ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯ ವತಿಯಿಂದ ಸುಳ್ಯದಲ್ಲಿ ಬೃಹತ್ ಪಂಜಿನ ಮೆರವಣಿಗೆ- ಸಂಕಲ್ಪ ದಿನ

0

ಸೇವಾ ಸುರಕ್ಷೆ ಸಂಸ್ಕಾರದ ಧ್ಯೇಯ ಹೊಂದಿದ ಸಂಘಟನೆಯಿಂದ ತ್ರಿಖಂಡ ಭಾರತವನ್ನು
ಅಖಂಡ ಭಾರತವನ್ನಾಗಿಸುವ ಸಂಕಲ್ಪವಾಗಲಿ- ಶಿವಪ್ರಸಾದ್ ಮಲೆಬೆಟ್ಟು

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ನಗರ ಇದರ ವತಿಯಿಂದ ಅಖಂಡ ಭಾರತದ ಸಂಕಲ್ಪ ದಿನದಂದು ಬೃಹತ್ ಪಂಜಿನ ಮೆರವಣಿಗೆಯು ಸುಳ್ಯದಲ್ಲಿ ಆ.14 ರಂದು ನಡೆಯಿತು.
ಪಂಜಿನ ಮೆರವಣಿಗೆಗೆ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರೆಮೇಲು ಚಾಲನೆ ನೀಡಿದರು.


ಶಾಸ್ತ್ರಿ ವೃತ್ತದಿಂದ ಹೊರಟ ಮೆರವಣಿಗೆಯು ಸುಳ್ಯದ ಮುಖ್ಯ ರಸ್ತೆಯಲ್ಲಿ ಸಾಗಿ ಗಾಂಧಿನಗರದಿಂದ ಹಿಂತಿರುಗಿ ರಥಬೀದಿಯಲ್ಲಿ ಸಾಗಿ ಬಂದು ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಸಮಾಪನಗೊಂಡಿತು.

ಸಂಕಲ್ಪ ದಿನದ ಸಮಾರಂಭ:

ಶ್ರೀ ಚೆನ್ನಕೇಶವ ದೇವಸ್ಥಾನದ ರಾಜ ಗೋಪುರದ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕ ಲೋಕೇಶ್ ಇರಂತಮಜಲು ವಹಿಸಿದ್ದರು.
ವಿ.ಹೆಚ್.ಪಿ.ವಿಧಿ ಪ್ರಮುಖ್ ಸಂದೀಪ್ ವಳಲಂಬೆ
ಪ್ರಾಸ್ತಾವಿಕ ಮಾತನಾಡಿ ” ತುಂಡರಿಸಿದ ಭಾರತವನ್ನು ಮತ್ತೆ ಅಖಂಡವನ್ನಾಗಿ ಮಾಡುವ ಸದುದ್ದೇಶಕ್ಕಾಗಿ ವಿ.ಹೆಚ್.ಪಿ,ಬಜರಂಗದಳ ಸಂಘಟನೆಯು ಸಂಕಲ್ಪ ಮಾಡಿದೆ. ಪಂಜಿನ ಜ್ವಾಲೆಯಂತೆ ನಮ್ಮ ಹೃದಯದ ಜ್ವಾಲೆಯು ಪ್ರಕಾಶಮಾನವಾಗಿ ಬೆಳಗಿ
ನಮ್ಮ ಕಲ್ಪನೆಯಂತೆ ಅತೀ ಶೀಘ್ರದಲ್ಲಿ ತ್ರಿಖಂಡವಾಗಿರುವ ಭಾರತವನ್ನು ಅಖಂಡವಾಗಿ ನೋಡುವಂತಾಗಬೇಕೆಂಬುದು ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.

ಮಂಗಳೂರು ವಿಭಾಗದ ಸಾಮರಸ್ಯ ಸಹ ಸಂಯೋಜಕ್ ಶಿವಪ್ರಸಾದ್ ಮಲೆಬೆಟ್ಟು
ಮಾತನಾಡಿ
“ಸಂಘಟನೆಯ ಕಾರ್ಯಕರ್ತರು ದೇಶದಾದ್ಯಂತ ಅಖಂಡ ಭಾರತದ ಸಂಕಲ್ಪ ದಿನವನ್ನು ನಿರಂತರವಾಗಿ ಕೈಗೊಂಡಿದ್ದಾರೆ.
ಹಿರಿಯರ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರಕಿತು. ವಿದೇಶಿಗಳಿಗೆ ಭಾರತದ ಆಳ್ವಿಕೆ ಸಿಗಬಾರದು ಒಂದೇ ಭಾವನೆಯಿಂದ ಕೆದಂಬಾಡಿ ರಾಮಯ್ಯ ಗೌಡ ರಂತಹ ಹೋರಾಟಗಾರರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಲಭಿಸಿದೆ ಅಂತಹ ಮಹಾನ್ ವ್ಯಕ್ತಿ ಗಳನ್ನು ಇಂದು ಸ್ಮರಿಸಿಕೊಳ್ಳಬೇಕಾಗಿದೆ. ಬದುಕಿದರೆ ಹುಲಿಯಂತೆ ಬದುಕಬೇಕೆಂಬ ದಿಟ್ಟತನದಿಂದ ಬ್ರಿಟಿಷರ ವಿರುದ್ಧ ಹಿರಿಯರು ಹೋರಾಡಿದರು.


