ದಾನಿ ರವಿಪ್ರಕಾಶ್ ಅಟ್ಲೂರು- ಪದ್ಮಲತಾ ಅಟ್ಲೂರು ಕೊಡುಗೆಯಾಗಿ ನೀಡಿದ ತರಗತಿ ಕೊಠಡಿಗಳ ಉದ್ಘಾಟನೆ
ಬೆಂಗಳೂರು ಪ್ರಣವ ಫೌಂಡೇಶನ್‌ನಿಂದ ಲ್ಯಾಪ್‌ಟಾಪ್ ಹಸ್ತಾಂತರ
ಅಜ್ಜಾವರ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ದಾನಿ ರವಿಪ್ರಕಾಶ್ ಅಟ್ಲೂರು ಹಾಗೂ ಪದ್ಮಲತಾ ಅಟ್ಲೂರು ರೂ.೧೬ ಲಕ್ಷ ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಎರಡು ತರಗತಿ ಕೊಠಡಿಗಳ ಉದ್ಘಾಟನೆ ಹಾಗೂ ಶಾಲೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವರಾಮ ಕೇನಾಜೆಯವರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಬೆಂಗಳೂರಿನ ಪ್ರಣವ ಫೌಂಡೇಶನ್ ಇವರು ಕೊಡಮಾಡಿದ ಲ್ಯಾಪ್‌ಟಾಪ್ ಗಳ ಸ್ವೀಕಾರ ನಡೆಯಿತು.
ಬೆಳಗ್ಗೆ 8 ಗಂಟೆಗೆ ಆಗಮಿಸಿದ ಶಾಸಕಿ ಭಾಗೀರಥಿ ಮುರುಳ್ಯರವರು ನೂತನ ಕೊಠಡಿಯನ್ನು ಉದ್ಘಾಟಿಸಿ ಶುಭಹಾರೈಸಿ ತೆರಳಿದರು.
ಸಭಾ ಕಾರ್ಯಕ್ರಮ : ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕಿ ಶ್ರೀಮತಿ ಕಲಾವತಿ ವೆಂಕಟಕೃಷ್ಣಯ್ಯ ವಹಿಸಿದ್ದರು. “ಶಿಕ್ಷಕರಿಗೆ ಶಿಷ್ಯಂದಿರೇ ದೊಡ್ಡ ಆಸ್ತಿ ಎಂದ ಅವರು ಮುಖ್ಯ ಶಿಕ್ಷಕ ಶಿವರಾಮ ಕೇನಾಜೆಯವರ ಸೇವೆಯನ್ನು ಶ್ಲಾಸಿದರು.
ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ. ರಮೇಶ್, ಧರ್ಮಸ್ಥಳ ಕ್ಷೇತ್ರದ ಮೇಲ್ವಿಚಾರಕಿ ವಿಶಾಲ, ಗ್ರಾ.ಪಂ. ಸದಸ್ಯ ವಿಶ್ವನಾಥ ಮುಳ್ಯಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಅತ್ಯಾಡಿ ಶುಭಹಾರೈಸಿ ಮಾತನಾಡಿದರು.
ಸಮ್ಮಾನ : ನಿವೃತ್ತ ಶಿಕ್ಷಕ ಶಿವರಾಮ ಕೇನಾಜೆಯವರನ್ನು ಶಾಲಾಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಶಾಲಾ ಅಧ್ಯಾಪಕರ ಪರವಾಗಿ, ರವಿಪ್ರಕಾಶ್ ಅಟ್ಲೂರು ಮನೆಯವರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಿಂದ ಪ್ರತ್ಯೇಕ ಪ್ರತ್ಯೇಕವಾಗಿ ಸಮ್ಮಾನಿಸಲಾಯಿತು. ಅಲ್ಲದೆ, ಶಿವರಾಮ ಕೇನಾಜೆಯವರು ಹಿತೈಷಿಗಳು ಆಗಮಿಸಿ ಗೌರವಿಸಿದರು.
