ಸುಳ್ಯ ನಗರದ ಆಧಾರ್ ಕೇಂದ್ರಗಳಲ್ಲಿ ಜನಸಂದಣಿ

0

ಆಧಾರ್ ತಿದ್ದುಪಡಿ,ಆಧಾರ್ ಗೆ ಫೋನ್ ನಂಬರ್ ಲಿಂಕ್ ಕೆಲಸಗಳಿಗೆ ಹೆಚ್ಚಿದ ಜನರ ಸರತಿ ಸಾಲು

ಸುಳ್ಯ ನಗರದ ಆಧಾರ್ ಕಾರ್ಡ್ ಕೇಂದ್ರಗಳಲ್ಲಿ ಜನರ ಸರತಿ ಸಾಲು ಹೆಚ್ಚಾಗ ತೊಡಗಿದೆ.ಇಂದು ಬೆಳಿಗ್ಗೆನಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದರು ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಬಂದಿರುವಂತಹ ಜನರು ಆಧಾರ್ ಕೇಂದ್ರಗಳಲ್ಲಿ ತಮ್ಮ ತಮ್ಮ ಕೆಲಸ ಕಾರ್ಯಗಳಿಗಾಗಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂದಿದೆ.


ಸುಳ್ಯ ನಗರದ ಕೇಂದ್ರ ಅಂಚೆ ಕಚೇರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,ತಾಲೂಕು ಪಂಚಾಯತ್ ಸುಳ್ಯ, ಬ್ಯಾಂಕ್ ಆಫ್ ಬರೋಡ ಈ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಬಗ್ಗೆ ಕೆಲಸ ಕಾರ್ಯಗಳು ನಡೆಯುತ್ತಿದೆ.


ಇದರಲ್ಲಿ ತಾಲೂಕು ಪಂಚಾಯತ್ ಕೇಂದ್ರದಲ್ಲಿ ಆಧಾರ್ ಕಾರ್ಡಿಗೆ ವಿಳಾಸ ಬದಲಾವಣೆ,ದೂರವಾಣಿ ನಂಬರ್ ಲಿಂಕ್ ಕಾರ್ಯ ಮಾತ್ರ ಮಾಡಲಾಗುತ್ತಿದೆ.ಬಾಕಿ ಉಳಿದ ಕಡೆಗಳಲ್ಲಿ ಹೊಸ ಆಧಾರ್ ಕಾರ್ಡ್, ಹೆಸರು ಮತ್ತು ವಿಳಾಸ ಬದಲಾವಣೆಗಳು,ದೂರವಾಣಿ ಸಂಖ್ಯೆ ಸೇರ್ಪಡೆಯ ಕೆಲಸ ಕಾರ್ಯಗಳು ನಡೆಯುತ್ತಿದೆ.

ಕರ್ನಾಟಕ ರಾಜ್ಯ ಸರ್ಕಾರದ ನೂತನ ಯೋಜನೆಗಳು ಜಾರಿಯಾದ ಹಿನ್ನೆಲೆಯಲ್ಲಿ ಫಲಾನುಭವಿಗಳ ಸಂಖ್ಯೆ ಆಧಾರ್ ಕಾರ್ಡ್ ಕೇಂದ್ರಗಳಿಗೆ ಹೆಚ್ಚಾಗಿ ಬರಲು ಆರಂಭಿಸಿದ್ದಾರೆ.ಪ್ರತಿಯೊಂದು ಕೇಂದ್ರಗಳಲ್ಲಿಯೂ ಜನಸಂದಣಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಿನ ಸಂದರ್ಭ ಟೋಕನ್ ನೀಡಲಾಗುತ್ತಿದ್ದು ಸರ್ವರ್ ಸಮಸ್ಯೆ ಇಲ್ಲದಿದ್ದರೆ ದಿನದಲ್ಲಿ 50ಅಥವಾ 60 ಮಂದಿಗೆ ಆಧಾರ್ ಕಾರ್ಡ್ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತದೆ ಎಂದು ಕೇಂದ್ರದ ಮುಖ್ಯಸ್ಥರು ಸುದ್ದಿಗೆ
ತಿಳಿಸಿದ್ದಾರೆ.

ಸುಳ್ಯ ಕೇಂದ್ರ ಅಂಚೆ ಕಚೇರಿಯ ಅಂಚೆ ಪಾಲಕ ಮೋಹನ್ ಎಂ ಕೆ ಈ ಬಗ್ಗೆ ಪ್ರತಿಕ್ರಿಯಿಸಿ ಮೊದಲು ನಾವು ದಿನದ ಮಧ್ಯಾಹ್ನದ ಬಳಿಕ ಸುಮಾರು 25,30 ಮಂದಿಗೆ ಆಧಾರ್ ಕಾರ್ಡ್ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿದ್ದೆವು.ಅಲ್ಲದೆ ನಮ್ಮಲ್ಲಿ ಒಂದೇ ಸಿಸ್ಟಮ್, ಮತ್ತು ಓರ್ವ ಸಿಬ್ಬಂದಿ ಇರುವ ಕಾರಣ ಹೆಚ್ಚು ಜನರಿಗೆ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ.ಇತ್ತೀಚಿಗೆ ಜನರು ಹೆಚ್ಚಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಸಾರ್ವಜನಿಕರಿಗೆ ಸೇವೆಯನ್ನು ನೀಡುತ್ತಿದ್ದು ಸಂಜೆಯವರೆಗೆ ನಿರಂತರವಾಗಿ ಕಾರ್ಯ ನಡೆಯುತ್ತಿದೆ.ಇನ್ನೂ ಹೆಚ್ಚಾಗಿ ಗ್ರಾಮಗಳಲ್ಲಿ ವಾರ್ಡ್ಗಳಲ್ಲಿ ಕ್ಯಾಂಪುಗಳನ್ನು ಆಯೋಜಿಸಲು ಸ್ಥಳೀಯ ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆ ಕಾರ್ಯಗಳನ್ನು ಒದಗಿಸಿಕೊಟ್ಟಲ್ಲಿ ನಾವು ಕ್ಯಾಂಪ್ ಮೂಲಕ ಜನರಿಗೆ ಸಹಕಾರಿಯಾಗುವ ರೀತಿಯಲ್ಲಿ ಸ್ಪಂದಿಸಬಹುದು ಎಂದು ಹೇಳಿದರು.

ಒಟ್ಟಿನಲ್ಲಿ ಇಂದು ಬೆಳಗಿನಿಂದ ಸುರಿಯುತ್ತಿರುವ ಭಾರಿ ಮಳೆಯನ್ನು ಲೆಕ್ಕಿಸದೆ ಜನರು ಮಾತ್ರ ಆಧಾರ್ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.