಮ ಪೂರ್ವಜರಿಗೆ ಮಾಡುವ ಊಟದ ವ್ಯವಸ್ಥೆಯಾಗಿದೆ. ಗತಿಸಿದ ಹಿರಿಯರು ಬೇರೆ ಲೋಕದಲ್ಲಿದ್ದು ನಮ್ಮನ್ನ ಕಾಪಾಡುತ್ತಾರೆ. ಹಾಗಾಗಿ ಅವರನ್ನು ಸಂತುಷ್ಟಿಪಡಿಸಬೇಕಾದುದು ನಮ್ಮ ಕರ್ತವ್ಯ ಎಂಬ ಕಾರಣಕ್ಕೆ ಇಂತಹ ಕ್ರಮ ಚಾಲ್ತಿಯಲ್ಲಿದೆ.
ಇದು ತುಳುವರ ಒಂದು ರೀತಿಯ ಧಾರ್ಮಿಕ ನಂಬಿಕೆ ಕೂಡಾ. ಅಗೇಲು ತಯಾರಿಸಲು ಕುಟುಂಬದ ಎಲ್ಲಾ ಸದಸ್ಯರು ಜತೆಯಾಗುತ್ತಾರೆ. ಈ ಆಚರಣೆಗೆ ತುಳುವರು ಸಾಮಾನ್ಯವಾಗಿ ನೀರು ದೋಸೆ, ಕೋಳಿ ಪದಾರ್ಥ , ಕಳ್ಳು ಬಳಸುತ್ತಾರೆ.
ಇದರ ಜತೆಗೆ ಆಟಿ ಅಮಾವಾಸ್ಯೆಯಂದು ಪಿತೃ ತರ್ಪಣ ಕಾರ್ಯಕ್ರಮಗಳೂ ನಡೆಯುತ್ತದೆ. ನರಹರಿ ಪರ್ವತ, ಕಾಸರಗೋಡಿನ ತೃಕ್ಕನಾಡು ಮೊದಲಾದ ಕ್ಷೇತ್ರಗಳಲ್ಲಿ ಸಾವಿರಾರು ಮಂದಿ ತೀರ್ಥ ಸ್ನಾನ ಮಾಡುವುದೂ ರೂಢಿ.
ಹೀಗೆ ವಿಶೇಷ ತಿಂಗಳಾಗಿರುವ ಆಟಿಯಲ್ಲಿ ಮತ್ತಷ್ಟು ವಿಶೇಷವಾಗಿರುವ ಅಮಾವಾಸ್ಯೆ ತುಳುವರ ಪಾಲಿನ ನಂಬಿಕೆಯ ಜಗತ್ತಿನ ವಿಸ್ಮಯ.