ಸೂಡಾ ನಿಯಮದಿಂದ ಸಾರ್ವಜನಿಕರಿಗೆ ಸಮಸ್ಯೆ

0

ಸುಳ್ಯ ನ. ಪಂ. ಸದಸ್ಯರು ಮತ್ತು ಸಿಬ್ಬಂದಿಗಳೊಂದಿಗೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಭೆ

ನ.7 ರಂದು ಸುಳ್ಯ ಪ್ರವಾಸದಲ್ಲಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ನಗರ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದರು.


ಶಾಸಕಿ ಭಾಗೀರಥಿ ಮುರುಳ್ಯ, ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸದಸ್ಯರೊಂದಿಗೆ ಸುಳ್ಯ ನಗರದ ಕುರಿತು ಸಮಾಲೋಚನೆ ನಡೆಸಿದ ಕೋಟ ಶ್ರೀನಿವಾಸ್ ಪೂಜಾರಿ ನಗರ ಅಭಿವೃದ್ಧಿಗೆ ಬೇಕಾದ ವಿಷಯಗಳ ಕುರಿತು ಚರ್ಚೆ ನಡೆಸಿದರು.

ನಗರ ಪಂಚಾಯತ್ ಸದಸ್ಯ ವಿನಯಕುಮಾರ್ ಕಂದಡ್ಕ ಮಾತನಾಡಿ ಕಚೇರಿಯಲ್ಲಿ ಅಧಿಕಾರಿಗಳ ಕೊರತೆ ಇರುವ ಬಗ್ಗೆ ಪ್ರಸ್ತಾಪಿಸಿ ಅತಿ ಶೀಘ್ರವಾಗಿ ಅಧಿಕಾರಿಗಳನ್ನು ನೀಡುವ ಕುರಿತು ಮನವಿ ಮಾಡಿಕೊಂಡರು.ಮತ್ತು ಸುಳ್ಯ ನಗರದ ಬಹುತೇಕ ಸಾರ್ವಜನಿಕರಿಗೆ ಉಂಟಾಗಿರುವ ಸೂಡಾ ನಿಯಮದ ಸಮಸ್ಯೆಯ ಬಗ್ಗೆ ವಿವರಿಸಿ ನಗರದ
ಬಹುತೇಕ ಕಡೆಗಳಲ್ಲಿ ಇಲ್ಲಿಯ ನಿವಾಸಿಗಳು ಸಣ್ಣಪುಟ್ಟ ಮನೆ ನಿರ್ಮಿಸಿಕೊಂಡಿದ್ದು ಅಂತಹ ಸ್ಥಳದಲ್ಲಿ ರಸ್ತೆಗಳಿಗೆ ನಿಯಮದ ಪ್ರಕಾರ ಜಾಗ ಬಿಡಲು ಸಾಧ್ಯವಾಗದೆ ಸಮಸ್ಯೆ ಎದುರಿಸುವಂತಹಾಗುತ್ತದೆ.
ಕೆಲವು ಕಡೆಗಳಲ್ಲಿ 15 ಅಡಿಗಳಷ್ಟು ಜಾಗ ರಸ್ತೆಗೆ ಬಿಟ್ಟರೆ ಮತ್ತು ಕೆಲವು ಕಡೆಗಳಲ್ಲಿ ಒಂಬತ್ತು ಅಡಿಗಳಷ್ಟು ಬಿಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇದರ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸುಳ್ಯ ನಗರಕ್ಕೆ ವಿಶೇಷ ರಿಯಾಯಿತಿಯನ್ನು ನೀಡುವಂತೆ ಮುತುವರ್ಜಿ ವಹಿಸಬೇಕೆಂದು ಕೇಳಿಕೊಂಡರು.


ಇದಕ್ಕೆ ಉತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿಯವರು ಮುಂದಿನ ವಾರದಲ್ಲಿಯೇ ಸಂಬಂಧಪಟ್ಟ ಅಧಿಕಾರಿ ಮತ್ತು ಸುಳ್ಳದ ಶಾಸಕರು ಬೆಂಗಳೂರಿಗೆ ಬಂದು ಅಲ್ಲಿ ನಗರ ಯೋಜನೆಯ ಪ್ರಾಧಿಕಾರದ ಕಾರ್ಯದರ್ಶಿಯವರ ಜೊತೆ ಸಭೆ ಸೇರಿ ಇದರ ಬಗ್ಗೆ ಚರ್ಚಿಸೋಣ ಎಂದು ಸಲಹೆ ನೀಡಿದರು. ಬರುವ ಸಂದರ್ಭದಲ್ಲಿ ಇದರ ಬಗ್ಗೆ ಸಂಪೂರ್ಣವಾದ ಅಧ್ಯಯನವನ್ನು ಮಾಡಿ ಬನ್ನಿ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸುಳ್ಯ ನಗರದ ಒಳಚರಂಡಿಯ ಕಾಮಗಾರಿ ಮತ್ತು ಪ್ರಸ್ತುತ ಒಳ ಚರಂಡಿ ಕಾಮಗಾರಿಗೆ ಕೆಯುಡಬ್ಲ್ಯೂ ಎಸ್ ನಿಂದ ಬಿಡುಗಡೆಗೊಂಡಿರುವ 16 ಕೋಟಿ ರೂಪಾಯಿ ಯೋಜನೆಯ ಕುರಿತು ಸದಸ್ಯ ವಿನಯಕುಮಾರ್ ಕಂದಡ್ಕ ಮಾತನಾಡಿ ನಗರದ ಒಳಚರಂಡಿ ಕಾಮಗಾರಿಯಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ವಿವರವನ್ನು ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಕಳೆದ 20 ವರ್ಷಗಳಿಂದ ಸುಳ್ಯದಲ್ಲಿ ನಿರ್ಮಿಸಿರುವ ಒಳಚರಂಡಿಯ ನೀರು ಅದು ಸೇರಬೇಕಾದ ಜಾಗಕ್ಕೆ ಇನ್ನೂ ಸೇರಿಲ್ಲ.
ಇದೀಗ 16 ಕೋಟಿ ರೂ ಯೋಜನೆಯ ಕಾಮಗಾರಿ ಕೇವಲ 30% ಜನರಿಗೆ ಮಾತ್ರ ಅನುಕೂಲವಾಗುತ್ತಿದ್ದು ಉಳಿದ 70% ಜನರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲದಿದ್ದಲ್ಲಿ ಇಂತಹ ಯೋಜನೆ ಏಕೆ ? ಎಂದು ಪ್ರಶ್ನಿಸಿದರು.


ಆದ್ದರಿಂದ ನಗರದ ಅಭಿವೃದ್ಧಿ ದೃಷ್ಟಿಯಿಂದ ಈ ಎಲ್ಲಾ ವಿಷಯಗಳನ್ನು ಪ್ರಾಮುಖ್ಯತೆಯಾಗಿ ತೆಗೆದುಕೊಂಡು ಕೆಲಸ ಕಾರ್ಯಗಳು ನಡೆಯಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ನಗರ ಪಂಚಾಯತ ಸದಸ್ಯರುಗಳು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಬಿಜೆಪಿ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.