ಅನ್ಯ ಕೋಮಿನ ಯುವತಿಯನ್ನು ವಾಹನದಲ್ಲಿ ಕರೆದೊಯ್ದ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ

0

ಹಲ್ಲೆಗೊಳಗಾದ ಯುವಕನಿಂದ ಐವರ ಮೇಲೆ ಪೊಲೀಸ್ ದೂರು; ಒಬ್ಬನ ಬಂಧನ

ಅನ್ಯಕೋಮಿನ ಯುವತಿಯನ್ನು ವಾಹನದಲ್ಲಿ ಕರೆದೊಯ್ದನೆಂಬ ಕಾರಣಕ್ಕೆ ಹಲ್ಲೆಗೊಳಗಾಗಿರುವ ಯುವಕ ಸುಳ್ಯ ಪೊಲೀಸ್ ಠಾಣೆಯಲ್ಲಿ ಐವರು ಆರೋಪಿಗಳ ದೂರು ನೀಡಿದ್ದು ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.

ನಿನ್ನೆ ಸಂಜೆ ಈ ಘಟನೆ ನಡೆದಿದ್ದು ಯುವಕ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅರ್ಜುನ ಎಂಬ ಯುವಕನನ್ನು ವಶಕ್ಕೆ ಪಡೆದಿದ್ದರು. ಈ ವಿಚಾರ ತಿಳಿದ ಸುಳ್ಯದ ಬಿಜೆಪಿ ಮುಖಂಡರು ಪೊಲೀಸ್ ಠಾಣೆಗೆ ತೆರಳಿದ್ದರು. ಪುತ್ತೂರಿನಿಂದ ಅರುಣ್ ಕುಮಾರ್ ಪುತ್ತಿಲ ಕೂಡಾ ಆಗಮಿಸಿದ್ದರು. ಹಲವು ಕಾರ್ಯಕರ್ತರು ಪೊಲೀಸ್ ಠಾಣೆಯ ಆವರಣದಲ್ಲಿ ಸೇರಿದ್ದರು. ತಡರಾತ್ರಿ ಅರ್ಜುನ್ ನನ್ನು ಬಿಟ್ಟು ಕಳುಹಸಲಾಗಿತ್ತು.

ಹಲ್ಲೆಗೊಳಗಾದ ಯುವಕ ಕೇರಳದ ಮಲಪುರಂ ನಿವಾಸಿ ಮೊಹಮ್ಮದ್ ಜಲೀಲ್(39ವರ್ಷ) ಆಗಿದ್ದು ” ತಾನು ಪ್ರಸ್ತುತ ಸುಳ್ಯ ತಾಲೂಕು ಅರಂತೋಡಿನಲ್ಲಿ ರಬ್ಬರ್ ತೋಟವನ್ನು ಕಳೆದ 3 ತಿಂಗಳ ಹಿಂದೆ ಗುತ್ತಿಗೆ ಪಡೆದು ಅರಂತೋಡಿನಲ್ಲಿ ವಾಸವಾಗಿದ್ದು, ಆ.12ರಂದು ತನ್ನ ಪರಿಚಯದ ಯುವತಿಯೋರ್ವಳು ತಾನು ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದು ತನಗೆ ವಿಶ್ರಾಂತಿ ಪಡೆಯಲು ರೂಮ್ ಬೇಕೆಂದು ಕೇಳಿಕೊಂಡ ಮೇರೆಗೆ ಸುಳ್ಯದಲ್ಲಿ ರೂಂ ವ್ಯವಸ್ಥೆ ಮಾಡಿ ಬಳಿಕ ವೈಯಕ್ತಿಕ ಕೆಲಸ ನಿಮಿತ್ತ ತೊಡಿಕಾನಕ್ಕೆ ತೆರಳಿದ್ದಾಗ 5 ಜನ ಆರೋಪಿಗಳು ಕಾರು ಮತ್ತು ಸ್ಕೂಟರ್ ಮೂಲಕ ಕಾರನ್ನು ತಡೆದು ಅವಾಚ್ಯವಾಗಿ ಬೈದು ಕೈಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿ ತೆರಳಿರುತ್ತಾರೆ. ಆರೋಪಿಗಳ ಪೈಕಿ ಮೂವರ ಹೆಸರು ಲತೀಶ್ ಗುಂಡ್ಯ, ವರ್ಷಿತ್ ಹಾಗೂ ಪುನೀತ್ ಎಂಬುದಾಗಿ ಹಲ್ಲೆ ನಡೆಯುತ್ತಿದ್ದಾಗ ತಿಳಿದುಬಂದಿದೆ. ಇನ್ನುಳಿದ 02 ಜನ ಆರೋಪಿಗಳ ಪರಿಚಯ ಇರುವುದಿಲ್ಲ ” ಎಂದು‌ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಲಂ 143, 147, 341, 323, 504, 506, 153(A) ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದ್ದು ಆರೋಪಿಗಳ ಪೈಕಿ ಸುಳ್ಯ ಸೊಣಂಗೇರಿ ನಿವಾಸಿ ಪುನೀತ್ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.