ಸ್ವಂತ ಮಗಳಂತೆ ತಿದ್ದಿ ತೀಡಿದ ಗುರು
ಅಖಿಲಾಶ್ರೀ ಸರಳಿಮನೆ
ಅಮ್ಮನನ್ನು ಬಿಟ್ಟಿರಲಾರದೇ ಅಳುತ್ತಲೇ ಬಾಳಿಲದ ವಿದ್ಯಾಬೋಧಿನೀ ಶಾಲೆಯ ಮೆಟ್ಟಿಲು ಹತ್ತಿದ್ದ ಒಂದನೇ ತರಗತಿಯ ದಿನಗಳವು. “ಮಕ್ಕಳೇ, ಇವರೇ ನಿಮ್ಮ ಟೀಚರ್ ಆಯ್ತಾ” ಅಂತ ಶಾಲಾ ಮುಖ್ಯಶಿಕ್ಷಕರು ಯಶೋದ ಟೀಚರ್ ಅನ್ನು ಪರಿಚಯಿಸಿದ್ದರು. ಅಳುತ್ತಿದ್ದ ನನ್ನನ್ನು ಅಮ್ಮನಂತೆಯೇ ಸಮಾಧಾನಿಸಿ ಧೈರ್ಯ ತುಂಬಿದವರು ಇದೇ ಯಶೋದ ಟೀಚರ್. ನನಗೆ ಆಪ್ತವೆನಿಸಿದ ವ್ಯಕ್ತಿಗಳಲ್ಲಿ ಯಶೋದ ಟೀಚರ್ ಕೂಡ ಒಬ್ಬರು. ಶಾಲಾದಿನಗಳಲ್ಲಿ ಅವರೊಡನೆ ಹಂಚಿಕೊಳ್ಳದ ವಿಷಯಗಳಿಲ್ಲ. ಅಷ್ಟರ ಮಟ್ಟಿಗೆ ಮಕ್ಕಳನ್ನು ಶಾಲೆಯತ್ತ ಸೆಳೆಯುವಲ್ಲಿ ಟೀಚರ್ ಯಶಸ್ವಿಯಾದವರು. ಮಕ್ಕಳಲ್ಲಿ ಯಾವ ಭೇದಭಾವ ಮಾಡದೇ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು.
ಅವರ ಸುಂದರ ಕೈಬರೆಹವೇ ನಮಗೆ ಬರೆಯಲು ಸ್ಪೂರ್ತಿ. ದಿನವೂ ನಾವೆಲ್ಲ ತರುತ್ತಿದ್ದ ವಿವಿಧ ಹೂಗಳಿಂದ ಅವರ ಜಡೆ ತುಂಬುತ್ತಿತ್ತು. ಒಮ್ಮೆ ಟೀಚರ್ ಪರೀಕ್ಷೆಯ ನಿಮಿತ್ತ ಹತ್ತು ದಿನ ರಜೆ ಎಂದಿದ್ದರು. ಅದನ್ನು ಕೇಳಿ ನಾನು ಮನೆಯವರೆಗೂ ಅಳುತ್ತಾ ಬಂದಿದ್ದೆ. ನನ್ನ ಅಮ್ಮನ ಬಳಿ ಅದೆಷ್ಟೋ ಬಾರಿ, “ಇವಳು ನನ್ನ ಮಗಳು” ಅಂತ ಟೀಚರ್ ಹೇಳಿದ್ದುಂಟು. ನನಗೆ ಮಗ ಹುಟ್ಟಿದ ವಿಷಯ ತಿಳಿದು, “ನನ್ನ ಪುಳ್ಳಿ” ಅಂತ ಸಂಭ್ರಮಿಸಿದ್ದನ್ನು ಹೇಗೆ ತಾನೇ ಮರೆಯಲು ಸಾಧ್ಯ?
ಶಾಲಾ ಪ್ರವಾಸದಲ್ಲಿ ಬಸ್ ನಲ್ಲಿ ಟೀಚರ್ ಜೊತೆ ಕೂರಲು ಅವರ ಪಕ್ಕದ ಸ್ಥಳಕ್ಕಾಗಿ ಪೈಪೋಟಿ ಮಾಡುತ್ತಿದ್ದೆವು. ಒಟ್ಟಿನಲ್ಲಿ ಯಶೋದ ಟೀಚರ್ ಎಲ್ಲರಿಗೂ ಆಪ್ತರು. ಶಾಲಾರಂಭದ ದಿನಗಳಲ್ಲಿ ಅಮ್ಮನ ನೆನಪಾದಾಗ ನಾನು ಪುಸ್ತಕದೊಳಗೆ ಬಚ್ಚಿಟ್ಟಿದ್ದ ಅಮ್ಮನ ಫೋಟೊ ನೋಡುತ್ತಿದ್ದ ದಿನಗಳನ್ನು ಈಗಲೂ ಅವರು ಮೆಲುಕು ಹಾಕಿ ನಗುವುದುಂಟು. ಮದುವೆಯ ದಿನವೂ ಮರೆಯದೆ ಈ ವಿಷಯ ನನ್ನ ಯಜಮಾನರಲ್ಲಿ ಹೇಳಿದ್ದರು! ಮದುವೆಯ ನಂತರದ ದಿನಗಳಲ್ಲಿ ಊರ ಜಾತ್ರೆ ಹಾಗು ಇನ್ನಿತರ ಸಮಾರಂಭಗಳಲ್ಲಿ ಇಂದಿಗೂ ನನ್ನ ಕಣ್ಣುಗಳು ಯಶೋದ ಟೀಚರ್ ರನ್ನೇ ಹುಡುಕುತ್ತಿರುತ್ತವೆ. ಅದೆಷ್ಟೇ ಅವಸರವಿದ್ದರೂ ಓಡಿ ಬಂದು ಅವರ ಕೈ ಹಿಡಿದು ಮಾತನಾಡಿದರಷ್ಟೇ ಮನಸಿಗೆ ತೃಪ್ತಿ.
ಮಕ್ಕಳೆಲ್ಲರನ್ನೂ ಸ್ವಂತ ಮಕ್ಕಳಂತೆ, ತಾಳ್ಮೆಯಿಂದ ತಿದ್ದಿ ತೀಡಿ, ಶಿಸ್ತಿನ ಪಾಠ ಕಲಿಸಿದವರು, ಮಕ್ಕಳ ಖುಷಿಯಲ್ಲಿಯೇ ತಮ್ಮ ಖುಷಿ ಕಂಡವರು. ಗೌರವ ಶಿಕ್ಷಕಿಯಾಗಿ, ಶಾಲಾ ಏಳಿಗೆಗಾಗಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿದ ಟೀಚರ್ ಅಂದರೆ, ಅದು ನನ್ನ ಯಶೋದ ಟೀಚರ್.
ಅಖಿಲಾಶ್ರೀ ಕೆ.
ಸರಳಿಮನೆ, ಬೆಳ್ತಂಗಡಿ
.