ಕಿರುಕುಳ ಹಾಗೂ ಕೊಲೆ ಯತ್ನ ಆರೋಪದಲ್ಲಿ ಜೈಲು ಸೇರಿದ್ದ ಅಜ್ಜಾವರ ಇರಂತಮಜಲಿನ ನವಾಜ್ ಹಾಗೂ ತಲೆ ಮರೆಸಿಕೊಂಡಿದ್ದ ಆತನ ಮನೆಯವರಿಗೆ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು ದೊರೆತಿರುವುದಾಗಿ ತಿಳಿದುಬಂದಿದೆ.
ಬೊಳುಬೈಲು ಮನೆಯ ಅಬೂಬಕ್ಕರ್ ರ ಮಗಳು ರಿಹಾ ಫಾತಿಮ ಎಂಬವರು ಗಂಡ ನವಾಜ್ ಹಾಗೂ ಗಂಡನ ತಂದೆ ಅಬ್ಬಾಸ್, ತಾಯಿ ಜೈನಾಬಿ, ಸಹೋದರಿಯರಾದ ಉಮೈಝಾ, ಮಿಶ್ರಿಯ ಇವರು ತನಗೆ ದೈಹಿಕ, ಮಾನಸಿಕ ಹಿಂಸೆ ನೀಡುವುದಲ್ಲದೆ, ನವಾಜ್ 2023 ಜು.27 ರಂದು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ.
ಈ ಬಗ್ಗೆ ರಿಹಾ ಫಾತಿಮಾ ಸುಳ್ಯ ಪೋಲೀಸ್ ಠಾಣೆಯಲ್ಲಿ ನವಾಜ್ ಹಾಗೂ ಆತನ ಮನೆಯವರ ವಿರುದ್ದ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೋಲೀಸರು ನವಾಜ್ ನನ್ನು ಬಂಧಿಸಿದ್ದರು. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ನವಾಜ್ ನ ಮನೆಯವರು ತಲೆ ಮರೆಸಿಕೊಂಡಿದ್ದರು.
ಬಂಧನಕ್ಕೊಳಗಾದ ನವಾಜ್ ಜಾಮೀನು ಕೋರಿ ಮಂಗಳೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ತಲೆ ಮರೆಸಿಕೊಂಡಿದ್ದವರು ಕೂಡಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಜವಾಜ್ ಗೆ ಜಾಮೀನು ಹಾಗೂ ಇತರ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿ ಆದೇಶ ಮಾಡಿದೆ.
ಆರೋಪಿಗಳ ಪರ ನ್ಯಾಯವಾದಿಗಳಾದ ನಾರಾಯಣ ಕೆ, ಚಂದ್ರಶೇಖರ, ಅನಿತಾ ಆರ್ ಮತ್ತು ವಿಪುಲ್ ಎನ್.ವಿ. ವಾದಿಸಿದ್ದರು.