ಸೆಪ್ಟೆಂಬರ್-9 ಪ್ರಥಮ ಚಿಕಿತ್ಸೆ ತಿಳುವಳಿಕಾ ದಿನ

0

ಯಾವುದೇ ರೀತಿಯ ಗಾಯ ಅಥವಾ ಅಪಘಾತಗಳಾದಾಗ ತಕ್ಷಣವೇ ಘಾಸಿಗೊಳಗಾದವರಿಗೆ ನೀಡುವ ಪ್ರಾಥಮಿಕವಾದ ಸಹಾಯವನ್ನು ಪ್ರಥಮ ಚಿಕಿತ್ಸೆ ಎನ್ನಲಾಗುತ್ತದೆ. ಇದಕ್ಕೆ ವಿಶೇಷವಾದ ತರಬೇತಿ ಅಥವಾ ಪೂರ್ವ ತಯಾರಿ ಅಗತ್ಯವಿಲ್ಲ. ಸಾಮಾನ್ಯ ಜ್ಞಾನವನ್ನು ಬಳಸಿಕೊಂಡು ಆ ಕ್ಷಣದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ರೋಗಿಯ ಪ್ರಾಣವನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತದೆ. ವೈದ್ಯರ ಲಭ್ಯತೆ ಸಿಗುವವರೆಗೆ ಅಥವಾ ಸುಸಜ್ಜಿತವಾದ ಆಸ್ಪತ್ರೆ ತಲುಪುವವರೆಗೆ ರೋಗಿಯ ಪ್ರಾಣಕ್ಕೆ ಕುತ್ತು ಬರದಂತೆ ಮಾಡುವ ತಾತ್ಕಾಲಿಕ ಪರಿಶಮನ ವ್ಯವಸ್ಥೆಯನ್ನು ಪ್ರಥಮ ಚಿಕಿತ್ಸೆ ಎನ್ನಲಾಗುತ್ತದೆ. ಪ್ರಥಮ ಚಿಕಿತ್ಸೆ ನೀಡಲು ನೀವು ವೈದ್ಯರೇ ಆಗಬೇಕಿಲ.್ಲ ಇದಕ್ಕೆ ಸಮಯಪ್ರಜ್ಞೆ,, ಸಾಮಾನ್ಯ ಜ್ಞಾನ ಮತ್ತು ಒಂದಷ್ಟು ಪ್ರಸಂಗಾವಧಾನತೆ ಬಳಸಿಕೊಂಡು ಆ ಕ್ಷಣದಲ್ಲಿ ರೋಗಿಯ ಜೀವವನ್ನು ರಕ್ಷಿಸುವ ಕಾರ್ಯವನ್ನು ಪ್ರಥಮ ಚಿಕಿತ್ಸೆ ತಜ್ಞರು ಮಾಡುತ್ತಾರೆ. ಪ್ರಥಮ ಚಿಕಿತ್ಸೆ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಎರಡನೇ ಶನಿವಾರದಂದು ‘ವಿಶ್ವ ಪ್ರಥಮ ಚಿಕಿತ್ಸಾ ದಿನ’ ಎಂದು ಆಚರಿಸಲಾಗುತ್ತದೆ. 2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ರೆಡ್‍ಕ್ರಾಸ್ ಸೊಸೈಟಿ ಈ ಆಚರಣೆಯನ್ನು ಜಾರಿಗೆ ತಂದಿದೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಎರಡನೇ ಶನಿವಾರದಂದು ವಿಶ್ವ ಪ್ರಥಮ ಚಿಕಿತ್ಸಾ ತಿಳುವಳಿಕಾ ದಿನ ಎಂದು ಆಚರಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ಮತ್ತು ತರಚೇತಿ ದೊರಕಬೇಕು ಎಂಬ ಆಶಯದೊಂದಿಗೆ ಈ ಆಚರಣೆಯನ್ನು ಆರಂಭಿಸಲಾಗಿದೆ. ಅಪಘಾತಗಳಾದಾಗ ರೋಗಿಯ ಪ್ರಾಣಕ್ಕೆ ಕುತ್ತುಬಾರದಂತೆ ಅಥವಾ ಅಂಬುಲೆನ್ಸ್ ಬರುವ ವರೆಗೆ ಯಾವುದೇ ಪ್ರಾಣಾಪಾಯವಾಗದಂತೆ ಅಥವಾ ತೀವ್ರ ರಕ್ತಸ್ರಾವವಾಗುವುದನ್ನು ತಪ್ಪಿಸಲು ತಕ್ಷಣವೇ ಪ್ರಥಮ ಚಿಕಿತ್ಸೆ ಮಾಡಲಾಗುತ್ತದೆ. ಈ ರೀತಿ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡುವುದರಿಂದ ರೋಗಿ ಬೇಗನೆ ಗುಣಮುಖವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ರೋಗಿಗೆ ಯಾವುದೇ ರೀತಿಯ ಹೆಚ್ಚಿನ ಮಾರಣಾಂತಿಕ ತೊಂದರೆ ಉಂಟಾಗುವುದನ್ನು ತಪ್ಪಿಸುತ್ತದೆ. ಅಂಕಿ ಅಂಶಗಳ ಪ್ರಕಾರ ರಸ್ತೆ ಅಪಘಾತಗಳಲ್ಲಿ 25 ರಿಂದ 30 ಶೇಕಡಾ ವ್ಯಕ್ತಿಗಳು ಪ್ರಥಮ ಚಿಕಿತ್ಸೆಯ ಅಲಭ್ಯತೆಯ ಕಾರಣದಿಂದ ಸಾವನ್ನಪ್ಪುತ್ತಾರೆ ಎಂದೂ ತಿಳಿದು ಬಂದಿದೆ.

ಯಾವಾಗ ಪ್ರಥಮ ಚಿಕಿತ್ಸೆ ಅಗತ್ಯವಿರುತ್ತದೆ

1) ಅಪಘಾತಗಳಾಗಿ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ ಮತ್ತು ತೀವ್ರ ರಕ್ತಸ್ರಾವವಾಗುತ್ತಿದ್ದಾಗ
2) ಅಪÀಘಾತಗಳಾಗಿ ವ್ಯಕ್ತಿಯ ಕೈ, ಕಾಲು ಅಥವಾ ಇನ್ನಾವುದೇ ಎಲುಬು ಮುರಿದಿದ್ದಾಗ
3) ವ್ಯಕ್ತಿ ನೀರಿನಲ್ಲಿ ಮುಳುಗಿ ಉಸಿರಾಡದಿದ್ದಾಗ
4) ಕರೆಂಟ್ ಶಾಕ್ ಹೊಡೆದು ವ್ಯಕ್ತಿ ಉಸಿರಾಡದೇ ಇದ್ದಾಗ
5) ಅಪಸ್ಮಾರ ರೋಗಿ ಅಪಸ್ಮಾರಕ್ಕೆ ತುತ್ತಾದಾಗ ತಕ್ಷಣವೇ ಪ್ರಥಮ ಚಿಕಿತ್ಸೆ ಅಗತ್ಯವಿರುತ್ತದೆ.
6) ಹಾವು ಅಥವಾ ಇನ್ನಾವುದೇ ವಿಷ ಜಂತುಗಳು ಕಚ್ಚಿದಾಗ ತುರ್ತು ಪ್ರಥಮ ಚಿಕಿತ್ಸೆ ಅತೀ ಅಗತ್ಯ.
