ಸಮುದಾಯದ ಬೆಳವಣಿಗೆಯಿಂದ ಸುಸ್ಥಿರ ಸಮಾಜ ನಿರ್ಮಾಣ : ದಾಮೋದರ ಕಣಜಾಲು
ಉನ್ನತ ಶಿಕ್ಷಣ ಸಂಸ್ಥೆಗಳು ಸಮುದಾಯದ ಬೆಳವಣಿಗೆಯಲ್ಲಿ ಕೈ ಜೋಡಿಸುವುದರಿಂದ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಳ್ಳಾರೆ ಡಾ|ಶಿವರಾಮ ಕಾರಂತ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೋ.ದಾಮೋದರ ಕಣಜಾಲು ಅಭಿಪ್ರಾಯಪಟ್ಟರು.
ಮಂಗಳೂರು ವಿ.ವಿ., ಎಂಜಿಎನ್‍ಸಿಆರ್ ಇ ಪ್ರಾಯೋಜಿತ ಬೆಳ್ಳಾರೆ ಡಾ|ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹಭಾಗಿತ್ವದಲ್ಲಿ ಮುಕ್ಕೂರು ಸ.ಹಿ.ಪ್ರಾ.ಶಾಲೆಯಲ್ಲಿ ಜು.19 ರಂದು ಉನ್ನತ ಶಿಕ್ಷಣ ಸಂಸ್ಥೆಗಳ ಸಮುದಾಯ ಭಾಗವಹಿಸುವಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಸಮುದಾಯ ಕೇಂದ್ರಿಕೃತ ಕಾರ್ಯಗಳ ಬಗ್ಗೆ ಅಧ್ಯಯನ, ಸ್ಪಂದನೆ ಮಾಡುವುದರಿಂದ ಜಾಗೃತಿ ಮೂಡುತ್ತದೆ. ಜತೆಗೆ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೂ ಪೂರಕವಾಗುತ್ತದೆ ಎಂದ ಅವರು, ನಮ್ಮ ಪ್ರಯತ್ನಗಳು ಆ ಊರು, ಸಮುದಾಯದಲ್ಲಿ ಸಕರಾತ್ಮಕ ಬದಲಾವಣೆಗೆ ನಾಂದಿಯಾದರೆ ಅದುವೇ ಯಶಸ್ಸು ಎಂದರು.
ಮಂಗಳೂರು ವಿ.ವಿ. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ|ಯಶಸ್ವಿನಿ ಮಾತನಾಡಿ, ಸಮುದಾಯ ಅಭಿವೃದ್ಧಿಯಲ್ಲಿ ಮುಖಾಮುಖಿಯಾಗುವುದು ನಮ್ಮ ಸಾಮಾಜಿಕ ಜವಾಬ್ದಾರಿ ಅನ್ನುವ ಮನೋಭಾವ ಮೂಡಬೇಕು. ಕ್ಷಿಪ್ರಗತಿಯಲ್ಲಿ ಓಡುತ್ತಿರುವ ಯುವ ಪೀಳಿಗೆಗೆ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಅಗತ್ಯವಿದ್ದು ಇದಕ್ಕೆ ದತ್ತು ಗ್ರಾಮದಂತಹ ಕಾರ್ಯಕ್ರಮ ಪೂರಕ ಎಂದರು.
