ಬೀದಿ ಬದಿಯ ಎಲ್ಲ ಅಂಗಡಿ ಮಾಡಿ : ಮಹೇಶ್ ಮೇನಾಲ ಆಕ್ಷೇಪ
ಸುಳ್ಯ ವಿವೇಕಾನಂದ ವೃತ್ತದ ಬಳಿ ಶೆಡ್ ನಿರ್ಮಿಸಿ ಕಬ್ಬು ಜ್ಯೂಸ್ ವ್ಯಾಪಾರ ಮಾಡುತ್ತಿದ್ದ ಶೆಡ್ ನ್ನು ನ.ಪಂ. ತೆರವು ಮಾಡಿದ್ದು, ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿರುವ ಬಿಜೆಪಿಯ ಮಹೇಶ್ ರೈ ಮೇನಾಲರು ನಗರದ ರಸ್ತೆ ಬದಿಯ ಎಲ್ಲ ಶೆಡ್ ಗಳನ್ನು ತೆರವು ಮಾಡಬೇಕು ಎಂದು ನ.ಪಂ. ನ್ನು ಆಗ್ರಹಿಸಿದ್ದಾರೆ.
ಸುಳ್ಯ ವಿವೇಕಾನಂದ ಸರ್ಕಲ್ ಬಳಿ ರಸ್ತೆಯ ಬದಿ ಕಾಟಿಪಳ್ಳದ ರವಿ ಎಂಬವರು ಕಬ್ಬು ಜ್ಯೂಸ್ ಮೆಷಿನ್ ಇಟ್ಟು ವ್ಯಾಪಾರ ಕೆಲ ಸಮಯದಿಂದ ಮಾಡುತ್ತಿದ್ದರು.
ಬಿಸಿಲು – ಮಳೆ ಗಾಗಿ ಅವರು ಅಡಿಕೆ ಮರದ ಶೆಡ್ ಹಾಕಿ ಮೇಲೆ ಟಾರ್ಪಲ್ ಹೊದಿಕೆ ಹಾಕಿದ್ದರು. ಕೆಲ ತಿಂಗಳ ಹಿಂದೆ ಸ್ಥಳೀಯ ನಿವಾಸಿಯೊಬ್ಬರು ಅದು ನಮ್ಮ ಜಾಗ ಎಂದು ಹೇಳಿಕೊಂಡಿದ್ದು ತಹಶೀಲ್ದಾರ್ ಮಧ್ಯ ಪ್ರವೇಶದ ಬಳಿಕ ಜಾಗ ಸರ್ವೆ ನಡೆದಾಗ ಅದು ಸರಕಾರ ಎಂದು ಕಂಡುಬಂತೆಂದು ಹೇಳಲಾಗಿದೆ.
ರವಿ ಯವರು ಮತ್ತೆ ಅದೇ ಜಾಗದಲ್ಲಿ ತಮ್ಮ ವ್ಯಾಪಾರ ಮುಂದುವರಿಸಿದರು. ಸೆ.4 ರಂದು ಬೆಳಗ್ಗೆ ನ.ಪಂ. ಅಧಿಕಾರಿಗಳು ಬಂದು ಶೆಡ್ ನ್ನು ತೆರವು ಮಾಡಿದ್ದಾರೆ.
ಆಕ್ಷೇಪ : ಶೆಡ್ ತೆರವು ಮಾಡುವ ವಿಷಯ ತಿಳಿದು ಸ್ಥಳಕ್ಕೆ ಬಂದ ಬಿಜೆಪಿಯ ಮಹೇಶ್ ರೈ ಮೇನಾಲರು ಆಕ್ಷೇಪ ವ್ಯಕ್ತಪಡಿಸಿದರು. ಬಡವರೊಬ್ಬರು ಜೀವನಕ್ಕಾಗಿ ಬೀದಿ ಬದಿ ವ್ಯಾಪಾರ ಮಾಡಿದರೆ ಅದಕ್ಕೆ ಸರಕಾರ ಬಿಡುತ್ತಿಲ್ಲ. ರವಿಯವರು ಬಡವರು. ಅವರ ಮನೆಯ ಪರಿಸ್ಥಿತಿ ಕಷ್ಟದಲ್ಲಿದೆ. ಅವರಿಗೆ ಈ ರೀತಿ ಅನ್ಯಾಯ ಸರಿಯಲ್ಲ. ನ.ಪಂ. ಅಧಿಕಾರಿಗಳು ನಗರವನ್ನು ಸುತ್ತು ಬಂದು ಎಲ್ಲೆಲ್ಲಿ ರಸ್ತೆ ಬದಿ ಶೆಡ್ ಹಾಕಿ ವ್ಯಾಪಾರ ಮಾಡುತ್ತಿದ್ದಾರೆಂದು ನೋಡಿ ತೆಗೆಸಬೇಕು. ಒಬ್ಬರಿಗೆ ಅನ್ಯಾಯ ಸರಿಯಲ್ಲ ಎಂದು ಹೇಳಿದರು.
ಇವರಿಗೆ ಇಲ್ಲೇ ಬೀದಿ ಬದಿ ವ್ಯಾಪಾರ ಮಾಡಲು ಅವಕಾಶ ಇದೆ. ಕಬ್ಬು ಜ್ಯೂಸ್ ವ್ಯಾಪಾರಕ್ಕೆ ಆಟೋ ಇದೆ. ಅದರಲ್ಲಿ ಮಾಡುತ್ತಾರೆ. ಶೆಡ್ ತೆರವು ಮಾಡಬೇಕೆಂದು ಈ ಹಿಂದೆಯೇ ಹೇಳಿದ್ದೇವೆ ಎಂದು ಸ್ಥಳದಲ್ಲಿದ್ದ .ನ.ಪಂ. ಅಧಿಕಾರಿಗಳು ತಿಳಿಸಿದ್ದಾರೆ