7) ಎತ್ತರದ ಕಟ್ಟಡಗಳಿಂದ ಬಿದ್ದು ಮಾರಣಾಂತಿಕ ಏಟು ತಗುಲಿದಾಗ
8) ಮಕ್ಕಳು ಆಟವಾಡುವಾಗ ಪರಸ್ಪರ ಡಿಕ್ಕಿಯಾಗಿ ಸ್ಮøತಿ ತಪ್ಪಿದಾಗ
9) ಮಧುಮೇಹಿ ರೋಗಿಗಳು ಗ್ಲುಕೋಸ್ ಮಟ್ಟ ಕುಸಿದು ಉಸಿರಾಡದೇ ಇದ್ದಾಗ
ಒಟ್ಟಿನಲ್ಲಿ ಪ್ರಥಮ ಚಿಕಿತ್ಸೆ ಎನ್ನುವುದು ಯಾವುದೇ ರೀತಿಯ ತುರ್ತು ಅವಘಡ ಅಥವಾ ಆಕಸ್ಮಿಕ ಸಂದರ್ಭಗಳಲ್ಲಿ ರೋಗಿಯ ಪ್ರಾಣಕ್ಕೆ ಕುತ್ತು ಬಂದಾಗ ನೀಡುವಂತಹ ಪ್ರಾಥಮಿಕ ಚಿಕಿತ್ಸೆ ಆಗಿರುತ್ತದೆ. ಅಪಘಾತ ನಡೆದು ಮೊದಲಿನ ಒಂದು ಗಂಟೆಯ ಅವಧಿಯನ್ನು “ಗೋಲ್ಡನ್ ಅವರ್” ಎನ್ನಲಾಗುತ್ತದೆ. ಈ ಸಂದರ್ಭಗಳಲ್ಲಿ ತುರ್ತು ಪ್ರಾಥಮಿಕ ಚಿಕಿತ್ಸೆ ದೊರಕಿದಲ್ಲಿ ರೋಗಿಯ ಪ್ರಾಣವನ್ನು ಉಳಿಸಲು ಖಂಡಿತಾ ಸಾಧ್ಯವಿದೆ. ಅನಗತ್ಯ ರಕ್ತಸ್ರಾವ ಅಥವಾ ಮೆದುಳಿಗೆ ಉಂಟಾಗುವ ಹಾನಿಯನ್ನು ಪ್ರಥಮ ಚಿಕಿತ್ಸೆಯಿಂದ ತಡೆಯಬಹುದು ಎಂದು ಅಂಕಿ-ಅಂಶಗಳಿಂದ ಸಾಬೀತಾಗಿದೆ.
ಯಾವ ರೀತಿ ಪ್ರಥಮ ಚಿಕಿತ್ಸೆ ಮಾಡಬಹುದು?
1) ಗಾಯಗೊಂಡ ವ್ಯಕ್ತಿಯಿಂದ ತೀವ್ರ ರಕ್ತಸ್ರಾವವಾಗುತ್ತಿದ್ದಲ್ಲಿ ಒತ್ತಡ ಹಾಕಿ ಅಥವಾ ಬಟ್ಟೆಯಿಂದ ಗಾಯವನ್ನು ಸುತ್ತಿ ರಕ್ತಸ್ರಾವವಾಗದಂತೆ ತಡೆಯಬಹುದು.
2) ಗಾಯಗೊಂಡ ವ್ಯಕ್ತಿಯ ಎಲುಬು ಮುರಿತವಾಗಿದ್ದಲ್ಲಿ ಬ್ಯಾಂಡೇಜ್ ಹಾಕಿ ಮತ್ತಷ್ಟು ನೋವು ಮತ್ತು ರಕ್ತಸೋರದಂತೆ ತಡೆಯಬಹುದು.
3) ಮುಖದ ದವಡೆ ಮುರಿದಿದ್ದಲ್ಲಿ ತಲೆಯ ಸುತ್ತ ಬ್ಯಾಂಡೇಜ್ ಹಾಕಿ ನೋವು ನಿವಾರಿಸಬಹುದು.
4) ವಿಪರೀತ ಗಾಯದಿಂದ ಬಾಯಿ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದಲ್ಲಿ ಉಸಿರಾಟದ ತೊಂದರೆ ಉಂಟಾಗುವುದನ್ನು ತಪ್ಪಿಸಲು ನಾಲಿಗೆಯನ್ನು ಹೊರಗೆ ಎಳೆದು ಹೊಲಿಗೆ ಹಾಕಿದಲ್ಲಿ ಅಥವಾ ಎಳೆದು ಹಿಡಿದಲ್ಲಿ ಉಸಿರಾಟ ಸಾಧ್ಯವಾಗಬಹುದು.
