ಸಂತೋಷ್ ಕೊಡೆಂಕೇರಿ ನಿರ್ದೇಶನದ ” ರವಿಕೆ ಪ್ರಸಂಗ” ಸಿನೆಮಾ ಶೀಘ್ರವೇ ತೆರೆಗೆ

0

ಸೂಕ್ಷ್ಮ ಮತ್ತು ವಿಶಿಷ್ಟ ಕಥಾ ಹಂದರದ ಚಿತ್ರ ಪ್ರೇಕ್ಷಕರ ಮನಗೆಲ್ಲುವ ನಿರೀಕ್ಷೆ ಇದೆ

ಸಂತೋಷ್ ಕೊಡೆಂಕೇರಿ, ಪಾವನಾ ಸಂತೋಷ್ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ

ಮಹಿಳೆಯರು ನಿತ್ಯ ಧರಿಸುವ ಸೀರೆ, ಓಲೆ, ಬಳೆ ಹಾಗು ಗೆಜ್ಜೆ ಸೇರಿದಂತೆ ಹಲವು ವಸ್ತುಗಳ ಬಗ್ಗೆ ಸಾಕಷ್ಟು ಸಿನೆಮಾಗಳು, ಹಾಡುಗಳು ಬಂದಿವೆ. ಆದರೆ ರವಿಕೆ ಬಗ್ಗೆ ಈವರೆಗೂ ಯಾವುದೇ ಹಾಡು, ಸಿನಿಮಾ ಮೂಡಿಬಂದಿಲ್ಲ.

ಇದೀಗ ರವಿಕೆ ಕುರಿತಾಗಿಯೇ ಸಿನಿಮಾ ಸಿದ್ಧಗೊಂಡಿದೆ. ಶೀರ್ಷಿಕೆಯಿಂದಾಗಿಯೇ ಕುತೂಹಲ ಹುಟ್ಟಿಸಿರುವ ‘ರವಿಕೆ ಪ್ರಸಂಗ’ ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

ವಿಶೇಷವೆಂದರೆ ಇದರ ನಿರ್ಮಾಪಕ ಮತ್ತು ನಿರ್ದೇಶಕರು ಸುಳ್ಯದವರೇ ಆದ ಸಂತೋಷ್ ಕೊಡೆಂಕಿರಿ. ಅವರ ಪತ್ನಿ‌ ಶ್ರೀಮತಿ ಪಾವನಾ ಸಂತೋಷ್ ಅವರ ಕಥೆಗೆ ಸಂತೋಷ್ ಚಿತ್ರಕಥೆ ಬರೆದಿದ್ದಾರೆ.

ಸಂತೋಷ್ ಹಾಗೂ ಪಾವನಾ ದಂಪತಿ‌ ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿ, ತಮ್ಮ ಸಿನೆಮಾ ಕುರಿತು ಮಾಹಿತಿ ನೀಡಿದರು.

ಸಂತೋಷ್ ಕೊಡೆಂಕಿರಿ ಮಾತನಾಡಿ, ಇದೊಂದು ವಿಶಿಷ್ಟ ಹಾಗೂ ಸೂಕ್ಷ್ಮ ಕಥಾ ಹಂದರದ ಚಿತ್ರ. ಕಿರಣ್ ಕಾವೇರಪ್ಪ ರವಿಕೆ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ‌‌. ಅಷ್ಟೇ ಚೆನ್ನಾಗಿ ಚೈತ್ರ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ವಿನಯ್ ಶರ್ಮಾ ಸಂಗೀತದಲ್ಲಿ ಎಲ್ಲಾ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಹಲವು ಖ್ಯಾತ ನಟ, ನಟಿಯರು ಅಭಿನಯಿಸಿದ್ದಾರೆ. ಇಡೀ ಚಿತ್ರ ಪೂರ್ಣ ಸಿದ್ಧಗೊಂಡಿದ್ದು, ಶೀಘ್ರವೇ ತೆರೆ ಕಾಣಲಿದೆ ಎಂದರು.

ಪಾವನ ಸಂತೋಷ್ ಮಾತನಾಡಿ, ಹೆಣ್ಣುಮಕ್ಕಳಿಗೆ ಸೀರೆಗಿಂತ ಹೆಚ್ಚಿನ ಪ್ರೀತಿ ರವಿಕೆ ಮೇಲಿರುತ್ತದೆ. ಆ ರವಿಕೆ ಕುರಿತು ಕಥೆ ಬರೆದಿದ್ದೇನೆ. ಸಹಕಾರ ನೀಡಿದ ನನ್ನ ಪತಿ ಸಂತೋಷ್ ಹಾಗೂ ಇಡೀ ಚಿತ್ರತಂಡಕ್ಕೆ ನಾನು ಆಭಾರಿ ಎಂದರು.

ಗೀತಾ ಭಾರತಿ, ಪದ್ಮಜಾ ರಾವ್ ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗನಾಥ್,, ರಘು ಪಾಂಡೇಶ್ವರ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದು, ಸುಳ್ಯದ ಕೆಲವು ಪ್ರತಿಭಾನ್ವಿತರು ಕೂಡಾ ಇದರಲ್ಲಿ ನಟಿಸಿದ್ದಾರೆ ಎಂದು ಅವರು ತಿಳಿಸಿದರು.

ಸಂತೋಷ್ ಕೊಡೆಂಕಿರಿಯವರು ಇದೇ ಸಂದರ್ಭದಲ್ಲಿ ತನ್ನ ” ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ” ಸಿನೆಮಾ ಕುರಿತು ಕೂಡಾ ಮಾಹಿತಿ ನೀಡಿದರು.

ಸಂತೋಷ್ ಅವರ ತಂದೆ ಬಾಲಕೃಷ್ಣ ಭಟ್ ಕೊಡಂಕಿರಿ, ಚಿತ್ರದ ಸಹ ನಿರ್ಮಾಪಕ‌ ಶಿವರುದ್ರಯ್ಯ ಪತ್ರಿಕಾಗೋಷ್ಠಿಯಲ್ಲಿದ್ದರು.