ಸಮ್ಮಾನ ಸ್ವೀಕರಿಸಿದ ಬಳಿಕ ಶಿಕ್ಷಣ ಕ್ಷೇತ್ರದ ಸೇವೆ, ನಡೆದು ಬಂದ ದಾರಿ, ಶಾಲಾ ಮಕ್ಕಳ ಶಿಕ್ಷಣ, ಪೋಷಕರ ಪಾತ್ರ, ದಾನಿಗಳ ಕೊಡುಗೆ ಯನ್ನು ನೆನಪಿಸಿಕೊಂಡು, ಕೃತಜ್ಞತೆ ಸಲ್ಲಿಸಿದರು.
ಸುಳ್ಯ ಕ್ರೈಂ ಎಸ್.ಐ. ಸರಸ್ವತಿ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ದೇವಿಪ್ರಸಾದ್ ಅತ್ಯಾಡಿ, ಪಂಚಾಯತ್ ಸದಸ್ಯರುಗಳಾದ ಶಿವಕುಮಾರ್, ರಾಘವ, ಮಹಾಗಣಪತಿ ಭಜನಾ ಮಂದಿರದ ಅಧ್ಯಕ್ಷ ಧರ್ಮಪಾಲ ಬಟ್ರಮಕ್ಕಿ, ದುರ್ಗಾ ಶಾಮಿಯಾನ ಮಾಲಕ ರವಿಪ್ರಕಾಶ್ ಬೊಮ್ಮೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್ ಯು.ಕೆ. ವೇದಿಕೆಯಲ್ಲಿದ್ದರು.
ಬೇಡಿಕೆ : ಮುಳ್ಯ – ಅಟ್ಲೂರು ಶಾಲೆಗೆ ಇಂಗ್ಲೀಷ್ ಶಿಕ್ಷಕರ ಅಗತ್ಯವಿದೆ. ಶಿಕ್ಷಣ ಇಲಾಖೆ ನಮಗೆ ಆ.೧೦ರೊಳಗೆ ಈ ವ್ಯವಸ್ಥೆ ಕಲ್ಪಿಸಬೇಕು ಎಂದು ರವಿಪ್ರಕಾಶ್ ಅಟ್ಲೂರು ವೇದಿಕೆಯಲ್ಲಿ ಶಿಕ್ಷಣಾಧಿಕಾರಿಗಳಿಗೆ ಬೇಡಿಕೆ ಮುಂದಿಟ್ಟರು. ಆ.೧೦ರೊಳಗೆ ನೀವು ಕೊಡದಿದ್ದರೇ ನಾವೇ ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ವಿಕಲಾಂಗ ವಿದ್ಯಾರ್ಥಿನಿ ನಿಶ್ಮಿತಾರ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವ ಕುರಿತು ರವಿಪ್ರಕಾಶ್ ಅಟ್ಲೂರು ಭರವಸೆ ನೀಡಿದರು.
ವೈ-ಫೈಗೆ ಸಹಾಯ : ಶಾಲೆಯ ಸ್ಮಾರ್ಟ್ ಕ್ಲಾಸ್‌ಗೆ ವೈಫೈಗೆ ತಿಂಗಳಿಗೆ ಗುತ್ತಿದ್ದ ಖರ್ಚು ವೆಚ್ಚವನ್ನು ಇದುವರೆ ತಾನು ಭರಿಸುತ್ತಿದ್ದ ಕುರಿತು ಮುಖ್ಯ ಶಿಕ್ಷಕ ಶಿವರಾಮ ಕೇನಾಜೆಯವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ತಮ್ಮ ಭಾಷಣದ ವೇಳೆ ಗ್ರಾ.ಪಂ. ಸದಸ್ಯ ವಿಶ್ವನಾಥ ಮುಳ್ಯಮಠರವರು ಮುಂದಿನ ತಿಂಗಳಿನಿಂದ ತಾನು ಆ ವ್ಯವಸ್ಥೆಗೆ ಸಹಾಯ ನೀಡುವುದಾಗಿ ಸಭೆಯಲ್ಲಿ ಘೋಷಣೆ ಮಾಡಿದರು.