ನಾಲಗೆಯ ರಚನೆ :
ನಾಲಗೆ ನಮ್ಮ ದೇಹದ ಅತೀ ಪ್ರಾಮುಖ್ಯವಾದ ಅಂಗ. ನಾಲಗೆ ಎನ್ನುವುದು ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮಾತ್ರವಲ್ಲ ಆರೋಗ್ಯವನ್ನು ಬಿಂಬಿಸುವ ಅಂಗವಾಗಿರುತ್ತದೆ. ಚಾಪಲ್ಯ ಮತ್ತು ಚಪಲತೆಗೆ ಇನ್ನೊಂದು ಹೆಸರೇ ನಾಲಿಗೆ. ರುಚಿಗ್ರಂಥಿ ಹೊಂದಿರುವ ನಾಲಿಗೆ ಪಂಚೇಂದ್ರಿಯಗಳಲ್ಲಿ ಒಂದು. ಬಾಯಿಯೊಳಗೆ ಸೇರುವ ಆಹಾರವನ್ನು ಯಾಂತ್ರಿಕವಾಗಿ ಕಲಸುವ ಮಿಕ್ಸರ್‍ನಂತೆ ಕೆಲಸ ಮಾಡುವುದರ ಜೊತೆಗೆ, ನಾವು ತಿನ್ನುವ ಆಹಾರವನ್ನು ಜೊಲ್ಲುರಸದೊಂದಿಗೆ ಸರಿಯಾಗಿ ಸೇರಿಕೊಳ್ಳಲು ನಾಲಗೆ ಸಹಾಯ ಮಾಡುತ್ತದೆ.
ನಾಲಗೆ ನಮ್ಮ ಬಾಯಿಯೊಳಗಿನ ಬರೀ ಮಾಂಸಖಂಡಗಳಿಂದ ಕೂಡಿದ ಒಂದು ಅಂಗವಾಗಿದ್ದು ಇದರೊಳಗೆ ಯಾವುದೇ ಎಲುಬಿರುವುದಿಲ್ಲ. ಪುರುಷರಲ್ಲಿ ಸುಮಾರು 8 ರಿಂದ 9 ಸೆಂಟಿಮೀಟರ್ ಹಾಗೂ ಮಹಿಳೆಯರಲ್ಲಿ 7ರಿಂದ 8 ಸೆಂಟಿ ಮೀಟರ್ ಉದ್ದವಿರುತ್ತದೆ.
ನಾಲಗೆ ಮೇಲ್ಬಾಗದ ಚರ್ಮದ ನಡುವೆ ಸಾಕಷ್ಟು ರುಚಿಗ್ರಂಥಿಗಳು ಹುದುಗಿಕೊಂಡಿರುತ್ತದೆ. ಆರೋಗ್ಯವಂತ ನಾಲಗೆ ಸಾಮಾನ್ಯವಾಗಿ ಗುಲಾಬಿ ಬಣ್ಣ ಹೊಂದಿರುತ್ತದೆ. ನಾಲಿಗೆಯಲ್ಲಿರುವ ಸ್ನಾಯುಖಂಡಗಳು ಮತ್ತು ಹೇರಳವಾದ ರಕ್ತನಾಳಗಳ ಕಾರಣದಿಂದ ಈ ಗುಲಾಬಿ ಬಣ್ಣ ಬಂದಿದೆ ಈ ಬಣ್ಣ ಕೆಲವೊಮ್ಮೆ ತಿಳಿ ಗುಲಾಬಿ ಬಣ್ಣವಾಗಬಹುದು.
ಯಾವಾಗ ಬಣ್ಣ ಬದಲಾಗುತ್ತದೆ ?
