ಕನಕಮಜಲಿನಿಂದ ಜಾಲ್ಸೂರಿನ ತನಕ ಪಂಜಿನ ಮೆರವಣಿಗೆಯಲ್ಲಿ ಸಾಗಿ ಬಂದ ನೂರಾರು ಹಿಂ.ಜಾ. ವೇ. ಕಾರ್ಯಕರ್ತರು
ಭಾರತ ವಿಶ್ವಗುರುವಾದಾಗ ವಿಭಜನೆಗೊಂಡ ಭೂಭಾಗಗಳು ಮತ್ತೆ ಅಖಂಡವಾಗುವುದು ನಿಶ್ಚಿತ : ಶ್ರೀಮತಿ ಹರಿಣಿ ಪುತ್ತೂರಾಯ
ಜಾಲ್ಸೂರು ಹಿಂದೂ ಜಾಗರಣ ವೇದಿಕೆಯ ವತಿಯಿಂದ ಜನಜಾಗೃತಿಗಾಗಿ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮವು ಆ.14ರಂದು ಸಂಜೆ ಜಾಲ್ಸೂರಿನಲ್ಲಿ ಜರುಗಿತು.
ಸಂಜೆ ಕನಕಮಜಲಿನ ಶ್ರೀ ಆತ್ಮಾರಾಮ ದೇವರ ಸನ್ನಿಧಿಯಿಂದ ಹಿಂದೂ ಜಾಗರಣ ವೇದಿಕೆ ನೂರಾರು ಮಂದಿ ಕಾರ್ಯಕರ್ತರ ನೇತೃತ್ವದಲ್ಲಿ ಹೊರಟ ಪಂಜಿನ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಜಾಲ್ಸೂರಿನ ಗೋಳಿಕಟ್ಟೆಯ ತನಕ ಸಾಗಿತು.
ಬಳಿಕ ಜಾಲ್ಸೂರಿನ ಪೆಟ್ರೋಲ್ ಪಂಪ್ ಬಳಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಹಿರಿಯ ಕಾರ್ಯಕರ್ತ ತಿಮ್ಮಯ್ಯ ಆಚಾರ್ಯ ಜಾಲ್ಸೂರು ಅವರು ಸಭಾ ಅಧ್ಯಕ್ಷತೆ ವಹಿಸಿದ್ದರು.
ಹರಿಣಿ ಪುತ್ತೂರಾಯ ಅವರು ದಿಕ್ಸೂಚಿ ಭಾಷಣ ಮಾಡಿ ಮಾತನಾಡಿ ” ಆಗಸ್ಟ್15 ಭಾರತ ದೇಶವು ಸ್ವಾತಂತ್ರ್ಯಗೊಂಡ ಸುದಿನ. ಬ್ರಿಟಿಷರ ಸಂಕೋಲೆಯಿಂದ ಮುಕ್ತಿಯಾದ ದಿನ. ಆದರೆ ಆ.14 ನಮ್ಮ ದೇಶದ ಪಾಲಿಗೆ ಕರಾಳ ನೆನಪಿನ ದಿನ. ಅಖಂಡವಾಗಿದ್ದ ಭಾರತ ಒಡೆದು ಹೋದ ದಿನ. ಈ ದಿನದ ನೋವನ್ನು ದೇಶ ಮರೆಯಲು ಸಾಧ್ಯವಿಲ್ಲ. ಧರ್ಮದ ಆಧಾರದ ಮೇಲೆ ಈ ದೇಶವನ್ನು ಬ್ರಿಟಿಷರು ಒಡೆದು ಹೋಗಿದ್ದರು. ದೇಶದ ಒಂದು ಭೂಭಾಗ ಪಾಕಿಸ್ತಾನ ಆದರೆ ಮತ್ತೊಂದು ಭಾಗ ಪೂರ್ವ ಬಂಗಾಳ , ಅಂದರೆ ಬಾಂಗ್ಲಾದೇಶವಾಗಿ ರೂಪುಗೊಂಡಿತು. ದೇಶವನ್ನು ಮತ್ತೆ ಅಖಂಡವಾಗಿ ಮಾಡುವ ಸಲುವಾಗಿ ಪಂಜಿನ ಮೆರವಣಿಗೆಯನ್ನು ನಡೆಸುತ್ತೇವೆ. ಸ್ವಾತಂತ್ರ್ಯಕ್ಕಾಗಿ ಬಲಿದಾನ ಕೊಟ್ಟವರ ನೆನಪಿಗಾಗಿ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಭಾರತ ದೇಶವು ಮುಂದೊಂದು ದಿನ ಇಡೀ ಪ್ರಪಂಚಕ್ಕೆ ವಿಶ್ವಗುರು ಆಗಲಿದೆ. ಸ್ವಾತಂತ್ರ್ಯ ದೊರೆಯುವ ಸಂದರ್ಭದಲ್ಲಿ ಒಡೆದು ತ್ರಿಖಂಡವಾಗಿ ವಿಭಜನೆಗೊಂಡ ಭೂಭಾಗಗಳು ಆಗ ಮತ್ತೆ ಭಾರತದ ಜೊತೆ ಅಖಂಡವಾಗಿ ಸೇರುವುದು ನಿಶ್ಚಿತ” ಎಂದರು.
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಮಿತಿ ಸದಸ್ಯರಾದ ಚಿನ್ಮಯ್ ಈಶ್ವರಮಂಗಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಧರ್ಮದ ಆಧಾರದಲ್ಲಿ ದೇಶವು ತ್ರಿಖಂಡವಾಗಿ ಕತ್ತರಿಸಲ್ಪಟ್ಟಿತು. ಭಾರತ ದೇಶವನ್ನು ಮತ್ತೆ ಅಖಂಡವಾಗಿ ಒಟ್ಟುಗೂಡಿಸುವ ಅಂಗವಾಗಿ ಪ್ರತೀ ವರ್ಷ ದೇಶದ ಸ್ವಾತಂತ್ರ್ಯೋತ್ಸವದ ಮುನ್ನಾದಿನ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾರೆ” ಎಂದರು.
ಜಾಲ್ಸೂರು ಗ್ರಾ.ಪಂ. ಮಾಜಿ ಸದಸ್ಯ ಜನಾರ್ದನ ಆಚಾರ್ಯ ಅವರು ಧ್ಯೇಯಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಜಾಲ್ಸೂರು , ಕನಕಮಜಲು, ಮಂಡೆಕೋಲು, ಅಜ್ಜಾವರ ಗ್ರಾಮದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ಜಾಲ್ಸೂರು ವಲಯ ಹಿಂ.ಜಾ.ವೇ. ಸಂಚಾಲಕ ಲಕ್ಷ್ಮಣ ಉಗ್ರಾಣಿಮನೆ ಸ್ವಾಗತಿಸಿದರು.