ಕುಂಡಡ್ಕ : ಮೂರನೇ ವರ್ಷದ ರಕ್ಷಾಬಂಧನ ಆಚರಣೆ

0

ರಾಷ್ಟ್ರೀಯತೆಯ ವಿಚಾರದಲ್ಲಿ ನಾವೆಲ್ಲರೂ ಒಂದಾಗಬೇಕು : ರಜನೀಶ್ ಪಿ

ಸರಳತೆಯಲ್ಲಿ ಶ್ರೇಷ್ಟತೆಯನ್ನು ಕಾಣುವ ಹಬ್ಬ : ಉಮೇಶ್ ಕೆಎಂಬಿ

ದೇಶ ಭಕ್ತಿ ಉದ್ದೀಪನಗೊಳಿಸುವ ಆಚರಣೆ : ಪ್ರವೀಣ್ ಚೆನ್ನಾವರ

ದೇಶ, ಧರ್ಮ, ರಾಷ್ಟ್ರೀಯತೆಯ ವಿಚಾರದಲ್ಲಿ ಪಕ್ಷ, ಜಾತಿ ಮೀರಿ ನಾವೆಲ್ಲರೂ ಒಂದಾಗಬೇಕು. ಹಿಂದೂ ಸಮಾಜವನ್ನು ವಿಭಜಿಸುವ ಹುನ್ನಾರಗಳಿಗೆ ಅವಕಾಶ ಕಲ್ಪಿಸದೆ, ನಾವು ಜಾಗೃತ ಸಮಾಜದ ಮೂಲಕ ಭಾರತೀಯ ಸಂಸ್ಕೃತಿ, ಸಂಸ್ಕಾರದ ರಕ್ಷಕರಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ರಜನೀಶ್ ಪಿ ಹೇಳಿದರು.

ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ನೇಸರ ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಆ.30 ರಂದು ಕುಂಡಡ್ಕ ಕಮಲ ಅವರ ನಿವಾಸದಲ್ಲಿ ನಡೆದ ಮೂರನೇ ವರ್ಷದ ರಕ್ಷಾಬಂಧನ ಆಚರಣೆಯಲ್ಲಿ ರಕ್ಷಾ ಬಂಧನದ ಮಹತ್ವದ ಬಗ್ಗೆ ಅವರು ಮಾತನಾಡಿದರು. ರಕ್ಷಾ ಬಂಧನ ಅಂದರೆ ಕೇವಲ ಕೈಗೆ ನೋಲು ಕಟ್ಟುವುದಲ್ಲ, ಅದರ ಹಿಂದೆ ಅಪಾರ ಅರ್ಥ ಇದೆ. ಹಿಂದೂ ಧರ್ಮದ ರಕ್ಷಣೆಗೆ ಹೇಗೆ ಸಂಘಟಿತರಾಗಿರಬೇಕು ಅನ್ನುವ ಸಂದೇಶವು ಅದರೊಳಗಿದೆ ಎಂದರು.

ಹಿಂದೂ ಸಮಾಜದ ಒಗ್ಗಟ್ಟಿಗೆ ಅಡ್ಡಗೋಡೆ ಅಂದರೆ ಅದು ಅಸ್ಪೃಶ್ಯತೆ. ಅದು ತಪ್ಪು ಅನ್ನುವುದು ನಾವು ಒಪ್ಪಿಕೊಳ್ಳಬೇಕಿದೆ. ಏಕೆಂದರೆ ಯಾವ ಜಾತಿಯು ಶ್ರೇಷ್ಟ ಅಲ್ಲ, ಕನಿಷ್ಟವೂ ಅಲ್ಲ. ಜಾತಿ ವ್ಯವಸ್ಥೆಯು ಸಮುದಾಯದೊಳಗಿನ ವ್ಯಕ್ತಿಗಳ ದುರ್ಗುಣಗಳನ್ನು ದೂರ ಮಾಡಿ ಸಶಕ್ತ ಹಿಂದೂ ಸಮಾಜದ ನಿರ್ಮಾಣಕ್ಕೆ ಕಾರಣಿಕರ್ತವಾಗಬೇಕು ಎಂದ ಅವರು ಸೋದರತ್ವ, ಮಾನವೀಯತೆ ಆಗಾಗೆ ನಮ್ಮೊಳಗಿನಿಂದ ಹೊರ ಬರಬೇಕು ಎಂದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ‌ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಸರಳತೆಯಲ್ಲಿ ಶ್ರೇಷ್ಟತೆಯನ್ನು ಕಾಣುವ ಹಬ್ಬವೆಂದರೆ ಅದು ರಕ್ಷಾಬಂಧನ. ಸನಾತನ ಸಂಸ್ಕೃತಿಯ ಆಚರಣೆಗಳಲ್ಲಿ ಈ ಹಬ್ಬವು ಸೋದರತೆಯ ಸಂಕೇತವನ್ನು ಸಾರುತ್ತದೆ. ಐಕ್ಯಮತದಿಂದ ಬದುಕಬೇಕು ಅನ್ನುವ ಸಂದೇಶವನ್ನು ತಿಳಿಸುತ್ತದೆ ಎಂದ ಅವರು ಅತ್ಯಂತ ಅರ್ಥಪೂರ್ಣ ರೀತಿಯಲ್ಲಿ ರಕ್ಷಾಬಂಧನ ಆಯೋಜಿಸಿರುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.

ಪತ್ರಕರ್ತ ಪ್ರವೀಣ್ ಚೆನ್ನಾವರ ಮಾತನಾಡಿ, ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸುವ ರಕ್ಷಾಬಂಧನದ ಆಚರಣೆಯ ಅರ್ಥವನ್ನು ಮಕ್ಕಳಿಗೆ ತಿಳಿಸಿಕೊಡುವ ಕಾರ್ಯ ಅತ್ಯಗತ್ಯ ಎಂದರು.

ವೇದಿಕೆಯಲ್ಲಿ ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿ ಕುಂಡಡ್ಕ, ಹಿರಿಯರಾದ ಮುದರು ಉಪಸ್ಥಿತರಿದ್ದರು.ಪುರುಷೋತ್ತಮ ಕುಂಡಡ್ಕ ಸ್ವಾಗತಿಸಿ, ನಿರೂಪಿಸಿದರು.

ಆರಂಭದಲ್ಲಿ ನೆರೆದಿದ್ದವರು ಪರಸ್ಪರ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಲಾಯಿತು. ಹಣೆಗೆ ತಿಲಕ ಇಟ್ಟು ರಾಖಿ ಕಟ್ಟಲಾಯಿತು. ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮತ್ತು ಮಮತಾ ಜೆ ಪೂಜಾರಿ ಅವರು ಸಿಹಿತಿಂಡಿ ವ್ಯವಸ್ಥೆ ಕಲ್ಪಿಸಿದ್ದರು.