ಕೋವಿಡ್ 19 ಪರಿಸ್ಥಿತಿ ಇನ್ನೊಬ್ಬರಿಗೆ ಯಾವ ರೀತಿ ಸ್ಪಂದನೆ ನೀಡಬಹುದು ಅನ್ನುವ ಪಾಠ ಹೇಳಿ ಕೊಟ್ಟಿದೆ. ಹಣ, ಡೊನೇಷನ್ ನೀಡುವುದೇ ಸಮಾಜ ಸೇವೆ ಅನ್ನುವುದನ್ನು ಬದಲಾಯಿಸಿ ಸಮುದಾಯದ ಜತೆಗೆ ಪಾಲ್ಗೊಳ್ಳುವಿಕೆಯ ಮನಸ್ಥಿತಿ ಮೂಡಬೇಕು ಎಂದ ಅವರು ವಿದ್ಯಾರ್ಥಿಗಳು ಸಮುದಾಯದ ನೈಜ ಸಮಸ್ಯೆಗಳನ್ನು ಗುರುತಿಸಿ ಆ ಸಮಸ್ಯೆಗಳಿಗೆ ಸಮುದಾಯದಲ್ಲಿನ ಸಂಪನ್ಮೂಲಗಳನ್ನು ಕ್ರೋಢಿಕರಿಸಿಕೊಂಡು ಸ್ಪಂದನೆ ನೀಡಬೇಕು ಎಂದು ಡಾ.ಯಶಸ್ವಿನಿ ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ,ಇದೊಂದು ಪ್ರೇರಣದಾಯಕ ಕಾರ್ಯಚಟುವಟಿಕೆಯಾಗಿದ್ದು, ಪೆರುವಾಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಶೈಕ್ಷಣಿಕ ಜೀವನ ಸಾಧನೆಗೆ ದಾರಿಯಾಗಬೇಕು. ಸಮುದಾಯ ಆಧಾರಿತ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಾಧ್ಯವಾಗುತ್ತದೆ ಎಂದರು.
ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ,ಡಾ|ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಉತ್ತಮ ಫಲಿತಾಂಶ ದಾಖಲಿಸುತ್ತಿದೆ. ಸಂಸ್ಥೆಯು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡುತ್ತಿರುವುದಕ್ಕೆ ಇಂದಿನ ಕಾರ್ಯಕ್ರಮ ಉದಾಹರಣೆ ಎಂದರು.
ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ವಿದ್ಯಾರ್ಥಿ ಸಮುದಾಯಕ್ಕೆ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದತ್ತು ಗ್ರಾಮ ವಿಚಾರ ಮಹತ್ವದ್ದು. ಊರ ಅಭಿವೃದ್ಧಿ, ಜನರ ಸಹಭಾಗಿತ್ವದ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಪ್ರಯತ್ನ ಯಶಸ್ಸು ಕಾಣಲಿ ಎಂದರು.
ವೇದಿಕೆಯಲ್ಲಿ ಬೆಳ್ಳಾರೆ ಡಾ|ಶಿವರಾಮ ಕಾರಂತ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕಿ ಅರ್ಚನಾ, ಮುಕ್ಕೂರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರಜ್ಞಾ ಪ್ರಾರ್ಥಿಸಿದರು. ಮಂಗಳೂರು ವಿ.ವಿ. ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ|ಯಶಸ್ವಿನಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿ ವಿನಯ ಭಟ್ ಬಡಿಗೇರ್ ವಂದಿಸಿದರು. ವಿದ್ಯಾರ್ಥಿನಿ ಗಾನಶ್ರೀ ನಿರೂಪಿಸಿದರು.ಉಪನ್ಯಾಸಕಿಯರಾದ ಯಶೋಧಾ ಬಿ, ರಶ್ಮಿತಾ ಕರ್ಕೆರಾ, ಸ್ವಪ್ನ ಡಿ ಉಪಸ್ಥಿತರಿದ್ದರು.