ವ್ಯಕ್ತಿ ಅನೀಮೀಯಾ ರೋಗದಿಂದ ಅಥವಾ ರಕ್ತಹೀನತೆಯಿಂದ ಬಳಲುತ್ತಿದ್ದಲ್ಲಿ ನಾಲಗೆ ಬೋಳಾಗಿರುತ್ತದೆ ಮತ್ತು ಬಿಳಿಚಿಕೊಂಡಿರುತ್ತದೆ. ದೇಹದಲ್ಲಿ ಆಮ್ಲಜನಕದ ಕೊರತೆ ಇದ್ದಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತದೆ. ದೇಹದಲ್ಲಿ ನಿರ್ಜಲೀಕರಣವಾದಾಗ ಅಥವಾ ಮೂತ್ರಪಿಂಡದ ತೊಂದರೆ ಇದ್ದಲ್ಲಿ ನಾಲಗೆ ಬಿಳಿಚಿಕೊಳ್ಳುತ್ತದೆ. ವಿಟಮಿನ್ ಕೊರತೆ ಮತ್ತು ಕಬ್ಬಿಣಗಳ ಕೊರತೆ ಇದ್ದಲ್ಲಿ ನಾಲಗೆ ಕೆಂಪು ಉರಿಯೂತ ಕಂಡು ಬರುತ್ತದೆ. ಅದೇ ರೀತಿ ನಾಲಗೆಗೆ ರಕ್ತದ ವ್ಯತ್ಯಾಸ ಉಂಟಾದಾಗ ನಾಲಗೆ ನೇರಳೆ ಅಥವಾ ನೀಲವರ್ಣಕ್ಕೆ ತಿರುಗುತ್ತದೆ. ಹೃದಯದ ತೊಂದರೆ ಇದ್ದಾಗ ನೀಲವರ್ಣಕ್ಕೆ ತಿರುಗುತ್ತದೆ. ಸ್ಕಾರ್ಲೆಟ್ ಜ್ವರದಲ್ಲಿ ನಾಲಗೆ ಸ್ಟ್ರಾಬೆರಿ ಹಣ್ಣಿನಂತೆ ಕೆಂಪಗಾಗಿ ಊದಿಕೊಂಡಿರುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಸಿದುಹೋದಾಗ ನಾಲಗೆ ಸುತ್ತ ಬಿಳಿ ಬಣ್ಣದ ಪದರ ಕಾಣಿಸಬಹುದು. ಮಧುಮೇಹಿ ರೋಗಿಗಳಲ್ಲಿ ಈ ರೀತಿ ಕಂಡು ಬರುತ್ತದೆ. ಅದೇ ರೀತಿ ಕಪ್ಪು ಬಣ್ಣದ ಪದರವಿದ್ದಲ್ಲಿ ಏಡ್ಸ್ ರೋಗವನ್ನು ಸಂಶಯಿಸಲಾಗುತ್ತದೆ. ಅತಿಯಾದ ರೋಗ ನಿರೋಧಕ ಔಷಧಿ ತೆಗೆದುಕೊಂಡಾಗಲೂ ನಾಲಗೆಯ ಮೇಲೆ ಬಿಳಿ ಪದರ ಕಂಡು ಬರುತ್ತದೆ. ಕಾಂಡಿಡಾ ಎಂಬ ಫಂಗಸ್ ಸೋಂಕು ತಗಲಿದಾಗ ನಾಲಗೆ ಮೇಲೆ ದಪ್ಪನಾದ ಬಿಳಿ ಪದರ ಕಾಣಿಸಿಕೊಳ್ಳುತ್ತದೆ. ಅಲರ್ಜಿಯಾದಾಗ ನಾಲಗೆ ಕೆಂಪಗೆ ಊದಿಕೊಳ್ಳುತ್ತದೆ.
ನಾಲಗೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?
- ಹಲ್ಲು ಉಜ್ಜಿದ ಬಳಿಕ ಕೈಬೆರಳಿನಿಂದ ನಾಲಗೆ ಮೇಲ್ಬಾಗವನ್ನು ಚೆನ್ನಾಗಿ ಉಜ್ಜಬೇಕು. ಈ ರೀತಿ ಮಾಡುವುದರಿಂದ ನಾಲಗೆ ಸ್ವಚ್ಚವಾಗಿರುತ್ತದೆ ಮತ್ತು ರಕ್ತ ಪರಿಚಲನೆ ಜಾಸ್ತಿಯಾಗಿ ನಾಲಗೆ ಆರೋಗ್ಯಕರವಾಗಿರುತ್ತದೆ.
- ನಾಲಗೆ ಸ್ವಚ್ಚಗೊಳಿಸುವ ಟಂಗ್ ಕ್ಲೀನರ್ ಎಂಬ ಸಾಧನವನ್ನು ಬಳಸಬಹುದು ಆದರೆ ಪ್ರತಿ 2 ವಾರಕ್ಕೊಮ್ಮೆ ಬದಲಾಯಿಸಬೇಕು.
- ಹಲ್ಲುಜ್ಜಿದ ಬಳಿಕ ಚೆನ್ನಾಗಿ ಬಾಯಿ ಮುಕ್ಕಳಿಸಬೇಕು ಮತ್ತು ನಾಲಗೆ ಮೇಲೆ ಯಾವುದೇ ಪದರ ಇರದಂತೆ ನೋಡಿಕೊಳ್ಳಬೇಕು.
- ಚೆನ್ನಾಗಿ ನೀರು ಸೇವಿಸಬೇಕು. ನಿರ್ಜಲೀಕರಣದಿಂದ ನಾಲಗೆ ಬಣ್ಣ ಬದಲಾಗುತ್ತದೆ ಮತ್ತು ನಾಲಗೆಯ ಆರೋಗ್ಯ ಕೆಡುತ್ತದೆ.
- ನಾಲಗೆ ಉರಿಯೂತ, ನಾಲಗೆ ಬಣ್ಣ ಬದಲಾಗುವುದು ಅಥವಾ ನಾಲಗೆ ಮೇಲೆ ಬಿಳಿ, ಕೆಂಪು, ಕಪ್ಪು ಪದರ ಕಂಡು ಬಂದ ತಕ್ಷಣವೇ ವೈದ್ಯರನ್ನು ಬೇಟಿ ಮಾಡಿ ಪಡೆದುಕೊಳ್ಳತಕ್ಕದ್ದು.