5) ಗಾಯಗೊಂಡ ವ್ಯಕ್ತಿಯನ್ನು ಒಂದು ಬದಿಗೆ ಮಾಡಿ ಮಲಗಿಸಿದಲ್ಲಿ ಗಾಳಿನಳಿಕೆಗೆ ರಕ್ತ ಹೋಗದಂತೆ ತಡೆಯಬಹುದು ಮತ್ತು ಉಸಿರಾಟದ ತೊಂದರೆಯಾಗದಂತೆ ನೋಡಿಕೊಳ್ಳಬಹುದು.
6) ನೀರಿನಲ್ಲಿ ಮುಳುಗಿ ವ್ಯಕ್ತಿ ಉಸಿರಾಡದಿದ್ದಾಗ ಬಾಯಿಯಿಂದ ನೀರು ಹೊರತೆಗೆದು ಕೃತಕ ಉಸಿರಾಟವನ್ನು ನೀಡಬಹುದು.
7) ಕರೆಂಟ್ ಶಾಕ್ ಹೊಡೆದು ಉಸಿರಾಟ ನಿಂತಿದ್ದಲ್ಲಿ ತಕ್ಷಣವೇ ಎದೆ ಭಾಗವನ್ನು ಒತ್ತಿ ಹೃದಯ ಮರುಚಲನೆಯಾಗುವಂತೆ ಮಾಡಬಹುದು.
8) ವಿಷಜಂತು ಹಾಗೂ ಹಾವು ಕಚ್ಚಿದಲ್ಲಿ ಗಾಯದ ಮೇಲ್ಭಾಗದಲ್ಲಿ ಬಟ್ಟೆ ಕಟ್ಟಿ ವಿಷ ರಕ್ತಕ್ಕೆ ಸೇರದಂತೆ ತಡೆಯಬಹುದು.
9) ಅಪಸ್ಮಾರ ರೋಗಿ ಅಪಸ್ಮಾರ ಬಂದು ಎತ್ತರದ ಜಾಗದಲ್ಲಿ ಇದ್ದರೆ ತಕ್ಷಣವೇ ನೆಲದಲ್ಲಿ ಮಲಗಿಸಿ ಯಾವುದೇ ಅಪಾಯದ ವಸ್ತು ಸಿಗದಂತೆ ನೋಡಿಕೊಳ್ಳಬೇಕು.
10) ಮಕ್ಕಳು ಯಾವುದಾದರೂ ಚೂರಿ, ಪೆನ್ಸಿಲ್, ನಾಣ್ಯ, ರಬ್ಬರ್ ಮುಂತಾದ ವಸ್ತು ಬಾಯಿಯಿಂದ ಗಂಟಲಿಗೆ ಸೇರಿಕೊಂಡಲ್ಲಿ ತಕ್ಷಣವೇ ತಲೆಕೆಳಗೆ ಮಾಡಿ ಬೆನ್ನಿಗೆ ಬಡಿಯುವುದರಿಂದ ಉಸಿರಾಟದ ತೊಂದರೆ ತಡೆಯಬಹುದು.
ಪ್ರಥಮ ಚಿಕಿತ್ಸೆ ಪೆಟ್ಟಿಗೆ
ಸಾಮಾನ್ಯವಾಗಿ ಪ್ರತಿಯೊಂದು ಮನೆ, ಕಛೇರಿ, ವಾರ್ಡ್, ಸಾರ್ವಜನಿಕ ಸ್ಥಳಗಳಾದ ರೈಲ್ವೇ ನಿಲ್ದಾಣ, ಬಸ್ಸು ನಿಲ್ದಾಣ, ವಿಮಾನ ನಿಲ್ದಾಣ ಹೀಗೆ ಎಲ್ಲ ಕಡೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಲಭ್ಯವಿರುತ್ತದೆ. ಪ್ರಥಮ ಚಿಕಿತ್ಸೆ ಬೇಕಾಗುವ ಎಲ್ಲಾ ಸಾಮಾನು ಮತ್ತು ಔಷಧಿಗಳು ಇದರಲ್ಲಿ ಇರುತ್ತದೆ.

