ಗುರು ನಮನ

0

ಮರೆಯಲಾಗದ ನೆಚ್ಚಿನ ಶಿಕ್ಷಕ

ಪ್ರಾಪ್ತಿ ಗೌಡ

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಇಂತಹ ಒಬ್ಬ ಗುರು ಇದ್ದೇ ಇರುತ್ತಾರೆ. ಯಾವ ರೀತಿ ಒಬ್ಬ ಶಿಲ್ಪಿ ಬಂಡೆ ಕಲ್ಲನ್ನು ಕೆತ್ತಿ ಅದಕ್ಕೆ ಒಂದು ಸುಂದರ ರೂಪ ಕೊಟ್ಟು ಶಿಲೆ ಆಗಿ ರೂಪಿಸುವನೋ ಅದೇ ರೀತಿ ನಾವು ತಪ್ಪು ದಾರಿ ಹಿಡಿದಾಗ ನಮ್ಮನ್ನು ತಿದ್ದಿ ಸರಿದಾರಿಗೆ ತಂದಂತಹ ಮರೆಯಲಾಗದ ಒಬ್ಬ ಗುರು ಪ್ರತಿಯೊಬ್ಬನ ಜೀವನದಲ್ಲೂ ಇದ್ದೇ ಇರುತ್ತಾರೆ.

ನಿಜ ಹೇಳಬೇಕೆಂದರೆ ಯಾರಿಗೆಲ್ಲಾ ಜೀವನದಲ್ಲಿ ಒಂದು ನಿಶ್ಚಿತ ಗುರಿ ಇರುವುದೋ ಅವರೆಲ್ಲರ ಹಿಂದೆ ಒಬ್ಬ ಗುರು ಇದ್ದೇ ಇರುತ್ತಾರೆ
ಹಾಗೇ ನನ್ನ ಜೀವನದಲ್ಲೂ ಕೂಡ ನಾನು ಅತಿಯಾಗಿ ಹಚ್ಚಿಕೊಂಡ ಎಂದಿಗೂ ಮರೆಯಲಾಗದ ನನ್ನ ನೆಚ್ಚಿನ ಕನ್ನಡ ಶಿಕ್ಷಕ ಸೀತರಾಮ್ ಸರ್ ಅವರು ನನಗೆ ಒಬ್ಬ ಕನ್ನಡ ಶಿಕ್ಷಕನಂತೆ ಕಾಣಲಿಲ್ಲ ಬದಲಾಗಿ ಅವರು ನನಗೆ ಒಬ್ಬ ಉತ್ತಮ ಸ್ನೇಹಿತರಂತೆ ಕಂಡರು. ಅವರ ಆ ನಿಷ್ಕಲ್ಮಶ ನಗು,ಅವರ ಪಾಠದ ಶೈಲಿ ಎಂತಹ ಮಕ್ಕಳನ್ನಾದರೂ ಆಕರ್ಷಿಸದೆ ಬಿಡದು .ಇದೆಲ್ಲದಕ್ಕಿಂತ ನನಗೆ ಅವರಲ್ಲಿ ಇಷ್ಟವಾಗುವುದು ಅವರ ಸ್ನೇಹಮಯ ವ್ಯಕ್ತಿತ್ವ.

ನಾನು ಒಬ್ಬಳು ವಿಶೇಷ ಚೇತನ ಹುಡುಗಿ ಆಗಿದ್ದರೂ ನನ್ನನ್ನು ಅವರು ಯಾವತ್ತೂ ಆ ರೀತಿ ನೋಡಿಯೇ ಇಲ್ಲ. ಬದಲಾಗಿ ನನ್ನಲ್ಲಿ ಇರುವಂತಹ ಪ್ರತಿಭೆಗಳನ್ನು ಹೊರ ಹಾಕಲು ಮಾರ್ಗದರ್ಶನ ನೀಡಿದರು .ಇಂದಿಗೂ ನಾನು ಅವರ ಬಳಿ ಮಾತನಾಡಿಸಲು ಹೋದಾಗ ಇವಳು ನನ್ನ ಫ್ರೆಂಡ್ ಎಂದೇ ಪರಿಚಯ ಮಾಡಿಕೊಡುತ್ತಾರೆ. ಇನ್ನು ಕೆಲವೊಂದು ಹಾಸ್ಯಾದ ಸಂಗತಿಗಳನ್ನು ಹೇಳಬೇಕೆಂದರೆ ಒಂದು ದಿನ ತರಗತಿಯಲ್ಲಿ ನನ್ನನ್ನು ಮತ್ತು ನನ್ನ ಗೆಳತಿಯನ್ನು ಬೇರೆ ಬೇರೆ ಕೂರಿಸಿದ್ದರೆಂದು ನಾನು ಅತ್ತುಬಿಟ್ಟಿದ್ದೆ. ಇದನ್ನರಿತ ಸರ್ ನಮ್ಮಿಬ್ಬರನ್ನು ಮತ್ತೆ ಒಂದು ಮಾಡಿ ನನ್ನನ್ನು ಸಂತಸ ಪಡಿಸಿದ್ದಾರೆ. ಅದೆಷ್ಟೋ ಬಾರಿ ನನಗೆ ಇಂತಹ ಶಿಕ್ಷಕ ವಿದ್ಯಾರ್ಥಿಗಳ ಜೀವನದಲ್ಲಿ ಇದ್ದರೆ ಓದು ಬರಹದ ಜೊತೆಗೆ ಮಾನವೀಯ ಮೌಲ್ಯಗಳ ತಿಳುವಳಿಕೆಗಳಿಗೇನೂ ಕೊರತೆ ಇರುವುದಿಲ್ಲ ಎನಿಸುತ್ತಿತ್ತು. ನೀನು ಜೀವನದಲ್ಲಿ ಏನಾದರೂ ಸಾಧಿಸಲೇ ಬೇಕೆಂದು ನನ್ನನು ಹುರಿದುಂಬಿಸಿದ್ದಾರೆ. ಒಟ್ಟಾರೆ ಆಗಿ ಹೇಳಬೇಕೆಂದರೆ ಸೀತಾರಾಮ್ ಸರ್ ಒಬ್ಬ ಶಿಕ್ಷಕ ಎಂಬುವುದಕ್ಕಿಂತ ಹೆಚ್ಚಾಗಿ ಅವರು ನನಗೆ ಒಬ್ಬ ಉತ್ತಮ ಸ್ನೇಹಿತರಂತೆ ಎನ್ನಬಹುದು. ನನ್ನ ಜೀವನದಲ್ಲಿ ಇಂತಹ ಶಿಕ್ಷಕರು ಸಿಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಇಂತಹ ಶಿಕ್ಷಕರನ್ನು ಎಂದಿಗೂ ನಾನು ಮರೆಯಲು ಸಾಧ್ಯವಿಲ್ಲ.

ಪ್ರಾಪ್ತಿ ಗೌಡ
ದ್ವಿತೀಯ ಕಲಾ ಪದವಿ
ನೆಹರು ಮೆಮೋರಿಯಲ್ ಕಾಲೇಜು ಸುಳ್ಯ