ಪರಿಶೀಲನೆ ಬಳಿಕ ಹೊಸ ಪೈಪ್ ಲೈನ್ ಅಳವಡಿಸಿ ನೀರು ಪೂರೈಕೆಗೆ ಕ್ರಮ
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ 10 ನೇ ವಾರ್ಡ್‌ನಲ್ಲಿ ನ.ಪಂ. ನಿಂದ ಮನೆಗಳಿಗೆ ಸರಬರಾಜಾಗುತ್ತಿರುವ ನೀರು ದುರ್ವಾಸನೆ ಬೀರುತ್ತಿದೆ ಎಂದು ನಿವಾಸಿಗಳು ನ.ಪಂ. ಆಡಳಿತಾಧಿಕಾರಿಗಳಿಗೆ ದೂರು ನೀಡಿದ್ದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಪರಿಹಾರದ ಕ್ರಮಕೈಗೊಂಡಿರುವುದಾಗಿ ತಿಳಿದುಬಂದಿದೆ.
ನಗರದ 10 ನೇ ವಾರ್ಡ್ ವ್ಯಾಪ್ತಿಯ ಅಂಗಡಿಮಠ ಎಂಬಲ್ಲಿ ಸತ್ಯಪ್ರಸಾದ್ ನಾಯಕ್ ಎಂಬವರ ಮನೆಗೆ ನ.ಪಂ. ಸರಬರಾಜು ಮಾಡುವ ನೀರು ದುರ್ವಾಸನೆ ಬರುತಿತ್ತು. ಉಪಯೋಗಿಸಲು ಸಾಧ್ಯವಾಗುತ್ತಿರಲಿಲ್ಲ. ನ.21 ರಂದು ಅವರು ನಗರ ಪಂಚಾಯತ್ ಗೆ ಹೋಗಿ ಈ ವಿಷಯ ತಿಳಿಸಿದ್ದರು. ಆದರೂ ಪರಿಹಾರವಾಗದಿದ್ದಾಗ, ನ.22 ರಂದು ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ರಿಗೆ ಮನವಿ ಮಾಡಿ ಶುದ್ಧ ನೀರು ಕೊಡುವಂತೆ ಕೇಳಿಕೊಂಡರಲ್ಲದೆ, ದುರ್ವಾಸನೆ ಬರುವ ನೀರನ್ನು ಬಾಟಲಿಯಲ್ಲಿ ತುಂಬಿಸಿ ಕೊಟ್ಟಿದ್ದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ರವರು ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ರಿಗೆ ಮನವಿ ಮಾಡಿಕೊಂಡ ಬಳಿಕ ಆ ಮನವಿಯ ಪ್ರತಿಯನ್ನು ನಗರ ಪಂಚಾಯತ್ ಗೆ ಬಂದು ಮುಖ್ಯಾಧಿಕಾರಿ ಯವರಿಗೂ ಸತ್ಯಪ್ರಸಾದರು ನೀಡಿ ಮನವಿ ಮಾಡಿಕೊಂಡಿದ್ದರು. ಈ ವೇಳೆ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕಾರ್ ಜತೆಗಿದ್ದರು.
ಅಧಿಕಾರಿಗಳ ಪರಿಶೀಲನೆ : ನ.23 ರಂದು ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ರವರು ಬಂದು ಪರಿಶೀಲನೆ ನಡೆಸಿದರು. ವಾರ್ಡ್ ಸದಸ್ಯರು ಜತೆಗಿದ್ದರು.
ಈ ವೇಳೆ ಆ ಭಾಗದಲ್ಲಿ ಅಳವಡಿಸಿದ ಪೈಪ್ ಒಡೆದು ಚರಂಡಿ ನೀರು ಸೇರಿದ್ದರಿಂದ ದುರ್ವಾಸನೆ ಬರುತಿತ್ತೆಂದು ತಿಳಿದುಬಂದಿದೆ. ಬಳಿಕ ಆ ಪೈಪ್ ನ್ನು ಬಂದ್ ಮಾಡಿ, ಚರಂಡಿಯ ಮೇಲ್ಬಾಗದಲ್ಲಿ ಹೊಸ ಲೈನ್ ಅಳವಡಿಸಲು ನಿರ್ಣಯಿಸಿ, ಕೆಲಸ ಆರಂಭಿಸಲಾಯಿತೆಂದು ತಿಳಿದುಬಂದಿದೆ.
“ನೀರು ದುರ್ವಾಸನೆಯ ಕುರಿತು ಮನೆಯವರು ತಿಳಿಸಿದ ಕೂಡಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ. ಇದೀಗ ಮೊದಲ ಪೈಪ್ ಸಮಸ್ಯೆ ಇದ್ದಲ್ಲಿಂದ ತುಂಡರಿಸಿದ, ಹೊಸ ಪೈಪ್ ಹಾಕುವ ಕೆಲಸ ನ.ಪಂ. ನಿಂದ ಅಧಿಕಾರಿಗಳಿದ್ದು ನಡೆಸಲಾಗಿದೆ”
-ರಿಯಾಜ್ ಕಟ್ಟೆಕಾರ್
ವಾರ್ಡ್ ಸದಸ್ಯರು
“ನೀರು ದುರ್ವಾಸನೆ ಬರುತಿತ್ತು. ಉಪಯೋಗಿಸಲು ಆಗುತಿರಲಿಲ್ಲ. ನಾವು ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಗಳಿಗೆ ವಾರ್ಡ್ ಸದಸ್ಯರಿದ್ದು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಮನವಿಗೆ ಸ್ಪಂದಿಸಿದ್ದಾರೆ. ಹೊಸ ಪೈಪ್ ಲೈನ್ ಕೆಲಸ ಮಾಡಿದ್ದಾರೆ”
-ಸತ್ಯಪ್ರಸಾದ್ ನಾಯಕ್ ಅಂಗಡಿಮಠ
ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದವರು