ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೊರಾಂಗಣ ಪ್ರವೇಶಿಸಿದ ಶ್ರೀ ದೇವರು

0

ಹೊರಾಂಗಣ ಉತ್ಸವಾದಿಗಳು ಆರಂಭ



ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ದೇವರು ಹೊರಾಂಗಣ ಪ್ರವೇಶಿಸಿದರು.ಬಳಿಕ ದೀಪಾವಳಿ ಪ್ರಯುಕ್ತ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿತು. ಈ ಮೂಲಕ ಶ್ರೀ ಕ್ಷೇತ್ರದಲ್ಲಿ ಶ್ರೀ ದೇವರ ಹೊರಾಂಗಣ ವರ್ಷಾವಧಿ ಉತ್ಸವಗಳು ಆರಂಭವಾಯಿತು. ಇನ್ನು ಮುಂದೆ ಶ್ರೀ ದೇವಳದಲ್ಲಿ ಶ್ರೀ ದೇವರ ಪಾಲಕಿ ಉತ್ಸವ, ಭಂಡಿ ಉತ್ಸವ ಹಾಗೂ ಮಂಟಪೋತ್ಸವ ಸೇವೆಗಳು ನಡೆಯುತ್ತದೆ. ಮುಂದೆ ಬರುವ ಲಕ್ಷದೀಪೋತ್ಸವದ ನಂತರ ರಥಬೀದಿಯಲ್ಲಿ ರಥೋತ್ಸವಗಳು ನಡೆಯಲಿದೆ.


ನಾಡಿನ ಉಳಿದ ದೇವಾಲಯಗಳಲ್ಲಿ ಪತ್ತನಾಜೆಯಂದು ಕೊನೆಯ ಉತ್ಸವವಾಗಿ ಉತ್ಸವಮೂರ್ತಿಯು ಗರ್ಭಗುಡಿಯನ್ನು ಪ್ರವೇಶಿಸುವುದರೊಂದಿಗೆ ಉತ್ಸವಗಳು ಕೊನೆಯಾಗುತ್ತದೆ. ಆದರೆ ಕುಕ್ಕೆಯಲ್ಲಿ ಮಾತ್ರ ಜೇಷ್ಠ ಶುದ್ಧಷಷ್ಠಿಯಂದು ಕೊನೆಯ ಉತ್ಸವವು ನಡೆದು,ದೀಪಾವಳಿ ಅಮವಾಸ್ಯೆಯಂದು ಉತ್ಸವ ಆರಂಭವಾಗುತ್ತದೆ. ಶ್ರೀ ದೇವರ ಮಹಾಪೂಜೆಯ ಬಳಿಕ ಶ್ರೀ ದೇವರು ಹೊರಾಂಗಣ ಪ್ರವೇಶಿಸಿದರು. ನಂತರ ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ಶ್ರೀ ದೇವರ ಉತ್ಸವಾಧಿಗಳು ನೆರವೇರಿತು. ಸಹಸ್ರಾರು ಭಕ್ತಾಧಿಗಳು ಶ್ರೀ ದೇವರ ಉತ್ಸವವನ್ನು ವೀಕ್ಷಿಸಿ ಕೃತಾರ್ಥರಾದರು. ಕಾರ್ತಿಕ ಮಾಸದಲ್ಲಿ ಬರುವ ಲಕ್ಷ ದೀಪೋತ್ಸವದ ನಂತರ ರಥಬೀದಿಯಲ್ಲಿ ರಥೋತ್ಸವ ಆರಂಭಗೊಳ್ಳಲಿದೆ.ಈ ಮೊದಲು ದೇವಳದಲ್ಲಿ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಲಕ್ಷ್ಮೀ ಪೂಜೆ ನೆರವೇರಿತು.


ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ.ವಿ.ಭಟ್, ಶೋಭಾ ಗಿರಿಧರ್,ಲೋಕೇಶ್ ಮುಂಡುಕಜೆ, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಶ್ರೀ ದೇವಳದ ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.