ಹೊಸಬರ ಡೆಪ್ಟೇಶನ್ ಗೆ ಅಸಮಾಧಾನ : ಎ.ಸಿ.ಯವರಿಗೆ ಮನವಿ ಮಾಡಲು ನಿರ್ಧಾರ
ಒಂದೂವರೆ ತಿಂಗಳ ಹಿಂದೆ ಅಜ್ಜಾವರ ಗ್ರಾಮಕ್ಕೆ ನಿಯೋಜನೆಗೊಂಡಿದ್ದ ಗ್ರಾಮ ಕರಣಿಕ ಮಂಜುನಾಥ ರನ್ನು ಇದೀಗ ಸಂಪಾಜೆಗೆ ವರ್ಗಾವಣೆ ಮಾಡಿರುವುದರಿಂದ ಅಸಮಾಧಾನಗೊಂಡ ಅಜ್ಜಾವರ ಗ್ರಾ.ಪಂ. ಜನಪ್ರತಿನಿಧಿಗಳು ಮತ್ತೆ ಮಂಜುನಾಥ ರನ್ನೇ ಅಜ್ಜಾವರಕ್ಕೆ ನಿಯೋಜಿಸಬೇಕು ಎಂಬ ಬೇಡಿಕೆ ಅಧಿಕಾರಿಗಳ ಮುಂದಿರಿಸಿರುವುದಾಗಿ ತಿಳಿದುಬಂದಿದೆ.
ಅಜ್ಜಾವರ ಗ್ರಾಮ ಕರಣಿಕರಾಗಿದ್ದ ಶರತ್ ರನ್ನು ಒಂದೂವರೆ ತಿಂಗಳ ಹಿಂದೆ ಆಲೆಟ್ಟಿಗೆ ವರ್ಗಾವಣೆ ಮಾಡಲಾಗಿತ್ತು. ಅಜ್ಜಾವರಕ್ಕೆ ಉಬರಡ್ಕ ವಿ.ಎ. ಮಂಜುನಾಥ್ ರನ್ನು ನಿಯೋಜನೆ ಗೊಳಿಸಲಾಗಿತ್ತು. ಇದೀಗ ಒಂದೂವರೆ ತಿಂಗಳು ಆಗುತ್ತಿರುವಾಗಲೇ ಮಂಜುನಾಥ್ ರನ್ನು ಅಜ್ಜಾವರ ದಿಂದ ಸಂಪಾಜೆಗೆ ನಿಯೋಜನೆಗೊಳಿಸಿ ಸುಳ್ಯ ತಹಶೀಲ್ದಾರ್ ಆದೇಶ ಮಾಡಿದ್ದಾರೆ. ಅಜ್ಜಾವರಕ್ಕೆ ಮಂಡೆಕೋಲು ವಿ.ಎ. ಅಜಿತ್ ರಿಗೆ ಪ್ರಭಾರ ವಹಿಸಲಾಗಿದೆ.
ಅಸಮಾಧಾನ : ಒಂದೂವರೆ ತಿಂಗಳ ಹಿಂದೆ ಅಜ್ಜಾವರಕ್ಕೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದ ವಿ.ಎ. ಮಂಜುನಾಥ್ ರನ್ನು ಬೇರೆಡೆ ನಿಯೋಜನೆ ಮಾಡಿರುವ ತಾಲೂಕು ಆಡಳಿತದ ಕ್ರಮದ ವಿರುದ್ಧ ಅಜ್ಜಾವರ ಗ್ರಾ.ಪಂ. ಉಪಾಧ್ಯಕ್ಷ ಜಯರಾಮ ಅತ್ಯಡ್ಕ, ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ಮಾಜಿ ಉಪಾಧ್ಯಕ್ಷೆ ಲೀಲಾ ಮನಮೋಹನ ಅಸಮಾಧಾನ ಗೊಂಡಿದ್ದಾರೆ. ಗ್ರಾಮಕ್ಕೆ ಬಂದು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ಈ ರೀತಿ ಬೇರೆಡೆ ನಿಯೋಜಿಸುವ ಕ್ರಮ ಸರಿಯಲ್ಲ. ನಾವು ತಹಶೀಲ್ದಾರ್ ರಿಗೆ ಈಗಾಗಲೇ ಮನವಿ ಮಾಡಿದ್ದು, ಮಂಜುನಾಥ ರನ್ನು ವಾಪಸ್ ಅಜ್ಜಾವರ ಕ್ಕೆ ಕಳುಹಿಸಬೇಕೆಂದು ಕೇಳಿಕೊಂಡಿದ್ದೇವೆ.
ಈ ಕುರಿತು ಎ.ಸಿ. ಯವರ ಗಮನಕ್ಕೆ ತರಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ತಹಶೀಲ್ದಾರ್ ಮಂಜುನಾಥ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ, ಅಜ್ಜಾವರದ ಮಂಜುನಾಥ್ ರನ್ನು ಸಂಪಾಜೆಗೆ ನಿಯೋಜನೆ ಮಾಡಿದ್ದೇವೆ. ಪುತ್ತೂರಿನಲ್ಲಿ ಈಗಾಗಲೇ ನಿಯೋಜನೆ ಮೇಲೆ ಕರ್ತವ್ಯದಲ್ಲಿರುವ ವಿ.ಎ. ಗಳು 5 ಮಂದಿ ಬರುತ್ತಾರೆ. ಅವರು ಬಂದ ತಕ್ಷಣ ಮಂಜುನಾಥ ರನ್ನು ಮತ್ತೆ ಅಜ್ಜಾವರಕ್ಕೆ ಕಳುಹಿಸಲಾಗುವುದು. ಮೂರು ತಿಂಗಳು ಅವರು ಸಂಪಾಜೆಯಲ್ಲೇ ಇರುತ್ತಾರೆ. ಅಜ್ಜಾವರ ಪಂಚಾಯತ್ ನವರಿಗೆ ಇದನ್ನು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.