ದೇವಚಳ್ಳ ಗ್ರಾ.ಪಂ. ಅಧ್ಯಕ್ಷತೆ ಮೀಸಲಾತಿ ದಿಢೀರ್ ಬದಲಾವಣೆ

0

ಅಧ್ಯಕ್ಷರಾಗಿ ಶೈಲೇಶ್ ಅಂಬೆಕಲ್ಲು ಆಯ್ಕೆ

ಎರಡು ಬಾರಿ ಮಂದೂಡಲ್ಪಟ್ಟಿದ್ದ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರ ಆಯ್ಕೆಗೆ ಇಂದು ನಡೆದ 3ನೇ ಬಾರಿಯ ಚುನಾವಣೆಯ ಆಯ್ಕೆ‌ ಪ್ರಕ್ರಿಯೆಯಲ್ಲಿ ಬಾರೀ ಹೈಡ್ರಾಮ ನಡೆದಿದ್ದು ಅಧ್ಯಕ್ಷರಾಗಿ ಶೈಲೇಶ್ ಅಂಬೆಕಲ್ಲು ಆಯ್ಕೆಯಾಗಿದ್ದಾರೆ.

ಮೀಸಲಾತಿ ಪ್ರಕಾರ ಹಿಂದುಳಿದ ವರ್ಗ ಎ ಸ್ಥಾನ ಮೀಸಲಾಗಿತ್ತು. ಅದರಂತೆ ಸುಲೋಚನಾ ದೇವ ಮತ್ತು ಪ್ರೇಮಲತಾ ಕೇರ ಅರ್ಹರಾಗಿದ್ದರು. ಈ ಹಿಂದೆ ಎರಡು ಬಾರಿ ಚುನಾವಣೆ ನಡೆದಾಗಲೂ ಅವರಿಬ್ಬರೂ ನಾಮಪತ್ರ ಸಲ್ಲಿಸಿ ಹಿಂತೆಗೆದುಕೊಂಡದ್ದರಿಂದ ಚುನಾವಣೆ ನಡೆದಿರಲಿಲ್ಲ. ಮೂರನೇ ಬಾರಿಗೆ ಚುನಾವಣೆಗೆ ಇಂದಿನ ದಿನವನ್ನು ಚುನಾವಣಾಧಿಕಾರಿ ಅರಬಣ್ಣ ಪೂಜಾರಿಯವರು ನಿಗದಿಗೊಳಿಸಿದ್ದರು.

ಇಂದು ನಡೆದ ಚುನಾವಣೆಯಲ್ಲಿ ಅರ್ಹರಿಬ್ಬರೂ ನಾಮಪತ್ರ ಸಲ್ಲಿಸಲಿಲ್ಲ.‌ ಇದರಿಂದಾಗಿ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದ್ದ ಹಿಂದುಳಿದ ವರ್ಗ ಬಿ ಯ ಶೈಲೇಶ್ ಅಂಬೆಕಲ್ಲು ರವರ ನಾಮಪತ್ರವನ್ನು ಸ್ವೀಕರಿಸಲು ಚುನಾವಣಾಧಿಕಾರಿ ನಿರ್ಧರಿಸಿದರು. ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇದ್ದ ಕಾರಣ ಶೈಲೇಶ್ ಅವಿರೋಧ ಅಯ್ಕೆಯಾದರು.

ಚುನಾಚಣಾ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿ ತೋಟಗಾರಿಕೆ‌ ಇಲಾಖೆಯ ಅರಬಣ್ಣ ಪೂಜಾರಿ‌ ನೇರವೇರಿಸಿದರು‌.

ಚುನಾವಣಾಧಿಕಾರಿ ವಿವರಣೆ

ಈ ಚುನಾವಣೆ ಪ್ರಕ್ರಿಯೆ ಬಗ್ಗೆ ಚುನಾವಣಾಧಿಕಾರಿ ಅರಬಣ್ಣ ಪೂಜಾರಿಯವರನ್ನು ಸಂಪರ್ಕಿಸಿ ವಿಚಾರಿಸಿದಾಗ ಕಾಯ್ದೆ 1993 ಸೆಕ್ಷನ್ 44 ರ ಪ್ರಕಾರ ಎ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳಿಲ್ಲದೆ ಇದ್ದರೆ ಬಿ ವರ್ಗದವರನ್ನು ಆ ಸ್ಥಾನದಲ್ಲಿ ಆಯ್ಕೆ ಮಾಡಬಹುದು ಎಂದಿದೆ. ಇಂದು ಮೂರನೇ ಬಾರಿ ದೇವಚಳ್ಳ ಗ್ರಾ.ಪಂ. ಅಧ್ಯಕ್ಷತೆಗೆ ಚುನಾವಣೆ ಘೋಷಿಸಲಾಗಿತ್ತು. ಆದರೆ ಎ ವರ್ಗದ ಇಬ್ಬರು ಸದಸ್ಯರೂ ನಾಮಪತ್ರ ಸಲ್ಲಿಸದೆ ಇದ್ದುದರಿಂದ ಬಿ ವರ್ಗದವರೊಬ್ಬರು ಸಲ್ಲಿಸಿದ ನಾಮಪತ್ರವನ್ನು ಸ್ವೀಕರಿಸಿ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ಆ ಬಗ್ಗೆ ನಾವು ಸದಸ್ಯರಿಗೆ ಮೊದಲೇ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು.

ಮೋಸ ನಡೆದಿದೆ : ಪ್ರೇಮಲತಾ ಕೇರ

ಹಿಂದುಳಿದ ಎ ವರ್ಗದ ಸದಸ್ಯೆ ಬಿ.ಜೆ.ಪಿ.ಯ ಪ್ರೇಮಲತಾ ಕೇರರವರು ಸುದ್ದಿಗೆ ಪ್ರತಿಕ್ರಿಯೆ ನೀಡಿ ” ನಿನ್ನೆ ನಮ್ಮ ಪಕ್ಷದ ಅಧ್ಯಕ್ಷರು ಮನೆಗೆ ಬಂದು ” ನೀವು ನಾಮಪತ್ರ ಸಲ್ಲಿಸುವುದು ಬೇಡ. ಸುಲೋಚನಾ ದೇವರವರು ನಮ್ಮ ಜತೆಗೆ ಇದ್ದಾರಲ್ಲ ಅವರು ಅಧ್ಯಕ್ಷರಾಗಲಿ” ಎಂದು ಹೇಳಿದರು. ಅದರಂತೆ ನಾನು ಇವತ್ತು ನಾಮಪತ್ರ ಸಲ್ಲಿಸಲಿಲ್ಲ. ಆದರೆ ಸುಲೋಚನಾರವರು ನಾಮಪತ್ರ ಸಲ್ಲಿಸದೆ ಶೈಲೇಶ್ ಅಂಬೆಕಲ್ಲು ನಾಮಪತ್ರ ಸಲ್ಲಿಸಿದ್ದಾರೆ. ಅವರು ಸಲ್ಲಿಸಿದ್ದಾರೆಂದು ನಮಗೆ ಗೊತ್ತಾದುದೇ ನಾಮಪತ್ರ ಸಲ್ಲಿಕೆಯ ಅವಧಿ ಮುಗಿದ ಮೇಲೆ‌. ನಮಗೆ ಮೋಸವಾಗಿದೆ” ಎಂದು ಹೇಳಿದ್ದಾರೆ.