  1. ಚಿಕ್ಕ, ಮಧ್ಯಮ ಮತ್ತು ದೊಡ್ಡ ಗಾತ್ರದ ಶುಚಿಯಾದ ಸೋಂಕು ರಹಿತ ಡ್ರೆಸ್ಸಿಂಗ್ ಬಟ್ಟೆ.
  2. ಎರಡು-ಮೂರು ವಿಧದ ಮತ್ತು ಗಾತ್ರದ ಬ್ಯಾಂಡೇಜ್‍ಗಳು
  3. ಶುಚಿಯಾದ ಕೈಚೀಲಗಳು ಮತ್ತು ಚಿಕ್ಕ ಬ್ಯಾಂಡೇಜ್
  4. ಸುಟ್ಟಗಾಯಗಳಿಗೆ ಹಚ್ಚುವ ಔಷಧಿಗಳು
  5. ಸೋಂಕು ನಾಶಕ ದ್ರಾವಣಗಳಾದ ಡೆಟ್ಟಾಲ್ ಮತ್ತು ಸೋಂಕು ಬರದಂತೆ ತಡೆಯುವ ಕ್ರೀಮ್‍ಗಳು
  6. ಕತ್ತರಿ ಮತ್ತು ಇಕ್ಕಳ
  7. ನೋವು ನಿವಾರಕ ಔಷಧಿ ಮತ್ತು ಆಂಟಿಬಯೋಟಿಕ್ ಕ್ರೀಮ್‍ಗಳು
  8. ಬ್ಯಾಂಡೇಜ್ ಮತ್ತು ಡ್ರೆಸ್ಸಿಂಗ್‍ಗಳನ್ನು ಗಟ್ಟಿಯಾಗಿ ಬಿಗಿದು ಹಿಡಿದಿಟ್ಟುಕೊಳ್ಳುವ ಟೇಪ್‍ಗಳು
    ಒಟ್ಟಿನಲ್ಲಿ ಯಾವುದೇ ಕಛೇರಿ, ಸಾರ್ವಜನಿಕ ಸ್ಥಳ ಮತ್ತು ವಾಹನಗಳಲ್ಲಿ ಕಡ್ಡಾಯವಾಗಿ ಪ್ರಥಮ ಚಿಕಿತ್ಸಾ ಪಟ್ಟಿಗೆ ಇರತಕ್ಕದ್ದು. ಯಾವುದೇ ಸಂದರ್ಭಗಳಲ್ಲಿ ಅವಘಡಗಳು ಸಂಭವಿಸಿದಾಗ ತಾತ್ಕಾಲಿಕ ನೋವು ಶಮನ ಮತ್ತು ಸೋಂಕು ಬರದಂತೆ ತಡೆಯಲು ಹಾಗೂ ರಕ್ತಸ್ರಾವ ತಪ್ಪಿಸಲು ಪ್ರಥಮ ಚಿಕಿತ್ಸೆ ಪರಿಕರಗಳು ಬಹಳ ಉಪಯುಕ್ತ ಎಂದು ಸಾಬೀತಾಗಿದೆ.
