ಕುತೂಹಲದ ಕೇಂದ್ರವಾಗಿದೆ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆ

0

ಅಧ್ಯಕ್ಷತೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶ್ರೀಮತಿ ತಿರುಮಲೇಶ್ವರಿ ಮರಸಂಕ ಹಾಗೂ ಬಿಜೆಪಿ ಬಂಡಾಯ ಸದಸ್ಯೆ ಶ್ರೀಮತಿ ಸಂಧ್ಯಾ ವಾಗ್ಲೆ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಹಾಗೂ ಬಿಜೆಪಿ ಬಂಡಾಯ ಸದಸ್ಯೆ ಶ್ರೀಮತಿ ಗೀತಾ ಗೋಪಿನಾಥ್ ನಡುವೆ ಉಪಾಧ್ಯಕ್ಷತೆಗೆ ಹಣಾಹಣಿ

ಉಪಾಧ್ಯಕ್ಷತೆ ಚುನಾವಣೆಯಲ್ಲಿ ಪಾಲ್ಗೊಳ್ಳದಿರಲು ಬಿಜೆಪಿ ಬೆಂಬಲಿತ ಸದಸ್ಯರ ತೀರ್ಮಾನ

ಜಾಲ್ಸೂರು ಗ್ರಾಮ ಪಂಚಾಯತಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದ್ದು, ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಮಹಿಳೆಯರಿಗೆ ಹಂಚಿಕೆಯಾಗಿದ್ದು, ಮಹಿಳೆಯರದ್ದೇ ಪಾರುಪತ್ಯ ಬಂದಿದೆ.

ಒಟ್ಟು 17 ಸದಸ್ಯ ಬಲದ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ 11 ಮಂದಿ ಸದಸ್ಯರು, ಕಾಂಗ್ರೆಸ್ ಬೆಂಬಲಿತ 3 ಮಂದಿ ಸದಸ್ಯರು ಹಾಗೂ ಬಿಜೆಪಿ ಬಂಡಾಯವಾಗಿ ಗೆದ್ದು ಸದಸ್ಯರಾಗಿ ಆಯ್ಕೆಯಾಗಿರುವ 3 ಮಂದಿ ಸದಸ್ಯರುಗಳಿದ್ದಾರೆ.

ಪ್ರಸ್ತುತ ಪರಿಶಿಷ್ಟ ಜಾತಿ ಸ್ಥಾನದಿಂದ ಆಯ್ಕೆಯಾಗಿರುವ ಕೆ.ಎಂ. ಬಾಬು ಕದಿಕಡ್ಕ ಅವರು ಅಧ್ಯಕ್ಷರಾಗಿದ್ದು, ಹಿಂದುಳಿದ ವರ್ಗ ಎ ಮಹಿಳಾ ಸ್ಥಾನದಿಂದ ಆಯ್ಕೆಯಾಗಿರುವ ಶ್ರೀಮತಿ ಲೀಲಾವತಿ ಅವರು ಉಪಾಧ್ಯಕ್ಷರಾಗಿದ್ದಾರೆ.

ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಇದೀಗ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದೆ. ಹಿಂದುಳಿದ ವರ್ಗ ಎ ಮಹಿಳಾ ಸ್ಥಾನದಿಂದ ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾಗಿರುವ ಒಟ್ಟು ಮೂರು ಮಂದಿ ಸದಸ್ಯರಿದ್ದು, ಪಕ್ಷದ ತೀರ್ಮಾನದಂತೆ ಮೊದಲ ಒಂದೂಕಾಲು ವರ್ಷದ ಅವಧಿಗೆ ಅಧ್ಯಕ್ಷತೆಗೆ ಬಿಜೆಪಿ ಬೆಂಬಲಿತ ಸದಸ್ಯೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಇನ್ನೊಂದೆಡೆಗೆ ಬಿಜೆಪಿ ಬಂಡಾಯ ಸದಸ್ಯೆಯಾಗಿ ಆಯ್ಕೆಯಾಗಿರುವ ಶ್ರೀಮತಿ ಸಂಧ್ಯಾ ವಾಗ್ಲೆ ಅವರು ಕೂಡ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿ ಬೆಂಬಲಿತರಾಗಿ ಈ ಸ್ಥಾನದಿಂದ ಆಯ್ಕೆಯಾದ ಅಭ್ಯರ್ಥಿಗಳಿಲ್ಲ. ಹಾಗಾಗಿ ಬಿಜೆಪಿಗೆ ಬೆಂಬಲಿತ ಸದಸ್ಯರು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಭಾಗವಹಿಸದಿರಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.
ಆದರೆ ಬಿಜೆಪಿ ಬಂಡಾಯವಾಗಿ ಆಯ್ಕೆಯಾಗಿರುವ ಶ್ರೀಮತಿ ಗೀತಾ ಗೋಪಿನಾಥ್ ಬೊಳುಬೈಲು, ಅವರು ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ನಾಮಪತ್ರವನ್ನು ಚುನಾವಣಾ ಅಧಿಕಾರಿ ಜಗದೀಶ್ ಅವರಿಗೆ ನೀಡಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾಗಿರುವ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ ಅವರು ಕಾಂಗ್ರೆಸ್ ಬೆಂಬಲಿತ ಸದಸ್ಯೆಯಾಗಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದಾರೆ.

ಇದೀಗ ಒಟ್ಟು 17 ಮಂದಿ ಸದಸ್ಯರ ಪೈಕಿ 11 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಾಲ್ಗೊಳ್ಳದೇ ಇರಲು ತೀರ್ಮಾನಿಸಿದ್ದರಿಂದ ಬಿಜೆಪಿ ಬಂಡಾಯ ಮೂರು ಮಂದಿ ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ ಮೂರು ಮಂದಿ ಸೇರಿದಂತೆ ಒಟ್ಟು ಆರು ಮಂದಿ ಸದಸ್ಯರ ಮಧ್ಯೆ ಉಪಾಧ್ಯಕ್ಷತೆ ಚುನಾವಣೆ ನಡೆಯಲಿದ್ದು, ಒಂದು ವೇಳೆ ಮೂರು ಮೂರು ಮತಗಳು ಇಬ್ಬರೂ ಅಭ್ಯರ್ಥಿಗಳಿಗೆ ಬಂದರೆ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದ್ದು, ಯಾರಿಗೆ ಉಪಾಧ್ಯಕ್ಷ ಸ್ಥಾನದ ಅವಕಾಶವಿದೆ ಎಂಬುದನ್ನು ಕಾದುನೋಡಬೇಕಾಗಿದೆ.