ಸೌತ್ ಕೊರಿಯಾ ವಿಶ್ವ ಜಾಂಬೂರಿಗೆ ಸುಳ್ಯದ ಮನುಜ ನೇಹಿಗ ಮತ್ತು ಅಶ್ವಿನಿ ಸರವು

0

ಸೌತ್ ಕೊರಿಯಾದಲ್ಲಿ ಆ.02 ರಿಂದ ಆ.12 ರ ವರೆಗೆ ನಡೆಯುವ 25 ನೇ ಅಂತರಾಷ್ಟ್ರೀಯ ಸ್ಕೌಟ್-ಗೈಡ್ ಜಾಂಬೂರಿಯಲ್ಲಿ ಸುಳ್ಯದ ಸಾಂಸ್ಕೃತಿಕ ಪ್ರತಿಭೆಗಳಾದ ಮಾ| ಮನುಜ ನೇಹಿಗ ಮತ್ತು ಕು|ಅಶ್ವಿನಿ ಸರವು ಭಾಗವಹಿಸಲಿದ್ದಾರೆ.

ಮನುಜ ನೇಹಿಗ ಸುಳ್ಯ

ಎಳವೆಯಿಂದಲೇ ಯಕ್ಷಗಾನ, ರಂಗಭೂಮಿ, ಸಂಗೀತ, ನೃತ್ಯ, ಇಂದ್ರಜಾಲ , ಮಣಿಪುರಿ ಸ್ಟಿಕ್ ಡ್ಯಾನ್ಸ್ ಮುಂತಾದ ಬಹುಮುಖ ಪ್ರತಿಭೆಯನ್ನು ಹೊಂದಿರುವ ಸುಳ್ಯ ರಂಗಮನೆಯ ಮನುಜ ನೇಹಿಗ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮೂಡುಬಿದ್ರೆ ಇಲ್ಲಿನ 10 ನೇ ತರಗತಿ ವಿದ್ಯಾರ್ಥಿ. ರಾಜ್ಯಾದ್ಯಂತ ತನ್ನ ‘ದಶಕಲಾ ಕೌಶಲ’ ಕಾರ್ಯಕ್ರಮದ ಮೂಲಕ ಪ್ರಸಿದ್ಧಿ ಪಡೆದವನು. ರಂಗ ಸವ್ಯಸಾಚಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಬಾಲ ಸೇವಾ ರತ್ನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ-ಸನ್ಮಾನಗಳನ್ನು ಪಡೆದಿದ್ದಾನೆ. ಇವನು ಪ್ರಸಿದ್ಧ ರಂಗಕರ್ಮಿ ಡಾ|| ಜೀವನ್ ರಾಂ ಸುಳ್ಯ ಮತ್ತು ಮೌಲ್ಯ ದಂಪತಿಗಳ ಪುತ್ರನಾಗಿದ್ದಾನೆ.

ಅಶ್ವಿನಿ ಎಸ್.

ರೋಟರಿ ಸಂಯುಕ್ತ ಪ.ಪೂ.ಕಾಲೇಜು ಮಿತ್ತಡ್ಕ ಸುಳ್ಯ ಇಲ್ಲಿನ ವಿದ್ಯಾರ್ಥಿನಿ ಅಶ್ವಿನಿ ಎಸ್. ಯಕ್ಷಗಾನ, ಕ್ರೀಡೆ, ಚಿತ್ರಕಲೆ, ಯೋಗ ಮುಂತಾಗಿ ಬಹುಮುಖ ಪ್ರತಿಭೆ. ಜಿಲ್ಲೆ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ
ಅನೇಕ ಬಹುಮಾನಗಳನ್ನೂ ಪಡೆದಿದ್ದಾಳೆ. 2022-23 ನೇ ಸಾಲಿನಲ್ಲಿ ಸ್ಕೌಟ್ – ಗೈಡ್ಸ್ ನ ಗೈಡ್ಸ್ ವಿಭಾಗದಲ್ಲಿ ರಾಜ್ಯಪುರಸ್ಕಾರ ಪಡೆದ ಅಶ್ವಿನಿಯು ಸುಳ್ಯದ ನ್ಯಾಯವಾದಿ ಈಶ್ವರ ಭಟ್ ಸರವು ಮತ್ತು ಅಜ್ಜಾವರ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ವಿದ್ಯಾ ಶಂಕರಿ ಎಸ್. ದಂಪತಿಗಳ ಪುತ್ರಿಯಾಗಿದ್ದಾಳೆ.

ದ.ಕ.ಜಿಲ್ಲೆಯಿಂದ ಒಟ್ಟು 48 ಸ್ಕೌಟ್ ಗೈಡ್ಸ್ ಗಳು ಈ ಉತ್ಸವದಲ್ಲಿ ಭಾಗವಹಿಸಲಿದ್ದು ಅದರಲ್ಲಿ ಸುಳ್ಯದ ಮನುಜ ನೇಹಿಗ ಮತ್ತು ಅಶ್ವಿನಿಯವರು ಸೌತ್ ಕೊರಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಜಾಂಬೂರಿಯ ಬೃಹತ್ ವೇದಿಕೆಯಲ್ಲಿ ತಮ್ಮ ಸಾಂಸ್ಕೃತಿಕ ಪ್ರತಿಭೆಯ ಮೂಲಕ ಭಾರತೀಯ ಕಲೆಗಳನ್ನು ಪ್ರದರ್ಶಿಸಲಿದ್ದಾರೆ.