ಪೌಷ್ಠಿಕ ಕೈ ತೋಟ
ನಿರ್ಮಿಸುವ ಘೋಷಣೆ
ಪೌಷ್ಠಿಕ ಕೈ ತೋಟ ನಿರ್ಮಿಸಿಕೊಡುವಂತೆ ಮುಕ್ಕೂರು ಶಾಲೆಯ ಪರವಾಗಿ ಶಿಕ್ಷಕ ವೃಂದ, ಎಸ್‍ಡಿಎಂಸಿ ವತಿಯಿಂದ ಪೆರುವಾಜೆ ಡಾ|ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿಗೆ ಪ್ರಾಂಶುಪಾಲ ದಾಮೋದರ ಕಣಜಾಲು ಅವರ ಮೂಲಕ ಮನವಿ ಸಲ್ಲಿಸಲಾಯಿತು. ದತ್ತು ಗ್ರಾಮದ ಅಡಿಯಲ್ಲಿ ಪೌಷ್ಠಿಕ ತೋಟ ನಿರ್ಮಿಸಿಕೊಡುವುದಾಗಿ ಕಾಲೇಜಿನ ವತಿಯಿಂದ ಘೋಷಿಸಲಾಯಿತು. ಪೆರುವಾಜೆ ಗ್ರಾ.ಪಂ. ವತಿಯಿಂದ ಸಹಕಾರ ನೀಡುವುದಾಗಿ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಭರವಸೆ ನೀಡಿದರು.
ವಸತಿ ನಿಲಯದ ಪ್ರಸ್ತಾವ
ಮಧ್ಯಾಹ್ನದ ಮೊದಲು ಮತ್ತು ನಂತರದ ನಡೆದ ಕಾರ್ಯಾಗಾರದ ಅವಧಿಯಲ್ಲಿ ಭಾಗವಹಿಸಿದ ಮುಕ್ಕೂರು ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಜೈನುದ್ದೀನ್ ತೋಟದಮೂಲೆ ಅವರು, ಮುಕ್ಕೂರಿನಲ್ಲಿ ಹಿಂದುಳಿದ ವರ್ಗದ ಬಾಲಕರ ಸರಕಾರಿ ವಸತಿ ನಿಲಯ(ಹಾಸ್ಟೆಲ್) ನಿರ್ಮಿಸಿದಲ್ಲಿ ಶಾಲಾ ವಿದ್ಯಾರ್ಥಿ ಸಂಖ್ಯೆ ಹೆಚ್ಚಳಕ್ಕೆ ಅನುಕೂಲವಾಗಲಿದೆ ಹಾಗೂ ಸ್ವಚ್ಛ ಗ್ರಾಮಕ್ಕೆ ಪೂರಕವಾಗಿ ಘನ ತ್ಯಾಜ್ಯ ಘಟಕ ನಿರ್ಮಾಣದ ಆವಶ್ಯಕತೆಯ ಬಗ್ಗೆ ಪ್ರಸ್ತಾವಿಸಿ ದತ್ತು ಗ್ರಾಮದಡಿ ಈ ಬಗ್ಗೆಯು ಪ್ರಯತ್ನ ಮಾಡುವಂತೆ ಸಲಹೆ ನೀಡಿದರು. ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ ಅವರು, ಗ್ರಾಮಸ್ಥರು ಗ್ರಾಮ ಸಭೆಗಳಲ್ಲಿ ಭಾಗವಹಿಸುವ ಮೂಲಕ ಸಮಸ್ಯೆಗಳನ್ನು ತೆರೆದಿಡುವ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆಗಬೇಕು ಎಂದರು.
ಪ್ರಮುಖರು ಭಾಗಿ
ಕಾರ್ಯಾಗಾರಕ್ಕೆ ಮುಕ್ಕೂರು ಪರಿಸರದ ಆಯ್ದ ಪ್ರಮುಖರಿಗೆ ಆಹ್ವಾನ ನೀಡಲಾಗಿತ್ತು. ಗಣಪಯ್ಯ ಭಟ್ ವನಶ್ರೀ, ಗೋಪಾಲಕೃಷ್ಣ ಭಟ್ ಮನವಳಿಕೆ, ಅಶ್ವಿನಿ ಕೋಡಿಬೈಲು, ತೇಜಸ್ವಿ ನರಸಿಂಹ ಕಾನಾವು, ಶ್ವೇತಾ ನರಸಿಂಹ ಕಾನಾವು, ಲೋಕೇಶ್ ಬೀರುಸಾಗು ಮೊದಲಾದವರು ಪಾಲ್ಗೊಂಡರು.