    ಕೊನೆಮಾತು:
    ಪ್ರಥಮ ಚಿಕಿತ್ಸೆ ಎನ್ನುವುದು ಪ್ರತಿಯೊಬ್ಬ ಪ್ರಜೆಯ ಸಾಮಾಜಿಕ ಹೊಣೆಗಾರಿಕೆ ಆಗಿರುತ್ತದೆ. ಯಾರಾದರೂ ತುರ್ತು ಸಂದರ್ಭಗಳಲ್ಲಿ ಪ್ರಾಣಾಪಾಯಕ್ಕೆ ಸಿಲುಕಿದ್ದಾಗ ಜೀವರಕ್ಷಣೆ ಮಾಡುವುದು ಮಾನವನ ಧರ್ಮವಾಗಿರಬೇಕು. ಅಂತಾರಾಷ್ಟ್ರೀಯವಾಗಿ ಹಸಿರು ಹಿಂಭಾಗದ ಮೇಲೆ ಬಿಳಿ ಕ್ರಾಸ್ ಪ್ರಥಮ ಚಿಕಿತ್ಸೆಯ ಚಿಹ್ನೆಯಾಗಿರುತ್ತದೆ. ಪ್ರಥಮ ಚಿಕಿತ್ಸೆ ನೀಡುವಾಗ ರೋಗಿಯ ಸುರಕ್ಷತೆಯ ಜೊತೆಗೆ ಪ್ರಥಮ ಚಿಕಿತ್ಸೆ ನೀಡುವವನ ಸುರಕ್ಷತೆಗೂ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ಗಾಯಗೊಂಡ ವ್ಯಕ್ತಿಗೆ ಮಾನಸಿಕವಾಗಿ ಧೈರ್ಯ ನೀಡಿ ಭರವಸೆ ನೀಡಬೇಕು. ಸಾಂತ್ವನ ಹೇಳಬೇಕು. ಅಪಘಾತಕ್ಕೊಳಗಾದ ವ್ಯಕ್ತಿ ಮಾನಸಿಕ ಆಘಾತಕ್ಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಅವರಿಗೆ ನೈತಿಕ ಬೆಂಬಲ ಅತೀ ಅಗತ್ಯ. ಗಾಯಗೊಂಡ ವ್ಯಕ್ತಿ ಶಾಕ್‍ಗೊಳಗಾಗಿ ನಿಸ್ತೇಜನಾಗಿದ್ದಲ್ಲಿ ಆತನ ದೇಹದ ಉಷ್ಣತೆಯನ್ನು, ಬ್ಲಾಂಕೆಟ್ ಬಳಸಿ ಕಾಯ್ದುಕೊಳ್ಳಬೇಕು. ಒಟ್ಟಿನಲ್ಲಿ ಪ್ರಥಮ ಚಿಕಿತ್ಸೆ ಎನ್ನುವುದು ಸಾಮಾನ್ಯ ಪ್ರಜ್ಞೆ ಮತ್ತು ಪ್ರಸಂಗಾವಧಾನತೆ ಎಲ್ಲವನ್ನೂ ಸಮಾಳಿಸಿಕೊಂಡು ಗಾಯಗೊಂಡ ವ್ಯಕ್ತಿಗೆ ಮುಂದೆ ಅಂಬುಲೆನ್ಸ್ ಬರುವವರೆಗೆ ಅಥವಾ ವೈದ್ಯರ ಶುಶ್ರೂಷೆ ಸಿಗುವವರೆಗೆ ಆತನಿಗೆ ಯಾವುದೇ ಹಾನಿ ಜೀವಕ್ಕೆ ತೊಂದರೆ ಹಾನಿಯಾಗದಂತೆ ಮಾಡುವ ಬಹಳ ಸರಳವಾದ ಪ್ರಕ್ರಿಯೆ ಆಗಿರುತ್ತದೆ. ಪ್ರತಿಯೊಬ್ಬರೂ ಮಹತ್ವ ಅರಿತು ನಿಭಾಯಿಸಿದಲ್ಲಿ ಹೆಚ್ಚಿನ ಸಾವು-ನೋವು ಮತ್ತು ಸಂಕಟಗಳನ್ನು ತಪ್ಪಿಸಬಹುದಾಗಿದೆ ಅದರಲ್ಲಿಯೇ ಸಮಾಜದ ಒಳಿತು ಅಡಗಿದೆ.
    ಡಾ: ಮುರಲೀ ಮೋಹನ್ ಚೂಂತಾರು
    BDS,MDS,DNB,MOSRCSEd(U.K),FPFA, M.B.A.
    ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
    PH:9845135787
    [email protected]