ಬೆಳ್ಳಾರೆಯಲ್ಲಿ ಸ್ನೇಹಿತರ ಕಲಾ ಸಂಘದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಭಾ ಕಾರ್ಯಕ್ರಮ

0

ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ 25ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಕಾರ್ಯಕ್ರಮ ಸೆ. 9 ಮತ್ತು 10ರಂದು ಬೆಳ್ಳಾರೆಯಲ್ಲಿ ನಡೆಯಿತು.


ಸೆ. 10ರಂದು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಪುರೋಹಿತ್ ಅಣ್ಣು ಭಟ್ ದೀಪ ಪ್ರಜ್ವಲಿಸಿ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಮಧ್ಯಾಹ್ನ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ಬೆಳಿಗ್ಗೆಯಿಂದ ಸಂಜೆ ತನಕ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಸಂಜೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಉಲ್ಲಾಸ್ ಉಲ್ಲಾಸ್ ರ ಅಧ್ಯಕ್ಷತೆಯಲ್ಲಿ ಸಭಾ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.

ಕೆ.ವಿ.ಜಿ. ಅಮರಜ್ಯೋತಿ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ ದಿಕ್ಸೂಚಿ ಭಾಷಣ ಮಾಡಿದರು. ಶಾಸಕಿ ಕು. ಭಾಗೀರಥಿ ಮುರುಳ್ಯ, ಬೆಳ್ಳಾರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಿ.ಜಿ.ಎಸ್.ಎನ್. ಪ್ರಸಾದ್, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆ, ಎಸ್.ಬಿ.ಐ ಬೆಳ್ತಂಗಡಿ ಶಾಖಾ ಡೆಪ್ಯುಟಿ ಮ್ಯಾನೇಜರ್ ಮಹಾಬಲ ನಾಯ್ಕ್ ಪರ್ತಿಕೆರೆ, ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾರ್ಯಾಧ್ಯಕ್ಷ ಶ್ರೀನಾಥ್ ರೈ ಬಾಳಿಲ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪೂರ್ವಾಧ್ಯಕ್ಷ ಪದ್ಮನಾಭ ಬೀಡು, ಸುಳ್ಯ ಯುವಜನ ಸಂಯುಕ್ತ ಮಂಡಳಿ ಪ್ರ.ಕಾರ್ಯದರ್ಶಿ ಸಂಜಯ್ ನೆಟ್ಟಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಳ್ಳಾರೆ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಚೀಮುಳ್ಳು ಮತ್ತು ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಸುಜಾತ ಜನಾರ್ಧನ್, ಸಂಘದ ಕಾರ್ಯದರ್ಶಿ ಆನಂದ ಉಮಿಕ್ಕಳ, ಕೋಶಾಧಿಕಾರಿ ಮಹಾಲಿಂಗ ಪಾಟಾಳಿ ಕುರುಂಬುಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರರಿಗೆ ಗುರುರತ್ನ ಪ್ರಶಸ್ತಿ, ಸಂಘಟನಾ ಕ್ಷೇತ್ರಕ್ಕಾಗಿ ಪ್ರದೀಪ್ ಕುಮಾರ್ ರೈ ಪನ್ನೆಯವರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ಬಾಲಕೃಷ್ಣ ನೆಟ್ಟಾರುರವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಸಂಜಯ್ ನೆಟ್ಟಾರು ಸ್ವಾಗತಿಸಿ, ಆನಂದ ಉಮಿಕ್ಕಳ ವಂದಿಸಿದರು. ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಸುಳ್ಯದ ಶಾಸಕಿ ಕು. ಭಾಗೀರಥಿ ಮುರುಳ್ಯ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಬೋಜರಾಜ ಶೆಟ್ಟಿ ವಾಮಂಜೂರು ಮತ್ತು ಅರವಿಂದ ಬೋಳಾರ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಮೇಶ್ ಮಣಿಕ್ಕಾರರ ಸನ್ಮಾನ ಪತ್ರವನ್ನು ಸಮಿತಿಯ ಜೊತೆ ಕಾರ್ಯದರ್ಶಿ ಶ್ರೀನಿವಾಸ ಕುರುಂಬುಡೇಲು, ಬಾಲಕೃಷ್ಣ ನೆಟ್ಟಾರುರವರ ಸನ್ಮಾನ ಪತ್ರವನ್ನು ಮಹಾಲಿಂಗ ಕುರುಂಬುಡೇಲು ಮತ್ತು ಪ್ರದೀಪ್ ಕುಮಾರ್ ರೈ ಪನ್ನೆಯವರ ಸನ್ಮಾನ ಪತ್ರವನ್ನು ಶಿಕ್ಷಕ ಕೊರಗಪ್ಪ ಕುರುಂಬುಡೇಲು ವಾಚಿಸಿದರು.

ಹಿಂದೂ ಹಬ್ಬಗಳಲ್ಲಿ ಅಷ್ಟಮಿ ವಿಶೇಷವಾದದ್ದು. ಶ್ರೀಕೃಷ್ಣ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಿದವು. ಇಡೀ ಮನುಕುಲಕ್ಕೆ ಶ್ರೇಷ್ಠ ಸಂದೇಶವನ್ನು ಸಾರಿದ ಮಹಾನ್ ಗ್ರಂಥ ಭಗವದ್ಗೀತೆಯನ್ನು ಬೋಧಿಸಿದ ಶ್ರೀಕೃಷ್ಣ ಕುರುಕ್ಷೇತ್ರದಲ್ಲಿ ಪಾಂಜಜನ್ಯ ಮೊಳಗಿಸಿ ಧರ್ಮಜಾಗೃತಿಯನ್ನು ಮೂಡಿಸಿದಂತೆ ನಾವೂ ಇಂದು ಧಾರ್ಮಿಕ ಆಚರಣೆಗಳ ಮೂಲಕ ಜಾಗೃತರಾಗಬೇಕು. ಹಿಂದೂ ಸಮಾಜದ ಮೇಲೆ, ಹಿಂದೂಗಳ ಭಾವನೆಗಳ ಮೇಲೆ ಧಾಳಿಯಾದಾಗ ನಾವು ನಿರ್ವೀರಾಗದೆ, ನಿಷ್ಕ್ರಿಯರಾಗಿರದೆ ಎಚ್ಚೆತ್ತುಕೊಂಡು ದುಷ್ಟರನ್ನು ಶ್ರೀಕೃಷ್ಣನ ಹಾಗೆ ನಿಗ್ರಹಿಸಲು ಮುಂದಾಗಬೇಕು – ಡಾ. ಯಶೋಧ ರಾಮಚಂದ್ರ

ಶ್ರೀಕೃಷ್ಣ ತನ್ನ ಜೀವನದಲ್ಲಿ ಧರ್ಮ ಸ್ಥಾಪನೆಗಾಗಿ ಬಂಧುಗಳನ್ನೂ ನೋಡಲಿಲ್ಲ. ದುಷ್ಟರನ್ನು ಶಿಕ್ಷಿಸುವುದೇ ಅವನ ಉದ್ದೇಶವಾಗಿತ್ತು. ಅದೇ ರೀತಿ ನಾವು ಸಮಾಜದಲ್ಲಿ ತಪ್ಪು ಮಾಡಿದಾಗ ಅಂತವರನ್ನು ತದ್ದುವ ಕೆಲಸ ಮಾಡಬೇಕು – ಭಾಗೀರಥಿ ಮುರುಳ್ಯ

ಇಂದು ಅನೇಕ ಯುವಕ ಯುವತಿಯರು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದರ ಹಿಂದೆ ದುಷ್ಟ ಕೂಟವೇ ಇದೆ. ಸನಾತನ ಧರ್ಮವನ್ನು ಹೀಯಾಲಿಸುವವರೂ ಅನೇಕ ಮಂದಿ ಇದ್ದಾರೆ. ಅಂತಹ ದುಷ್ಟರನ್ನು ನಿಗ್ರಹಿಸುವ ಶಕ್ತಿ ಇಂತಹ ಸಂಸ್ಥೆಗಳಿಂದ ಸಾಧ್ಯ – ಪಿ.ಜಿ.ಎಸ್. ಎನ್. ಪ್ರಸಾದ್

ಬಳಿಕ ಗಂಟೆಯಿಂದ ಚಾಪರ್ಕ ಕಲಾವಿದರಿಂದ ಡಾ. ದೇವದಾಸ್ ಕಾಪಿಕಾಡ್ ರಚಿಸಿ, ನಿರ್ದೇಶಿಸಿ, ನಟಿಸಿರುವ ನಾಯಿದ ಬೀಲ ತುಳು ನಾಟಕ ನಡೆಯಲಿದೆ.