ಭಾರತದ ಪ್ರತಿ ಭಾಗದಲ್ಲಿ ಹಿಂದೂ ಸಂಸ್ಕೃತಿ ಆಚಾರ ವಿಚಾರವನ್ನರಿತ ಬ್ರಿಟಿಷರು ಭಾರತ ವಿಶ್ವ ಗುರು ಆಗುವುದನ್ನರಿತು ದೇಶ ವಿಭಜನೆಯ ದುಷ್ಕೃತ್ಯಕ್ಕೆ ಮುಂದಾದರು.
ವಿದೇಶದಿಂದ ಬಂದ ವಲಸಿಗರು ಹಿಂದೂ ಸಂಸ್ಕೃತಿಯನ್ನು ಒಡೆದು ಆರ್ಥಿಕ ವ್ಯವಸ್ಥೆ ಮೇಲೆ ಆಕ್ರಮಣ ಮಾಡಿದರು. ಧಾರ್ಮಿಕ ಭಾವನೆಗಳನ್ನು ಒಡೆದಾಳುವ ನೀತಿಯಿಂದ ಹಾಗೂ ಜಾತಿ ಜಾತಿಯ ಮಧ್ಯೆ ಸಂಘರ್ಷವನ್ನು ಹುಟ್ಟು ಹಾಕುವ ಮೂಲಕ ಭಾರತವನ್ನು ವಿಭಜನೆಗೆ ಪ್ರಯತ್ನಿಸಿದರು. ರಘುಪತಿ ರಾಘವ ರಾಜಾರಾಮ ಹಾಡನ್ನು ಹಾಗೂ ಒಂದೇ ಬಣ್ಣದ ರಾಷ್ತ್ರಧ್ವಜವನ್ನು ಮೂರು ಭಾಗವನ್ನಾಗಿ ಮಾಡಲಾಯಿತು. ಭಾರತದಲ್ಲಿ ನಮಗೆ
ಇಸ್ಲಾಂ ತತ್ವವನ್ನು ಪಾಲಿಸಲು ಸಾಧ್ಯವಾಗುವುದಿಲ್ಲ ನಮಗೆ ಬೇರೆ ದೇಶ ಬೇಕು ಎಂಬ ಬೇಡಿಕೆಯಿಂದ ಇಸ್ಲಾಂ ರಾಷ್ಟ್ರ ಮಾಡಲು ಮುಂದಾದರು. ಸ್ವಾತಂತ್ರ್ಯ ಸಿಕ್ಕ ಸಂಭ್ರಮ ಆಚರಿಸುವ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಭಾರತೀಯರ ಮೇಲೆ ನಿರಂತರ ದೌರ್ಜನ್ಯ ನಡೆಯಿತು.
ಸೇವಾ ಸುರಕ್ಷಾ ಸಂಸ್ಕಾರ ಧ್ಯೇಯದೊಂದಿಗೆ ವಿ.ಹೆಚ್.ಪಿ. ಬಜರಂಗದಳ ದೇಶಕ್ಕೆ ಶಕ್ತಿ ತುಂಬುವ ಕಾರ್ಯ ಕೈಗೆತ್ತಿಕೊಂಡಿದೆ ಎಂದು
ದಿಕ್ಸೂಚಿ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಅಖಂಡ ಭಾರತ ಸಂಕಲ್ಪದ ಪ್ರತಿಜ್ಞೆ ಮಾಡಲಾಯಿತು.

ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗದಳ ನಗರ ಸಂಯೋಜಕ ಹರಿಪ್ರಸಾದ್ ಬಿ.ವಿ ಉಪಸ್ಥಿತರಿದ್ದರು.

ಶ್ರೀಮತಿ ಪುಷ್ಪಾ ಮೇದಪ್ಪ ವಂದೇ ಮಾತರಂ ಗೀತೆ ಪ್ರಸ್ತುತ ಪಡಿಸಿದರು. ಸಂದೀಪ್ ವಳಲಂಬೆ ಸ್ವಾಗತಿಸಿದರು. ವಿ.ಹೆಚ್.ಪಿ ನಗರ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ
ವಂದಿಸಿದರು. ತೀರ್ಥೇಶ್ ಯಾದವ್ ಕಾರ್ಯಕ್ರಮ ನಿರೂಪಿಸಿದರು.
ಪಂಜಿನ ಮೆರವಣಿಗೆ ಯಲ್ಲಿ ಸ್ಥಳೀಯ ಮುಖಂಡರಾದ ಹರೀಶ್ ಕಂಜಿಪಿಲಿ,ಎ.ವಿ.ತೀರ್ಥ ರಾಮ, ಸುಭೋದ್ ಶೆಟ್ಟಿ ಮೇನಾಲ, ವಿನಯ ಕುಮಾರ್ ಕಂದಡ್ಕ, ಸುನಿಲ್ ಕೇರ್ಪಳ, ಬೂಡು ರಾಧಾಕೃಷ್ಣ ರೈ‌ , ಹರೀಶ್ ಬೂಡುಪನ್ನೆ ಸೇರಿದಂತೆ ನೂರಾರು ಕಾರ್ಯಕರ್ತರು ಕೈಯಲ್ಲಿ ಪಂಜಿನ ದೊಂದಿ ಹಿಡಿದು ಘೋಷಣೆಯೊಂದಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಬಂದರು.