ಅ.3 ರಂದು ಮಂಗಳೂರಿನಲ್ಲಿ ಪಂಚಾಯತ್ ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶ

0

ಜಿಲ್ಲಾ ಕಾಂಗ್ರೆಸ್ ಸಮಿತಿ, ದ.ಕ. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಆಶ್ರಯದಲ್ಲಿ ಪಂಚಾಯತ್ ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶ ಅ.3 ರಂದು ಮಂಗಳೂರು ಪುರಭವದಲ್ಲಿ ನಡೆಯಲಿದ್ದು, ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸಮಾರಂಭದಲ್ಲಿ ಭಾಗವಹಿಸಿ ಪಂಚಾಯತ್ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ರೈ ತಿಳಿಸಿದರು.

ಸೆ.26 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪಂಚಾಯತ್ ಸದಸ್ಯರ ಬೇಡಿಕೆ ಗಳಿಗೆ ಧ್ವನಿ ಎತ್ತುವ ಕೆಲಸವನ್ನು ಸಂಘಟನೆ ಮಾಡುತ್ತಾ ಬಂದಿದೆ. ಅಧಿಕಾರ ವಿಕೇಂದ್ರೀಕರಣ ವಿಷಯದಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದೆ. ಕಳೆದ ಅವಧಿಯಲ್ಲಿ ಸಿದ್ಧರಾಮಯ್ಯರು ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ 26 ಇಲಾಖೆಗಳ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸುವ ಮೂಲಕ ರಮೇಶ್ ಕುಮಾರ್ ವರದಿ ಜಾರಿ ಮಾಡಿತ್ತು. ನಂತರ ಬಂದ ಬಿಜೆಪಿ ಸರಕಾರ ಈ ಎಲ್ಲಾ ಅಧಿಕಾರವನ್ನು ಮೊಟಕುಗೊಳಿಸಿದೆ ಎಂದು ಅವರು ಹೇಳಿದರು.

ಅ.3ರ ಸಮಾವೇಶದಲ್ಲಿ ಪಂಚಾಯತ್ ಗಳ ಹಾಲಿ ಸದಸ್ಯರು, ಮಾಜಿ ಸದಸ್ಯರು, ಮಾಜಿ ತಾ.ಪಂ., ಜಿ.ಪಂ. ಸದಸ್ಯರು ಭಾಗವಹಿಸಲಿದ್ದಾರೆ. ಪಂಚಾಯತ್ ರಾಜ್ ಅಧಿನಯಮದ ಕುರಿತು ಬೇಡಿಕೆ, ಸಮಸ್ಯೆಗಳ ಕುರಿತು ಪಂಚಾಯತ್ ಪ್ರತಿನಿಧಿಗಳಿಂದ ಪಟ್ಟಿ ತರಿಸಿಕೊಂಡು ಸಚಿವರಿಗೆ ಹಸ್ತಾಂತರ ಮಾಡಲಾಗುವುದು. ಮತ್ತು ಪಂಚಾಯತ್ ರಾಜ್ ಸಚಿವರೊಂದಿಗೆ ಸಂವಾದ ನಡೆಸಿ, ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ವಿವರ ನೀಡಿದರು.

ಪತ್ರಿಕಾಗೋಷ್ಠಿ ಯಲ್ಲಿ ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಲೀಲಾ ಮನಮೋಹನ್, ಜಿಲ್ಲಾ ಕಾರ್ಯದರ್ಶಿ ಅಶೋಕ್ ಚೂಂತಾರು, ತಾಲೂಕು ಸಮಿತಿ ಅಧ್ಯಕ್ಷ ಜಯಪ್ರಕಾಶ್ ನೆಕ್ರೆಪ್ಪಾಡಿ ಇದ್ದರು.