ಪಂಚಾಯತ್ ಸದಸ್ಯನ ಮೇಲೆ ಸುಳ್ಳು ದೂರು : ಸಭೆಯಲ್ಲಿ ಖಂಡನೆ
ಪಂಚಾಯತ್ ಕೆಲಸಕ್ಕೆ ಅಡ್ಡಿಪಡಿಸಿದವರ ಮೇಲೆ ದೂರು ನೀಡಲು ನಿರ್ಧಾರ
ಪೆರುವಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜು.20 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮುರ್ಕೆತ್ತಿ ವಾರ್ಡಿನ ನಾಗನ ಮಜಲು ಎಂಬಲ್ಲಿ ಪಂಚಾಯತ್ ರಸ್ತೆಗೆ ಮಣ್ಣು ಹಾಕಿರುವುದನ್ನು ತೆರವುಗೊಳಿಸುವ ಸಂದರ್ಭದಲ್ಲಿ ತಕರಾರು ವಿಚಾರದಲ್ಲಿ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿಯವರ ಮೇಲೆ ನೀಡಿರುವ ದೂರು ಸುಳ್ಳಾಗಿದ್ದು ಇದನ್ನು ಸಭೆ ಖಂಡಿಸಿತಲ್ಲದೆ, ಪಂಚಾಯತ್ ಕೆಲಸಕ್ಕೆ ಅಡ್ಡಿಪಡಿಸಿದವರ ವಿರುದ್ದ ದೂರು ನೀಡಲು ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿಯವರು ಮಾತನಾಡಿ ಪೆರುವಾಜೆ ಗ್ರಾಮದ ಮುರ್ಕೆತ್ತಿ ವಾರ್ಡಿನ ನಾಗನಜಲು ಪಂಚಾಯತ್ ರಸ್ತೆಗೆ ದಾಮೋದರ ನಾಯ್ಕ ಮತ್ತು ಥೋಮಸ್ ಡಿಸೋಜಾ ರವರು ರಸ್ತೆಯ ಕಣಿಗೆ ಮಣ್ಣು ಹಾಕಿರುವುದನ್ನು ಸಂಪೂರ್ಣ ತೆರವುಗೊಳಿಸುವಂತೆ 5 ಬಾರಿ ನೋಟಿಸ್ ನೀಡಲಾಗಿದೆ. ಯಾವುದೇ ಸ್ಪಂದನೆ ನೀಡಲಿಲ್ಲ. ಈ ಬಗ್ಗೆ ಜೂ. 9ರಂದು ಸಾಮಾನ್ಯ ಸಭೆಯಲ್ಲಿ
ಚರ್ಚಿಸಲಾಗಿ ರಸ್ತೆಯ ಚರಂಡಿಗೆ ಹಾಕಿರುವ ಮಣ್ಣನ್ನು ಗ್ರಾಮ ಪಂಚಾಯತ್ ವತಿಯಿಂದ ತೆಗೆಯುವುದಾಗಿ ಹಾಗೂ ಇದರ ಖರ್ಚನ್ನು ದಾಮೋದರ ನಾಯ್ಕ, ಮೋನಪ್ಪ ನಾಯ್ಕ ಹಾಗೂ ಥಾಮಸ್ ಡಿಸೋಜ ಇವರಿಂದ ವಸೂಲು ಮಾಡುವುದಾಗಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಈ ಬಗ್ಗೆ ಅವರಿಗೆ ರಿಜಿಸ್ಟರ್ ನೋಟಿಸ್ ಕೂಡಾ ಮಾಡಲಾಗಿದೆ ಎಂದು ಹೇಳಿದರು.
ರಸ್ತೆಯ ಚರಂಡಿ ಮಣ್ಣನ್ನು ಜು.26 ರಂದು ತೆಗೆಯುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಭದ್ರತೆಯನ್ನು ಒದಗಿಸುವಂತೆ ಅನುಮತಿ ಕೇಳಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಿಂದ ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ ಮಣ್ಣು ತೆಗೆಯುವ ಸಂದರ್ಭದಲ್ಲಿ ದಾಮೋದರ ನಾಯ್ಕ ಹಾಗೂ ಕುಟುಂಬದ ಸದಸ್ಯರು ಸೇರಿಕೊಂಡು ವಾರ್ಡಿನ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ ರವರ ಮೇಲೆ ಅಸಭ್ಯ ವರ್ತನೆ ಮತ್ತು ಗಲಾಟೆ ಮಾಡಿಸಲು ಹುನ್ನಾರ ಮಾಡಿದ್ದಾರೆ. ಇದರಲ್ಲಿ ದಾಮೋದರ ನಾಯ್ಕ ,ಸುಂದರ ನಾಯ್ಕ, ಮೋನಪ್ಪ ನಾಯ್ಕ, ವಿಶ್ವನಾಥ ನಾಯ್ಕ,ನಾಗೇಶ ನಾಯ್ಕ, ಮೋಹನ್ ನಾಯ್ಕ ಹಾಗೂ ತಾಲೂಕು ವ್ಯಾಪ್ತಿಗೆ ಒಳಪಡದ ಅಶೋಕ ಪುತ್ತೂರು ಈ ಮೇಲಿನ ಅವರ ಮೇಲೆ ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 15ರಂತೆ ಸರಕಾರಿ ಸೇವೆಗೆ ಅಡ್ಡಿಪಡಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರು ನೀಡುವುದಾಗಿ ನಿರ್ಣಯಿಸಲಾಯಿತೆಂದು ತಿಳಿದು ಬಂದಿದೆ.
ಸಭೆಯಲ್ಲಿ ಪಿಡಿಒ ಮತ್ತು ಸದಸ್ಯರು ಉಪಸ್ಥಿತರಿದ್ದರು.