ಸುಳ್ಯದಲ್ಲಿ ಅಯೋಧ್ಯೆ ರಾಮ ಜನ್ಮಭೂಮಿಯ ಪವಿತ್ರ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮ

0

ಪ್ರತಿಯೊಬ್ಬನ ಹೆಸರಿನಲ್ಲಿ ರಾಮ ಎಂಬ ಎರಡಕ್ಷರ ಅಡಗಿದೆ, ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯು ಮಹಾ ಮಂತ್ರಾಕ್ಷತೆಯಾಗಿ ಪ್ರತಿ ಮನೆ ಮನವನ್ನು ಬೆಳಗಲಿದೆ- ಒಡಿಯೂರು ಶ್ರೀ

ಭಾರತ ದೇಶದ ಮೂಲ ಅಧ್ಯಾತ್ಮವಾಗಿದೆ. ಅಯೋಧ್ಯೆ ಎಂದರೆ ರಾಮ ,ರಾಮ ಎಂದರೆ ಅಯೋಧ್ಯೆ, ರಾಮ ತಾರಕ ಮಂತ್ರ ಎಂಬುದು ಅತ್ಯಂತ ಶ್ರೇಷ್ಠ ಮಂತ್ರವಾಗಿದೆ.


ಪ್ರತಿಯೊಬ್ಬನ ಹೆಸರಿನಲ್ಲಿ ರಾಮ ಎಂಬ ಎರಡಕ್ಷರ ಅಡಗಿದೆ. ನಮ್ಮಹೆಸರಿನ ಅಕ್ಷರಗಳನ್ನು ತಾಳೆ ಹಾಕಿದಾಗ ಬರುವ ಎರಡು ಅಕ್ಷರ ಅದು ರಾಮ ಎಂದಾಗಿರುವುದು.


ಸನಾತನ ಹಿಂದೂ ಧರ್ಮ ನಿತ್ಯ ನೂತನವಾಗಿದೆ ಎಂದು ಸುಳ್ಯದಲ್ಲಿ ನಡೆದ ಪವಿತ್ರ ಮಂತ್ರಾಕ್ಷತೆಯ ವಿತರಣಾ ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಯವರು ಹೇಳಿದರು.

ಅವರು ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಡಿ.5 ರಂದು ಜರುಗಿದ ಅಯೋಧ್ಯಾ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಪವಿತ್ರ ಮಂತ್ರಾಕ್ಷತೆಯ ವಿತರಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿಯಲ್ಲಿ ಮುಂದಿನ ಜನವರಿ ತಿಂಗಳ 22 ರಂದು
ಪ್ರಭು ಶ್ರೀ ರಾಮಚಂದ್ರ ಸ್ವಾಮಿಯ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದ್ದು ಪೂರ್ವ ಭಾವಿಯಾಗಿ ಪ್ರತಿಯೊಬ್ಬ ಹಿಂದೂ ಮನೆಗೆ ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಪವಿತ್ರ ಮಂತ್ರಾಕ್ಷತೆಯನ್ನು ತಲುಪಿಸಬೇಕು. ಇದು ಬರಿ ಮಂತ್ರಾಕ್ಷತೆಯಲ್ಲ ಮಹಾ ಮಂತ್ರಾಕ್ಷತೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದರ್ಶಿತ್ವದ ಚಿಂತನೆ ಇದೀಗ ಸಾಕಾರಗೊಳ್ಳುತ್ತಿದೆ.
ಪ್ರಧಾನಿಯವರಿಂದಾಗಿ ಭಾರತ ದೇಶ ವಿಶ್ವಗುರುವಾಗಿದೆ ಎಂದು ಸ್ವಾಮೀಜಿಯವರು ಉಲ್ಲೇಖಿಸಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಪ್ರಮುಖ್ ಚಂದ್ರಶೇಖರ ತಳೂರು,
ಪುತ್ತೂರು ಜಿಲ್ಲಾ ವಿ.ಹೆಚ್..ಪಿ ಕಾರ್ಯದರ್ಶಿ ನವೀನ್ ನೆರಿಯ ಉಪಸ್ಥಿತರಿದ್ದರು.
ನ.30 ರಂದು ಪುತ್ತೂರಿನಿಂದ ಬಂದಿರುವ ಮಂತ್ರಾಕ್ಷತೆಯ ಕಲಶವನ್ನು ಸುಳ್ಯ ಶ್ರೀ ರಾಮ ಭಜನಾ ಮಂದಿರದಲ್ಲಿ ಇರಿಸಿ ಪೂಜಿಸಲಾಗಿತ್ತು.
ಇಂದು ಪೂರ್ವಾಹ್ನ ಪೂರ್ಣ ಕುಂಭದೊಂದಿಗೆ ಕಲಾ ಮಂದಿರಕ್ಕೆ ಕರೆ ತರಲಾಯಿತು.


ಬಳಿಕ ಪುರೋಹಿತ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ಮಂತ್ರಾಕ್ಷತೆ ಗೆ ಪೂಜಾ ಕೈಂಕರ್ಯ ನೆರವೇರಿಸಿ ಸಾಮೂಹಿಕವಾಗಿ ರಾಮ ತಾರಕ ಮಂತ್ರ ಪಠಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಅಂಗಾರ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಎನ್.ಎ.ರಾಮಚಂದ್ರ, ವಿನಯ ಕುಮಾರ್ ಕಂದಡ್ಕ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ್ ನ.ಸೀತಾರಾಮ ರವರು ಮಂತ್ರಾಕ್ಷತೆ ತಲುಪಿಸುವ ಕುರಿತು ಕಾರ್ಯಕರ್ತರಿಗೆ ಮಾಹಿತಿ ಮಾರ್ಗದರ್ಶನ ನೀಡಿದರು.

ಕು.ರಂಜಿನಿ ಪ್ರಾರ್ಥಿಸಿದರು.
ವಿಶ್ವ ಹಿಂದೂ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಸೋಮಶೇಖರ ಪೈಕ ಸ್ವಾಗತಿಸಿದರು. ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಬೂತ್ ವಾರು ಸಮಿತಿ ಸದಸ್ಯರಿಗೆ ಪೂಜಿಸಲ್ಪಟ್ಟ ಪವಿತ್ರ ಮಂತ್ರಾಕ್ಷತೆಯ ಕುಂಭವನ್ನು ಸ್ವಾಮೀಜಿ ಹಸ್ತಾಂತರಿಸಿದರು.
ಇದರೊಂದಿಗೆ ಪ್ರತಿ ಮನೆಗೆ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಕರ ಪತ್ರ ಹಾಗೂ ಅಯೋಧ್ಯೆಯ ರಾಮ ಮಂದಿರದ ಭಾವಚಿತ್ರವನ್ನು ನೀಡಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಂಘ ಪರಿವಾರದವರು ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಮುಖಂಡರು ಮತ್ತು ಕಾರ್ಯಕರ್ತರು ಸಹಕರಿಸಿದರು.