ಸಹೋದರಿ ವೈದ್ಯರಿಗೆ ಸರ್ಪೈಸ್ ನೀಡಲು ಬುರ್ಕಾ ಧರಿಸಿ ಬಂದ ಯುವಕರು

0

ಆತಂಕಗೊಂಡ ಸಿಬ್ಬಂದಿಗಳು – ಆಕ್ರೋಶ ವ್ಯಕ್ತಪಡಿಸಿದ ಊರವರು

ತಮ್ಮ ಸಹೋದರಿಯಾಗಿರುವ ವೈದ್ಯರಿಗೆ ಸರ್ಪ್ರೈಸ್ ನೀಡಲೆಂದು ಬುರ್ಕಾ ಹಾಕಿಕೊಂಡು ಬಂದ ಇಬ್ಬರು ಯುವಕರಿಂದಾಗಿ ಸಿಬ್ಬಂದಿಗಳು ಆತಂಕಗೊಂಡು ಆಸುಪಾಸಿನ ಜನರು ದೌಡಾಯಿಸಿ ಗೊಂದಲದ ವಾತಾವರಣ ನಿರ್ಮಾಣವಾಗಿ ವೈದ್ಯರೂ ಪೇಚಿಗೆ ಸಿಲುಕಬೇಕಾಗಿಬಂದ ಘಟನೆಯೊಂದು ದುಗ್ಗಲಡ್ಕ ದ ನಮ್ಮ ಕ್ಲಿನಿಕ್ ನಲ್ಲಿ ನಿನ್ನೆ ನಡೆದಿದೆ.

ನಿನ್ನೆ ಅಪರಾಹ್ನ ದುಗ್ಗಲಡ್ಕ ಪೇಟೆಯಿಂದ ಸ್ವಲ್ಪ ಮುಂದೆ ನಿಲ್ಲಿಸಿದ ಕಾರಿನಿಂದ ಇಳಿದ ಇಬ್ಬರು ಬುರ್ಕಾಧಾರಿಗಳು ” ನಮ್ಮ ಕ್ಲಿನಿಕ್ ” ಕಡೆಗೆ ಬಂದರು. ಒಳಗೆ ಬಂದ ಅವರ ವಸ್ತ್ರ ಧಾರಣೆ ಕಂಡು ಸಿಬ್ಬಂದಿಗಳು ಸ್ವಲ್ಪ ಅನುಮಾನಗೊಂಡರು. ಚಿಕಿತ್ಸೆಗೆ ಚೀಟಿ ಮಾಡುವಂತೆ ಅವರಲ್ಲಿ ಹೇಳಿದರೂ ಇವರಿಬ್ಬರೂ ಮಹಿಳಾ ಡಾಕ್ಟರ್ ಇದ್ದ ಕಡೆಗೆ ನೇರವಾಗಿ ಹೋದರೆನ್ನಲಾಗಿದೆ. ಬುರ್ಕಾ ಹಾಕಿ ಮುಖ ಕೂಡ ಮುಚ್ಚಿದುದರಿಂದ ಗುರುತು ಸಿಗದೆ ಆತಂಕಗೊಂಡ ಡಾಕ್ಟರ್ ಹೊರಗೆ ಬಂದರೆಂದೂ ಆಗ ಉಳಿದ ಸಿಬ್ಬಂದಿಗಳೂ ಆತಂಕಗೊಂಡು ಹೊರಗೆ ಬಂದರೆಂದೂ ತಿಳಿದುಬಂದಿದೆ. ಸ್ಥಳದಲ್ಲಿ ಗೊಂದಲ ನಿರ್ಮಾಣವಾಯಿತು.

ಸಿಬ್ಬಂದಿ ಗಳ ಆತಂಕ ಕಂಡು ಪೇಟೆಯಲ್ಲಿದ್ದ ಜನರೂ ಅಲ್ಲಿಗೆ ದೌಡಾಯಿಸಿದರು. ಜನರು ಬಂದು ವಿಚಾರಿಸಿದಾಗ ಯುವಕರು ಮುಖಕ್ಕೆ ಹಾಕಿದ ಬುರ್ಕಾ ತೆಗೆದರು. ಆಗ ವೈದ್ಯರಿಗೆ ಗುರುತು ಸಿಕ್ಕಿತು. ” ನಾವು ಅವರ ತಮ್ಮಂದಿರು ಸರ್ಪೈಸ್ ಕೊಡುವ ಉದ್ದೇಶ ದಿಂದ ಬುರ್ಕಾ ಹಾಕಿಕೊಂಡು ಬಂದಿರುವುದಾಗಿ” ಇಬ್ಬರೂ ಹೇಳಿದರು. ಗೊಂದಲದ ಪರಿಸ್ಥಿತಿಗೆ ಕಾರಣವಾದ ಘಟನೆಗೆ ವೈದ್ಯರು ಜನರಲ್ಲಿ ಕ್ಷಮೆ ಕೇಳಿದರು.

” ಸರ್ಪೈಸ್ ಕೊಡುವುದಿದ್ದರೆ ಮನೆಗೆ ಹೋಗಬೇಕು, ಸರಕಾರಿ ಕಚೇರಿ, ಆಸ್ಪತ್ರೆ ಗೆ ಈ ರೀತಿ ವೇಷ ಮರೆಮಾಚಿಕೊಂಡು ಬರುವುದು ತಪ್ಪು, ಸೀರಿಯಸ್ ಪೇಶೆಂಟ್ ಇರುತ್ತಿದ್ದರೆ ಏನಾಗುತಿತ್ತು ಎಂದು ಜನರು ಹೇಳತೊಡಗಿದರು.