ಉಪಗ್ರಹ ಆಂಟೆನಾ ತಯಾರಿಕಾ ತಂಡದಲ್ಲಿ ಭಾಗಿ
ಇಸ್ರೋ ಸಂಸ್ಥೆಯ ಮಹತ್ವದ ಚಂದ್ರಯಾನ-3 ಯಶಸ್ವಿಯಾಗಿದ್ದು, ಈ ಯಶಸ್ಸಿನಲ್ಲಿ ಸುಳ್ಯ ದುಗಲಡ್ಕದ ಶ್ರೀಮತಿ ಮಾನಸ ಜಯಕುಮಾರ್ ರವರು ಕೂಡಾ ಪಾಲು ಪಡೆದಿದ್ದಾರೆ. ಶ್ರೀಮತಿ ಮಾನಸ ಅವರು ಮಂಗಳೂರು ವಿವಿ ಯಲ್ಲಿ ಮಂಗಳಗ್ರಹದ ವಿಚಾರವಾಗಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ.
ಶುಕ್ರಗ್ರಹದ ಕುರಿತು ಸಂಶೋಧನೆಯನ್ನು ಈಗಾಗಲೇ ಪೂರ್ತಿಗೊಳಿಸಿದ್ದಾರೆ.ಮಾರ್ಚ್ ತಿಂಗಳಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಚಂದ್ರಯಾನ – 3 ವಿಚಾರದಲ್ಲಿ ಪ್ರಾಜೆಕ್ಟ್ ವರ್ಕ್ ಶಾಪ್ ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಭಾಗವಹಿಸಿದ್ದರು.ಚಂದ್ರಯಾನ -3 ಉಪಗ್ರಹದ ಆ್ಯಂಟನಾ ತಯಾರಿಕೆಯ 5 ಜನರ ತಂಡದಲ್ಲಿ ಶ್ರೀಮತಿ ಮಾನಸ ಕೂಡಾ ಒಬ್ಬರಾಗಿದ್ದರು. ಇದೇ ಸಂದರ್ಭದಲ್ಲಿ ಆದಿತ್ಯ ಎ 1 ಹಾಗೂ ಶುಕ್ರಯಾನ ದ ಕುರಿತು ತಿಳಿಸಲಾಗಿತ್ತು.
ಮಂಡೆಕೋಲು ಗ್ರಾಮದ ಜಾಲಬಾಗಿಲು ಬಾಲಕೃಷ್ಣ – ಕುಸುಮಾವತಿ ದಂಪತಿಯ ಪುತ್ರಿಯಾಗಿರುವ ಮಾನಸ, ಸುಳ್ಯ ದುಗಲಡ್ಕ ಜಯಕುಮಾರ್ ಬಿ.ಎಸ್. ರವರ ಪತ್ನಿ. ಜಯಕುಮಾರ್ ರವರು ಮಂಗಳೂರು ವಿವಿ ಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಉದ್ಯೋಗಿಯಾಗಿದ್ದಾರೆ. ಇವರ ಮಗಳು ಸನ್ನಿಧಿ ಯೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.
ಮಂಡೆಕೋಲು ಶಾಲೆ ಗಳಲ್ಲಿ ಪ್ರಾಥಮಿಕ, ಅಜ್ಜಾವರ ದಲ್ಲಿ ಪ್ರೌಢಶಿಕ್ಷಣ, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ, ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ, ಮಂಗಳೂರು ವಿವಿಯಲ್ಲಿ ಎಂಎಸ್ಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
“ಇದೊಂದು ಅವಿಸ್ಮರಣೀಯ ಸಂದರ್ಭ. ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ವರ್ಕ್ ಶಾಪ್ ನಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿತು. ಉಪಗ್ರಹ ಆ್ಯಂಟನಾ ತಯಾರಿಕಾ ತಂಡದಲ್ಲಿ ಅವಕಾಶ ಸಿಕ್ಕಿತು. ಇದಕ್ಕಾಗಿ ನನಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಎಂದು ಶ್ರೀಮತಿ ಮಾನಸ ಹೇಳುತ್ತಾರೆ