- ಮಧುಮೇಹ ರೋಗಿಗಳು, ದೇಹದ ರೋಗ ನಿರೋಧಿಕ ಶಕ್ತಿ ಕಡಿಮೆ ಇರುವವರು, ಆಂಟಿ ಬಯೋಟಿಕ್ ಔಷಧಿ ಸೇವನೆ ಮಾಡುವವರು ಮತ್ತು ದಿನಂಪ್ರತಿ ಹತ್ತಾರು ಔಷಧಿ ಸೇವಿಸುವವರು ನಾಲಗೆ ಮೇಲೆ ವಿಶೇಷ ಕಾಳಜಿ ವಹಿಸಬೇಕು.
ಕೊನೆ ಮಾತು :
ನಾಲಗೆ ನಮ್ಮ ದೇಹದ ಬಹಳ ಅತ್ಯಂತ ಬಲಿಷ್ಠವಾದ ಮಾಂಸಖಂಡಗಳಿಂದ ಕೂಡಿದ ಸ್ನಾಯುಯುಕ್ತ ಅಂಗ. ನಮ್ಮ ದೇಹದ ಮಾನಸಿಕ ಸ್ಥಿತಿಯನ್ನು ಮಾತ್ರವಲ್ಲದೇ, ದೈಹಿಕ ಆರೋಗ್ಯದ ಸ್ಥಿತಿಯನ್ನು ಹೇಳುತ್ತದೆ. ಹೆಚ್ಚು ಹೆಚ್ಚು ಎಲ್ಲೆಂದರಲ್ಲಿ ಅನಗತ್ಯ ಮಾತಾಡುವವರಿಗೆ ಉದ್ದ ನಾಲಗೆಯವರು ಎಂದೂ, ಮಾತನಾಡಲು ಹೆದರುವ ಅಂಜು ಬುರುಕರಿಗೆ ನಾಲಗೆಯಿಲ್ಲದ ಮನುಷ್ಯ ಎಂದೂ, ಮುಲಾಜಿಲ್ಲದೆ ಕಡ್ಡಿ ಮುರಿದಂತೆ, ಮುಖಕ್ಕೆ ಬಡಿದಂತೆ ಮಾತಾನಾಡುವವರನ್ನು ಹರಿತ ನಾಲಗೆಯವರೆಂದೂ, ದಿನಕ್ಕೊಂದು ಮಾತನಾಡುವ ದ್ವಂದ್ವ ಮನಸ್ಸಿನ ಕಪಟಿಗಳನ್ನು ಎರಡು ನಾಲಗೆಯವರೆಂದೂ ಸಮಾಜ ಜನರನ್ನು ಮತ್ತು ಅವರ ಮನೋಸ್ಥಿತಿಯನ್ನು ಗುರುತಿಸುತ್ತದೆ. ಪುರಾಣ ಕಥೆಗಳಲ್ಲೂ ಕೃಷ್ಣ ಪರಮಾತ್ಮ ಬಾಯಿ ತೆರೆದು ಬ್ರಹ್ಮಾಂಡ ತೋರಿಸಿದ ಯಶೋಧೆಗೆ ಎಂದು ಕಥೆ ಕೇಳಿದ್ದೇವೆ. ಆದರೆ ವೈದ್ಯರಿಗಂತೂ ‘ನಾಲಗೆ’ ಎಂದರೆ ರೋಗಗಳನ್ನು ಪತ್ತೆಹಚ್ಚುವ ಕೆಲಸಕ್ಕೆ ರಹದಾರಿ ನೀಡುವ ಬಹುಮುಖ್ಯ ಅಂಗ ಎಂದರೂ ತಪ್ಪಲ್ಲ. ಹಲವಾರು ರೋಗಗಳನ್ನು ಬಾಯಿ ತೆರೆದು ನಾಲಗೆ ಪರೀಕ್ಷಿಸಿ, ಸರಿಯಾದ ಪೂರ್ವಾಪರ ರೋಗದ ವಿಚಾರಣೆ ನಡೆಸಿ ರೋಗವನ್ನು ಪತ್ತೆ ಹಚ್ಚುವಲ್ಲಿ ‘ನಾಲಗೆ’ಯ ಬಳುವಳಿ ಮಾತ್ರ ಬಹಳ ದೊಡ್ಡದು. ಬ್ರಹ್ಮ ಬರೆದ ಹಣೆಬರಹ ಓದಲು ಯಾರಿಗೂ ಸಾಧ್ಯವಾಗದೇ ಹೋದರೂ ನಾಲಗೆ ಮೇಲೆ ಬರೆದ ಬರಹವಂತೂ ವೈದ್ಯರಿಗೆ ವರದಾನ ಎಂದರೂ ತಪ್ಪಲ್ಲ.
ಡಾ|| ಮುರಲೀ ಮೋಹನ್ ಚೂಂತಾರು
BDS,MDS,DNB,MBA,
MOSRCSEd(UK)
Consultant Oral and Maxillofacial Surgeon.
9845135787
www surakshadental.com